ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೃತ IAS ಆಕಾಂಕ್ಷಿಗಳ ಕುಟುಂಬಗಳಿಗೆ ₹10 ಲಕ್ಷ ನೀಡಲು ಮುಂದಾದ ಕೋಚಿಂಗ್ ಕೇಂದ್ರಗಳು

Published : 2 ಆಗಸ್ಟ್ 2024, 14:14 IST
Last Updated : 2 ಆಗಸ್ಟ್ 2024, 14:14 IST
ಫಾಲೋ ಮಾಡಿ
Comments

ನವದೆಹಲಿ: ಕೋಚಿಂಗ್ ಕೇಂದ್ರದೊಳಗೆ ಮಳೆ ನೀರು ನುಗ್ಗಿ ಮೂವರು ಲೋಕಸೇವಾ ಆಯೋಗದ ಹುದ್ದೆಯ ಆಕಾಂಕ್ಷಿಗಳ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಮೃತ ಕುಟುಂಬಗಳಿಗೆ ನಾಲ್ಕು ಕೋಚಿಂಗ್ ಕೇಂದ್ರಗಳು ತಲಾ ₹10 ಲಕ್ಷ ನೀಡಲು ಮುಂದಾಗಿವೆ.

ಓಲ್ಡ್ ರಾಜೇಂದ್ರ ನಗರದಲ್ಲಿ ಜುಲೈ 27ರಂದು ಸಂಭವಿಸಿದ ಘಟನೆಯಲ್ಲಿ ಶ್ರೇಯಾ ಯಾದವ್, ತಾನ್ಯಾ ಸೋನಿ ಹಾಗೂ ನವೀನ ಡಾಲ್ವಿನ್ ಎಂಬುವವರು ಮೃತಪಟ್ಟಿದ್ದರು. ಇವರ ಕುಟುಂಬಗಳಿಗೆ ವಾಜಿರಾಂ ಆ್ಯಂಡ್ ರವಿ, ದೃಷ್ಟಿ ಐಎಎಸ್, ನೆಕ್ಸ್ಟ್‌ ಐಎಎಸ್‌ ಹಾಗೂ ಶ್ರೀರಾಮ್ಸ್‌ ಐಎಎಸ್ ಕೇಂದ್ರಗಳು ಪರಿಹಾರ ನೀಡುವುದಾಗಿ ಘೋಷಿಸಿವೆ. ಇವರೊಂದಿಗೆ ಜುಲೈ 22ರಂದು ವಿದ್ಯುತ್ ಆಘಾತದಿಂದ ಮೃತಪಟ್ಟ ಮತ್ತೊಬ್ಬ ಆಕಾಂಕ್ಷಿ ನೀಲೇಶ್ ರಾಯ್ ಅವರ ಕುಟುಂಬಕ್ಕೆ ದೃಷ್ಟಿ ಐಎಎಸ್ ಹಾಗೂ ಶ್ರೀರಾಮ್ಸ್‌ ಐಎಎಸ್ ₹10 ಲಕ್ಷ ನೀಡುವುದಾಗಿ ಹೇಳಿವೆ.

ಆಕಾಂಕ್ಷಿಗಳ ಸಾವಿನ ನಂತರ ಎಲ್ಲಾ ಕೋಚಿಂಗ್ ಕೇಂದ್ರಗಳಲ್ಲಿ ಕಲಿಯುತ್ತಿರುವವರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಹಾರ ಘೋಷಣೆ ಕೇವಲ ಗಿಮಿಕ್‌ ಮತ್ತು ಪ್ರಕರಣದ ದಿಕ್ಕನ್ನು ಬೇರೆಡೆ ತಿರುಗಿಸುವ ಯತ್ನ ಎಂದು ಆರೋಪಿಸಿದ್ದಾರೆ. ಜತೆಗೆ ಈ ಪ್ರದೇಶದಲ್ಲಿ  ನೆಲಮಾಳಿಗೆಯಲ್ಲಿ ಕಾರ್ಯನಿರ್ವಹಿಸುವ ಕೋಚಿಂಗ್ ಕೇಂದ್ರಗಳನ್ನು ಮುಚ್ಚಲು ಒತ್ತಾಯಿಸಿದ್ದರು.

