ಬೆಂಗಳೂರು: ಭಾರತದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯನ್ನು ಕೇಂದ್ರ ಸರ್ಕಾರ ಚುನಾವಣಾ ಪ್ರಚಾರಕ್ಕೆ ಹಾಗೂ ಜನರ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.
ಜಿ20 ಗುಂಪಿನ ರಾಷ್ಟ್ರಗಳ ನಾಯಕರ ಶೃಂಗಸಭೆಯು ಭಾರತದ ಅಧ್ಯಕ್ಷತೆಯಲ್ಲಿ ನವದೆಹಲಿಯ ಪ್ರಗತಿ ಮೈದಾನದಲ್ಲಿರುವ 'ಭಾರತ್ ಮಂಟಪಂ' (ಅಂತರರಾಷ್ಟ್ರೀಯ ಪ್ರದರ್ಶನ ಮತ್ತು ಕನ್ವೆನ್ಷನ್ ಸೆಂಟರ್)ನಲ್ಲಿ ಸೆಪ್ಟೆಂಬರ್ 9–10ರಂದು ನಡೆಯಲಿದೆ.
ಸಮಾವೇಶದ ಕುರಿತು ಎಕ್ಸ್ (ಟ್ವಿಟರ್) ವೇದಿಕೆಯಲ್ಲಿ ಹಿಂದಿಯಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ಜಿ20 ಗುಂಪನ್ನು 1999ರಲ್ಲಿ ರಚಿಸಲಾಯಿತು. ಅದು ರಚನೆಯಾದಾಗಿನಿಂದ 17 ರಾಷ್ಟ್ರಗಳಲ್ಲಿ ಶೃಂಗಸಭೆ ನಡೆದಿದೆ. ಇದೀಗ ಭಾರತದ ಸರದಿ ಬಂದಿದೆ. ಆದರೆ, ಸಮಾವೇಶವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಮತ್ತು ಅದರ ಸುತ್ತಲೂ ಚುನಾವಣಾ ವಾತಾವರಣವನ್ನು ಸೃಷ್ಟಿಸಲು ಇಲ್ಲಿ (ಭಾರತದಲ್ಲಿ) ಪ್ರಯತ್ನ ನಡೆಯುತ್ತಿರುವಂತೆ ಬೇರೆ ಯಾವ ದೇಶದಲ್ಲೂ ನಡೆದಿಲ್ಲ. ಕೇಂದ್ರ ಸರ್ಕಾರವು ಹೀಗೆ ಮಾಡುತ್ತಿರುವುದು ಜನರ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸುವುದಕ್ಕಾಗಿ' ಎಂದು ಟೀಕಿಸಿದ್ದಾರೆ.
1983ರಲ್ಲಿ 100 ರಾಷ್ಟ್ರಗಳನ್ನೊಳಗೊಂಡ ಅಲಿಪ್ತ ಸಮಾವೇಶವನ್ನು ಭಾರತ ಯಶಸ್ವಿಯಾಗಿ ಆಯೋಜಿಸಿತ್ತು. ನಂತರ ಕಾಮ್‌ವೆಲ್ತ್ ರಾಷ್ಟ್ರಗಳ ಸಮಾವೇಶವನ್ನು ನವದೆಹಲಿಯಲ್ಲಿ ಆಯೋಜಿಸಿತ್ತು. ಆದರೆ, ಆಗ ಚುನಾವಣಾ ಲಾಭಕ್ಕಾಗಿ ಆ ಸಮಾವೇಶಗಳನ್ನು ಬಳಸಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
'ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಈ ಹಿಂದೆ ನೀಡಿದ್ದ ಹೇಳಿಕೆ ನೆನಪಾಗುತ್ತಿದೆ. ಅವರು ನರೇಂದ್ರ ಮೋದಿ ಅತ್ಯುತ್ತಮ 'ಕಾರ್ಯಕ್ರಮ ಆಯೋಜಕ' ಎಂದು 2014ರ ಏಪ್ರಿಲ್ 5ರಂದು ಹೇಳಿದ್ದರು. ಪ್ರಧಾನಿ ಮೋದಿ ಅವರು ಸಾರ್ವಜನಿಕರ ಗಮನವನ್ನು ಬೇರೆಡೆ ತಿರುಗಿಸಲು ಈಗಲೂ 'ಕಾರ್ಯಕ್ರಮ ಆಯೋಜನೆ'ಯನ್ನೇ ಮಾಡುತ್ತಿದ್ದಾರೆ' ಎಂದು ಕುಟುಕಿದ್ದಾರೆ.
ಜಿ20 ಸದಸ್ಯ ರಾಷ್ಟ್ರಗಳು ಜಾಗತಿಕ ಜಿಡಿಪಿ ಹಾಗೂ ವ್ಯಾಪಾರ ವಹಿವಾಟಿನಲ್ಲಿ ಕ್ರಮವಾಗಿ ಶೇ 85ರಷ್ಟು ಮತ್ತು ಶೇ 75ಕ್ಕಿಂತಲೂ ಹೆಚ್ಚಿನ ಪಾಲು ಹೊಂದಿವೆ. ಅಲ್ಲದೆ, ಜಗತ್ತಿನ ಮೂರನೇ ಎರಡರಷ್ಟು ಜನಸಂಖ್ಯೆಯನ್ನೂ ಹೊಂದಿವೆ.
ಭಾರತ, ಆರ್ಜೆಂಟಿನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೊನೇಷ್ಯಾ, ಇಟಲಿ, ಜಪಾನ್, ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಇಂಗ್ಲೆಂಡ್, ಯುಎಸ್ ಮತ್ತು ಯುರೋಪಿಯನ್ ಒಕ್ಕೂಟ ಜಿ20 ಗುಂಪಿನಲ್ಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.