ನವದೆಹಲಿ: ‘ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜೊತೆಗೆ ಅದಾನಿ ಸಮೂಹವು ನಡೆಸಿದೆ ಎನ್ನಲಾದ ಅಕ್ರಮ ಸಂಬಂಧ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಿ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಗುರುವಾರ ದೇಶದಾದ್ಯಂತ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್‌ನ ದೆಹಲಿ ಘಟಕವು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿತು. ದೆಹಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ ದೇವೇಂದ್ರ ಯಾದವ್, ಹಿರಿಯ ನಾಯಕ ಸಚಿನ್ ಪೈಟಲ್, ಮುಖಂಡ ಕನ್ಹಯ್ಯ ಕುಮಾರ್, ಉದಿತ್ ರಾಜ್ ಸೇರಿ ಇತರರು ಭಾಗವಹಿಸಿದ್ದರು.
‘ಅದಾನಿ ಸಮೂಹ ನಡೆಸಿದ ಅಕ್ರಮ ಹಾಗೂ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಅವರ ಕುರಿತು ಹಿಂಡೆನ್‌ಬರ್ಗ್ ಸಂಸ್ಥೆ ನೀಡಿದ ವರದಿಗಳು, ಅದರಲ್ಲಿನ ಆರೋಪಗಳ ಕುರಿತು ನಮಗೆ ಸ್ಪಷ್ಟತೆಬೇಕು. ನೀವು ತಪ್ಪು ಮಾಡಿಲ್ಲ ಎಂದಾದಮೇಲೆ, ಜೆಪಿಸಿಯನ್ನು ಏಕೆ ರಚಿಸುತ್ತಿಲ್ಲ. ಸರ್ಕಾರ ಈ ಕುರಿತು ಪಾರದರ್ಶಕವಾಗಿ ನಡೆದುಕೊಳ್ಳಬೇಕು’ ಎಂದು ಸಚಿನ್ ಪೈಲಟ್ ಹೇಳಿದರು.