ಈ ಕುರಿತಂತೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ವಾಜಿರಾಂ ಆ್ಯಂಡ್ ರವಿ, ‘ರಾವ್ಸ್‌ ಐಎಎಸ್‌ ಸ್ಟಡಿ ಸರ್ಕಲ್‌ನಲ್ಲಿ ದಾಖಲಾಗಿದ್ದ ಹಾಗೂ 2024ರ ಮುಖ್ಯ ಪರೀಕ್ಷೆ ಮತ್ತು 2025ರ ಪ್ರಿಲಿಮ್ಸ್‌ಗೆ ಸಿದ್ಧತೆ ನಡೆಸುತ್ತಿರುವ ಆಕಾಂಕ್ಷಿಗಳು ಬಯಸಿದಲ್ಲಿ ಉಚಿತವಾಗಿ ಮಾರ್ಗದರ್ಶನವನ್ನು ನಮ್ಮ ಕೇಂದ್ರದಲ್ಲಿ ನೀಡಲಾಗುವುದು. ಮೃತರ ಕುಟುಂಬಗಳೊಂದಿಗೆ ನಾವಿದ್ದೇವೆ. ಅವರ ಕುಟುಂಬಗಳಿಗೆ ತಲಾ ₹10ಲಕ್ಷ ನೀಡಲಾಗುವುದು’ ಎಂದಿದ್ದಾರೆ.

‘ಘಟನೆ ನಂತರ ರಾವ್ಸ್ ಐಎಎಸ್ ಸಂಸ್ಥೆಯಲ್ಲಿ ಕಲಿಯುತ್ತಿದ್ದವರ ಕಲಿಕೆ ಮೊಟಕುಗೊಂಡಂತಾಗಿದೆ. ಹೀಗಾಗಿ ಅಲ್ಲಿ ಬಾಕಿ ಉಳಿದ ಭಾಗಗಳನ್ನು ಕಲಿಸಲು ನಾವು ಸಿದ್ಧರಿದ್ದೇವೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಆಕಾಂಕ್ಷಿಗಳಿಗೆ ನೆರವಾಗುವುದು ಹಾಗೂ ಅವರಿಂದ ಯಾವುದೇ ಶುಲ್ಕ ಪಡೆಯದೇ ಬಾಕಿ ಉಳಿದ ಪಾಠವನ್ನು ಹೇಳುವುದಷ್ಟೇ ನಮ್ಮ ಉದ್ದೇಶ. ಇಂಥ ಅಭ್ಯರ್ಥಿಗಳು ಆ. 5ರ ನಂತರ ನಮ್ಮ ಕೇಂದ್ರವನ್ನು ಸಂಪರ್ಕಿಸಬಹುದು’ ಎಂದಿದ್ದಾರೆ.

ದೃಷ್ಟಿ ಐಎಎಸ್ ಕೂಡಾ ಪ್ರತಿಕ್ರಿಯಿಸಿ, ‘ನಾವು ನೀಡುವ ಪರಿಹಾರ ಮೊತ್ತದಿಂದ ಕಳೆದುಕೊಂಡ ಮಕ್ಕಳನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂಬುದರ ಅರಿವು ನಮಗಿದೆ. ಆದರೆ ಇಂಥ ದುಃಖದ ಸಂದರ್ಭದಲ್ಲಿ ಅವರೊಂದಿಗೆ ನಿಲ್ಲುವ ಒಂದು ಸಣ್ಣ ಪ್ರಯತ್ನವಷ್ಟೇ. ಹಾಗೆಯೇ ರಾವ್ಸ್‌ ಐಎಎಸ್‌ನ ವಿದ್ಯಾರ್ಥಿಗಳಿಗೆ ಅಗತ್ಯ ತರಗತಿಗಳನ್ನು ನಡೆಸಲು ನಾವು ಸಿದ್ಧ’ ಎಂದಿದೆ.

ಪ್ರತಿಭಟನಾ ನಿರತರು ಇದೊಂದು ಗಿಮಿಕ್ ಎಂದು ಆರೋಪಿಸಿದ್ದಾರೆ. ‘ಕೋಚಿಂಗ್ ಮಾಫಿಯಾದವರು ಗುರುವಾರ ಸಭೆ ನಡೆಸಿದ್ದಾರೆ. ಮೃತ ಕುಟುಂಬಗಳಿಗೆ ಪರಿಹಾರ ನೀಡುವ ಹಾಗೂ ಉಚಿತ ತರಗತಿ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ. ಆದರೆ ಇವೆಲ್ಲವೂ ತಮ್ಮ ವ್ಯವಹಾರ ಉಳಿಸಿಕೊಳ್ಳುವ ತಂತ್ರಗಳಷ್ಟೇ’ ಎಂದಿದ್ದಾರೆ.

ಇನ್ನೂ ಕೆಲವರು ಕೋಚಿಂಗ್ ಕೇಂದ್ರಗಳ ಆಶ್ವಾಸನೆಯನ್ನು ಸ್ವಾಗತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT