ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನರ ಗಮನ ಸೆಳೆಯಲು ಅಸ್ಸಾಂ ಒಪ್ಪಂದದ ವಿಚಾರ ಪ್ರಸ್ತಾಪ: ಸಿಎಂ ವಿರುದ್ಧ ಕಾಂಗ್ರೆಸ್

Published : 18 ಸೆಪ್ಟೆಂಬರ್ 2024, 13:03 IST
Last Updated : 18 ಸೆಪ್ಟೆಂಬರ್ 2024, 13:03 IST
ಫಾಲೋ ಮಾಡಿ
Comments

ಗುವಾಹಟಿ: ತಮ್ಮ ಕುಟುಂಬದ ಭ್ರಷ್ಟಾಚಾರ ಪ್ರಕರಣಗಳ ಮೇಲೆ ನೆಟ್ಟಿರುವ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು 'ಅಸ್ಸಾಂ ಒಪ್ಪಂದ'ದ ಕುರಿತು ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ದೇವವ್ರತ ಸೈಕಿಯಾ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭೂಪೆನ್‌ ಕುಮಾರ್‌ ಬರೂಚ್‌ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಅಸ್ಸಾಂ ಒಪ್ಪಂದಕ್ಕೆ ಸಂಬಂಧಿಸಿದಂತೆ ನ್ಯಾ. ಬಿಪ್ಲವ್‌ ಕುಮಾರ್‌ ಶರ್ಮಾ ಸಮಿತಿ ಮಾಡಿರುವ 57 ಶಿಫಾರಸುಗಳನ್ನು ಜಾರಿಗೊಳಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಆದರೆ, ಶಿಫಾರಸುಗಳನ್ನು ಕಾರ್ಯರೂಪಕ್ಕೆ ತರಲು ಕೇಂದ್ರ ಸರ್ಕಾರಕ್ಕಷ್ಟೇ ಸಾಧ್ಯ ಎಂದಿದ್ದಾರೆ.

'ಜನರನ್ನು ಗೊಂದಲಕ್ಕೆ ಸಿಲುಕಿಸಿ 2026ರ ವಿಧಾನಸಭೆ ಚುನಾವಣೆಯನ್ನು ಸುಲಭವಾಗಿ ಎದುರಿಸಬೇಕು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಬಯಸುತ್ತಿದ್ದಾರೆ. ಅವರ ಕುಟುಂಬದವರು ನಡೆಸಿರುವ ಭ್ರಷ್ಟಾಚಾರ ಜನರ ತಲೆಯಲ್ಲಿರುವ ದೊಡ್ಡ ವಿಚಾರವಾಗಿದೆ. ತಮ್ಮ ಕುಟುಂಬದ ಮೇಲಿರುವ ಸಾರ್ವಜನಿಕರ ಗಮನವನ್ನು ಬೇರೆಡೆಗೆ ತಿರುಗಿಸುವುದಕ್ಕಾಗಿ ಬಿಸ್ವಾ ಅವರು ಅಸ್ಸಾಂ ಒಪ್ಪಂದದ ವಿಚಾರ ಪ್ರಸ್ತಾಪಿಸುತ್ತಿದ್ದಾರೆ' ಎಂದು ಬರೂಚ್‌ ಟೀಕಿಸಿದ್ದಾರೆ.

ಅಸ್ಸಾಂ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಮಿತಿಯು ಮಾಡಿರುವ ಎಲ್ಲ ಶಿಫಾರಸುಗಳನ್ನು ಕೇಂದ್ರ ಗೃಹ ಸಚಿವಾಲಯವಷ್ಟೇ ಜಾರಿಗೆ ತರಲು ಸಾಧ್ಯ. ಅದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದೂ ಹೇಳಿದ್ದಾರೆ.

'ಶಿಫಾರಸುಗಳನ್ನು ಹೇಗೆ ಜಾರಿಗೊಳಿಸಲಾಗುವುದು ಎಂಬುದನ್ನು ಸಾರ್ವಜನಿಕವಾಗಿ ಹೇಳುತ್ತಿಲ್ಲವೇಕೆ?' ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿರುವ ಬರೂಚ್‌,'ನ್ಯಾ. ಶರ್ಮಾ ಸಮಿತಿ ವರದಿ ಹಾಗೂ ಶಿಫಾರಸುಗಳನ್ನು ಒಪ್ಪಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಒಂದೇ ಒಂದು ಮಾತನ್ನೂ ಹೇಳಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ವರದಿಯನ್ನು ಗೃಹ ಸಚಿವ ಅಮಿತ್‌ ಶಾ ಅವರಿಗೆ ತಲುಪಿಸಬೇಕು. ಅದಕ್ಕಾಗಿ, ಅದನ್ನು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ನೀಡಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಹೇಳಿದ್ದೆ. ಆದರೆ, ಆ ಕಾರ್ಯ ಇನ್ನೂ ಆಗಿಲ್ಲ ಎಂದು ದೇವವ್ರತ ಕುಟುಕಿದ್ದಾರೆ.

ನ್ಯಾ. ಶರ್ಮಾ ಸಮಿತಿಯು 2020ರ ಫೆಬ್ರುವರಿ 25ರಂದೇ ಆಗಿನ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್‌ ಅವರಿಗೆ ವರದಿ ಸಲ್ಲಿಸಿದೆ.

ವಿದೇಶಿಗರ ವಿರುದ್ಧ ಆರು ವರ್ಷ ನಡೆದ ದೀರ್ಘ ಹಿಂಸಾಚಾರದ ಬಳಿಕ 1985ರಲ್ಲಿ ಅಸ್ಸಾಂ ಒಪ್ಪಂದ ಏರ್ಪಟ್ಟಿತ್ತು. ಒಪ್ಪಂದದ ಪ್ರಕಾರ, 1971ರ ಮಾರ್ಚ್‌ 25ರ ನಂತರ ರಾಜ್ಯಕ್ಕೆ ಬಂದಿರುವ ಎಲ್ಲ ವಿದೇಶಿಗರನ್ನು ಪತ್ತೆ ಹಚ್ಚಿ, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗುತ್ತದೆ. ನಂತರ ಗಡಿಪಾರು ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT