ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಧ್ಯಪ್ರದೇಶ | ಕಾಂಗ್ರೆಸ್‌ಗೆ 100 ವರ್ಷ ಅಧಿಕಾರ ಕೊಡಬೇಡಿ: ಪ್ರಧಾನಿ ಮೋದಿ

ಮಧ್ಯಪ್ರದೇಶದ ರ್‍ಯಾಲಿಯಲ್ಲಿ ಮತದಾರರಿಗೆ ಪ್ರಧಾನಿ ಮೋದಿ ಕರೆ
Published : 9 ನವೆಂಬರ್ 2023, 10:45 IST
Last Updated : 9 ನವೆಂಬರ್ 2023, 10:45 IST
ಫಾಲೋ ಮಾಡಿ
Comments

ಛತರ್‌ಪುರ (ಮಧ್ಯಪ್ರದೇಶ): ಕಾಂಗ್ರೆಸ್‌ ಪಕ್ಷವು ದೇಶದ ಪ್ರಗತಿಯನ್ನು ಹಿಮ್ಮುಖವಾಗಿ ಕೊಂಡೊಯ್ಯುವಲ್ಲಿ ಪರಿಣತಿ ಪಡೆದಿದೆ. ಹಾಗಾಗಿ  ಕನಿಷ್ಠ ನೂರು ವರ್ಷಗಳವರೆಗೆ ಆ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಮತದಾರರಲ್ಲಿ ಮನವಿ ಮಾಡಿದರು.

ರ್‍ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಬಲೆಗೆ ಜನರು ಬೀಳಬಾರದು. ‘ವಾಹನವು ನಮ್ಮನ್ನು ರಿವರ್ಸ್‌ ಗೇರ್‌ನಲ್ಲಿ ಹಿಮ್ಮುಖವಾಗಿ ಕೊಂಡೊಯ್ಯುವಂತೆ ಕಾಂಗ್ರೆಸ್‌ ಕೂಡ ಉತ್ತಮ ಆಡಳಿತವನ್ನು ಕೆಟ್ಟ ಆಡಳಿತವಾಗಿ ಪರಿವರ್ತಿಸಿ ದೇಶದ ಪ್ರಗತಿಯನ್ನು ಹಿಮ್ಮುಖವಾಗಿ ಕೊಂಡೊಯ್ಯಬಲ್ಲದು’ ಎಂದು ಎಚ್ಚರಿಸಿದರು.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ, ಬುಂದೇಲ್‌ಖಂಡದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಏನನ್ನೂ ಮಾಡಲಿಲ್ಲ. ಇದೇ ಪ್ರದೇಶ 100 ವರ್ಷಗಳ ಹಿಂದೆ ಅನೇಕ ನೀರಿನ ಒರತೆಗಳನ್ನು ಹೊಂದಿತ್ತು. ಈಗ ಜನರು ಹನಿ ನೀರಿಗೆ ಹಾತೊರೆಯುವಂತೆ ಆಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಪಕ್ಷವನ್ನು ನೂರು ವರ್ಷಗಳವರೆಗೆ ಅಧಿಕಾರಕ್ಕೆ ತರದೆ ಆ ಪಕ್ಷವೂ ಅಧಿಕಾರಕ್ಕೆ ಹಾತೊರೆಯುವಂತೆ ಮಾಡಬೇಕು. ಆಗ ಅದು ಸುಧಾರಣೆ ಆಗಬಹುದು ಎಂದರು.

ಕಾಂಗ್ರೆಸ್‌ಗೆ ದೇಶದ ಬಗ್ಗೆ ಯೋಚನೆಯಿಲ್ಲ. ಸ್ವಹಿತವೇ ಮುಖ್ಯವಾಗಿದೆ. ದೇಶದ ಅಭಿವೃದ್ಧಿಗೆ ಆ ಪಕ್ಷ ಏನನ್ನೂ ಮಾಡಿಲ್ಲ ಎಂದು ಆರೋಪಿಸಿದ ಅವರು, ಕಾಂಗ್ರೆಸ್‌ ನಾಯಕರು ಬೆಳ್ಳಿ ಚಮಚವನ್ನು ಬಾಯಲ್ಲಿಟ್ಟುಕೊಂಡು ಜನಿಸಿದ್ದಾರೆ. ಅವರಿಗೆ ಬಡತನವನ್ನು ಹಾಸ್ಯ ಮಾಡುವುದೇ ಸಾಹಸ ಪ್ರವಾಸೋದ್ಯಮ ಆಗಿದೆ ಎಂದು ಅಣಕವಾಡಿದರು.

ಕಾಂಗ್ರೆಸ್‌ಗೆ ಇಡೀ ದೇಶ ದೆಹಲಿಯಲ್ಲಿ ಆರಂಭವಾಗಿ ದೆಹಲಿಯಲ್ಲೇ ಕೊನೆಗೊಳ್ಳುತ್ತದೆ. ಆ ಪಕ್ಷದ ನಾಯಕರು ತಮ್ಮ ವಿದೇಶಿ ಸ್ನೇಹಿತರನ್ನು ದೆಹಲಿಯಿಂದ ಹೊರಗೆ ಕರೆದೊಯ್ಯುವಾಗ ಕೊಳಚೆ ಪ್ರದೇಶದಲ್ಲಿನ ಬಡತನವನ್ನು ಮಾತ್ರ ತೋರಿಸುತ್ತಾರೆ ಮತ್ತು ಅಲ್ಲಿ ಅವರ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ ಎಂದು ಟೀಕಿಸಿದರು.

ಆದರೆ ಇಂದು ಮೋದಿ ಬಡವರಿಗೆ ಮನೆಗಳನ್ನು ಒದಗಿಸಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT