ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ: ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Published 6 ಮೇ 2024, 14:45 IST
Last Updated 6 ಮೇ 2024, 14:45 IST
ಅಕ್ಷರ ಗಾತ್ರ

ನವದೆಹಲಿ: ‘ನೀಟ್’ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂಬ ಸುದ್ದಿಗೆ ಸಂಬಂಧಿಸಿ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಪಕ್ಷ, ‘ಕಳೆದ ಹತ್ತು ವರ್ಷಗಳಿಂದ ಇಂತದೇ ಸ್ಥಿತಿ ಇದೆ. ಇದರಿಂದ ಅಸಂಖ್ಯ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ’ ಎಂದು ಟೀಕಿಸಿದೆ.

ಯುವಜನರ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣದಿಂದಲೇ ಈಗ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿಯೂ ಉದ್ಯೋಗ ನೇಮಕಾತಿಯಲ್ಲಿ ಭ್ರಷ್ಟಾಚಾರ ಹಾಗೂ ನಿರುದ್ಯೋಗ ಸಮಸ್ಯೆ ಅಂಶಗಳೇ ಪ್ರಮುಖ ವಿಷಯಗಳಾಗಿವೆ ಎಂದು ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯು ಸುಮಾರು 23 ಲಕ್ಷ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಮಾಡಲಾದ ‘ವಂಚನೆ’ ಎಂದು ಟೀಕಿಸಿದ್ದಾರೆ.

ಎಕ್ಸ್ ವೇದಿಕೆಯಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ‘ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಕನಸಿರಲಿ ಅಥವಾ ಸರ್ಕಾರಿ ಉದ್ಯೋಗ ಪಡೆಯಲು ಯುವಜನರ ಹೋರಾಟವಿರಲಿ, ಆಕಾಂಕ್ಷಿಗಳಿಗೆ ಮೋದಿ ಸರ್ಕಾರ ಒಂದು ರೀತಿ ಶಾಪವಾಗಿದೆ’ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಅವರು, ‘ನೀಟ್‌ ಪ್ರಶ್ನೆಪತ್ರಿಕೆಗಳ ಸೋರಿಕೆ ಆಗಿರುವುದು ಬಿಹಾರದಲ್ಲಿ ಬಯಲಾಗಿದೆ. ರಾಜಸ್ಥಾನದಲ್ಲಿ ಕೆಲ ಕೇಂದ್ರಗಳಲ್ಲಿ ಬೇರೆಯದೇ ಪ್ರಶ್ನೆಪತ್ರಿಕೆಯನ್ನು ವಿತರಿಸಿರುವ ದೂರುಗಳಿವೆ’ ಎಂದು ತಿಳಿಸಿದ್ದಾರೆ.

ಕಳೆದ ಏಳು ವರ್ಷಗಳಲ್ಲಿ ಸುಮಾರು 70 ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಇದರಿಂದಾಗಿ 2 ಕೋಟಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಹಲವು ರಾಜ್ಯಗಳಲ್ಲಿ ಸೋರಿಕೆಯನ್ನು ತಡೆಯಲು ಕಾಯ್ದೆಗಳಿದ್ದರೂ, ಇಂಥ ಪ್ರಕರಣಗಳು ನಡೆಯುತ್ತಲೇ ಇವೆ’ ಎಂದು ಹೇಳಿದ್ದಾರೆ.

ಆಧಾರರಹಿತ: ಎನ್‌ಟಿಎ ಸ್ಪಷ್ಟನೆ 
‘ನೀಟ್–ಯುಜಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂಬ ವರದಿ ಸಂಪೂರ್ಣ ಆಧಾರರಹಿತ’ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸೋಮವಾರ ಸ್ಪಷ್ಟಪಡಿಸಿದೆ. ‘ಸೋರಿಕೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಆಗುತ್ತಿರುವ ಪ್ರಶ್ನೆಪತ್ರಿಕೆಗೂ ವಾಸ್ತವ ಪ್ರಶ್ನೆಪತ್ರಿಕೆಗೂ ಯಾವುದೇ ರೀತಿಯ ಸಾಮ್ಯತೆ ಇಲ್ಲ’ ಎಂದು ಎನ್‌ಟಿಎ ಹೇಳಿದೆ. ಎನ್‌ಟಿಎ ಸುರಕ್ಷತೆ ವ್ಯವಸ್ಥೆ ಸಾಮಾನ್ಯ ನಿರ್ವಹಣಾ ಪ್ರಕ್ರಿಯೆಯನ್ನು ಪರಿಶೀಲಿಸಿದ್ದು ಪ್ರಶ್ನೆಪತ್ರಿಕೆ ಸೋರಿಕೆ ವರದಿ ಆಧಾರರಹಿತ ಎಂಬುದು ದೃಢಪಟ್ಟಿದೆ ಎಂದು ಎನ್‌ಟಿಎ ಹಿರಿಯ ನಿರ್ದೇಶಕ ಸಾಧನಾ ಪರಾಶರ್ ಪ್ರತಿಕ್ರಿಯಿಸಿದ್ದಾರೆ.  ಪರೀಕ್ಷೆಯು ಒಮ್ಮೆ ಆರಂಭವಾದ ನಂತರ ಪರೀಕ್ಷಾ ಕೇಂದ್ರಗಳಿಗೆ ಹೊರಗಿನ ಯಾವುದೇ ವ್ಯಕ್ತಿಗೆ ಪ್ರವೇಶ ಇರುವುದಿಲ್ಲ ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT