ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: 539 ಸ್ಥಾನಗಳಿಗೆ ಸಂಯೋಜಕರನ್ನು ನೇಮಿಸಿದ ಕಾಂಗ್ರೆಸ್‌

Published 8 ಜನವರಿ 2024, 2:35 IST
Last Updated 8 ಜನವರಿ 2024, 2:35 IST
ಅಕ್ಷರ ಗಾತ್ರ

‌ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಸಿದ್ಧತೆ ಭರದಿಂದ ಸಾಗಿವೆ. ಕಾಂಗ್ರೆಸ್ 539 ಲೋಕಸಭಾ ಕ್ಷೇತ್ರಗಳಿಗೆ ಸಂಯೋಜಕರ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.

ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ‘ಕಾಂಗ್ರೆಸ್ ಪಕ್ಷ 539 ಸಂಸದೀಯ ಕ್ಷೇತ್ರಗಳನ್ನು ಒಳಗೊಂಡಿರುವ ಸಂಯೋಜಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನೂ 4 ಕ್ಷೇತ್ರಗಳ ಸಂಯೋಜಕ ಪಟ್ಟಿ ಶೀಘ್ರದಲ್ಲೇ ಬರಲಿದೆ. ನಾವು ಸಿದ್ಧರಿದ್ದೇವೆ. ಭಾರತ ಬದಲಾಗಲಿದೆ. ಇಂಡಿಯಾ ಕೂಟ ಗೆಲ್ಲುತ್ತದೆ' ಎಂದು ಪೋಸ್ಟ್‌ ಮಾಡಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷವು ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸುತ್ತದೆ. ಆದರೆ 500ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷವು ತನ್ನ ವೀಕ್ಷಕರನ್ನು ಅಂತಿಮಗೊಳಿಸಿದೆ ಎಂದು ಹೇಳಿದ್ದರು.

ಅಲ್ಲದೇ ಇಂಡಿಯಾ ಕೂಟದ ನಾಯಕರೊಂದಿಗೆ ಮಾತುಕತೆ ನಡೆಸಿದ ನಂತರ ನಿಖರವಾದ ಸ್ಥಾನಗಳ ಸಂಖ್ಯೆ ತಿಳಿಯಲಿದೆ ಎಂದು ಅವರು ಹೇಳಿದ್ದರು.

‘539 ಲೋಕಸಭಾ ಸ್ಥಾನಗಳ ಸಂಯೋಜಕರ ಪಟ್ಟಿಯೊಂದಿಗೆ, ಮುಂಬರುವ ಸಾರ್ವತ್ರಿಕ ಚುನಾವಣೆಗೆ ಸಂಸದೀಯ ಕ್ಷೇತ್ರವಾರು ಸಂಯೋಜಕರ ನೇಮಕದ ಪ್ರಸ್ತಾವನೆಗೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಅನುಮೋದನೆ ನೀಡಿದ್ದಾರೆ' ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.

ಪಂಜಾಬ್ ಮತ್ತು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಸೀಟು ಹಂಚಿಕೆ ವಿಚಾಋವಾಗಿ ಔಪಚಾರಿಕ ಮಾತುಕತೆಗಳು ಸೋಮವಾರ ಪ್ರಾರಂಭವಾಗಲಿವೆ. ಅಲ್ಲದೇ ಕೆಲವು ಪಕ್ಷಗಳೊಂದಿಗೆ ಮಾತುಕತೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಕುಲ್ ವಾಸ್ನಿಕ್ ಸಂಚಾಲಕರಾಗಿ, ಹಿರಿಯ ನಾಯಕರಾದ ಅಶೋಕ್ ಗೆಹಲೋತ್‌ ಮತ್ತು ಭೂಪೇಶ್ ಬಾಘೇಲ್ ಅವರನ್ನು ಒಳಗೊಂಡಿರುವ ಸೀಟು ಹಂಚಿಕೆ ಕುರಿತ ಕಾಂಗ್ರೆಸ್‌ನ ಐವರು ಸದಸ್ಯರ ಸಮಿತಿಯು ಈಗಾಗಲೇ ರಾಜ್ಯ ಕಾಂಗ್ರೆಸ್ ಮುಖ್ಯಸ್ಥರೊಂದಿಗೆ ಆಂತರಿಕ ಸಮಾಲೋಚನೆ ನಡೆಸಿದೆ. ಹಾಗೂ ಅದರ ವರದಿಗಳನ್ನು ಪಕ್ಷದ ಅಧ್ಯಕ್ಷ ಖರ್ಗೆ ಅವರಿಗೆ ಹಸ್ತಾಂತರಿಸಿದೆ.

ಕರ್ನಾಟಕದ 28 ಕ್ಷೇತ್ರಗಳಿಗೆ ‌ಸಂಯೋಜಕರ ನೇಮಕ:

ಮುಂಬರುವ ಲೋಕಸಭೆ ಚುನಾವಣೆಗೆ ಸಚಿವರನ್ನು ರಾಜ್ಯದ ಎಲ್ಲ 28 ಕ್ಷೇತ್ರಗಳಿಗೆ ಪಕ್ಷದ ಸಂಯೋಜಕರನ್ನಾಗಿ ಎಐಸಿಸಿ ನೇಮಿಸಿದೆ. ಸಂಯೋಜಕರ ನೇಮಕಾತಿ ಪ್ರಸ್ತಾವಕ್ಕೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದನೆ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಯಾ ಜಿಲ್ಲೆಯನ್ನು ಒಳಗೊಂಡ ಕ್ಷೇತ್ರದ ಹೊಣೆಯನ್ನು ನೀಡಲಾಗಿದೆ.

ಸಂಯೋಜಕರು:

ಚಿಕ್ಕೋಡಿ– ಎಚ್‌.ಕೆ. ಪಾಟೀಲ, ಬೆಳಗಾವಿ– ಸತೀಶ ಜಾರಕಿಹೊಳಿ, ಬಾಗಲಕೋಟೆ– ಆರ್‌.ಬಿ. ತಿಮ್ಮಾಪುರ, ವಿಜಯಪುರ– ಎಂ.ಬಿ. ಪಾಟೀಲ, ಕಲಬುರಗಿ– ಪ್ರಿಯಾಂಕ್‌ ಖರ್ಗೆ, ರಾಯಚೂರು– ಎನ್.ಎಸ್‌. ಬೋಸರಾಜು, ಬೀದರ್‌– ಈಶ್ವರ ಖಂಡ್ರೆ, ಕೊಪ್ಪಳ– ಶಿವರಾಜ ತಂಗಡಗಿ, ಬಳ್ಳಾರಿ– ಬಿ. ನಾಗೇಂದ್ರ, ಹಾವೇರಿ– ಶಿವಾನಂದ ಪಾಟೀಲ, ಧಾರವಾಡ– ಸಂತೋಷ್‌ ಲಾಡ್‌, ಉತ್ತರಕನ್ನಡ– ಮಂಕಾಳ ವೈದ್ಯ, ದಾವಣಗೆರೆ– ಎಸ್‌.ಎಸ್‌. ಮಲ್ಲಿಕಾರ್ಜುನ, ಶಿವಮೊಗ್ಗ– ಮಧುಬಂಗಾರಪ್ಪ, ಉಡುಪಿ– ಚಿಕ್ಕಮಗಳೂರು– ಕೆ.ಜೆ. ಜಾರ್ಜ್, ಹಾಸನ– ಕೆ.ಎನ್‌. ರಾಜಣ್ಣ, ದಕ್ಷಿಣಕನ್ನಡ– ದಿನೇಶ್‌ ಗುಂಡೂರಾವ್‌, ಚಿತ್ರದುರ್ಗ– ಡಿ. ಸುಧಾಕರ್‌, ಚಿಕ್ಕಬಳ್ಳಾಪುರ– ಕೆ.ಎಚ್‌. ಮುನಿಯಪ್ಪ, ತುಮಕೂರು–ಜಿ. ಪರಮೇಶ್ವರ, ಮಂಡ್ಯ– ಎನ್‌. ಚಲುವರಾಯಸ್ವಾಮಿ, ಮೈಸೂರು– ಕೆ. ವೆಂಕಟೇಶ್‌, ಚಾಮರಾಜನಗರ– ಎಚ್‌.ಸಿ. ಮಹದೇವಪ್ಪ, ಬೆಂಗಳೂರು ಗ್ರಾಮಾಂತರ– ಬೈರತಿ ಸುರೇಶ್‌, ಬೆಂಗಳೂರು ಉತ್ತರ– ಕೃಷ್ಣ ಬೈರೇಗೌಡ, ಬೆಂಗಳೂರು ಕೇಂದ್ರ– ಜಮೀರ್‌ ಅಹಮದ್‌ ಖಾನ್‌, ಬೆಂಗಳೂರು ದಕ್ಷಿಣ– ರಾಮಲಿಂಗಾರೆಡ್ಡಿ, ಕೋಲಾರ– ಡಾ.ಎಂ.ಸಿ. ಸುಧಾಕರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT