ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷಗಳ ಒಗ್ಗಟ್ಟು: ‘ಕೈ’ ಪಾತ್ರ ಗಮನಾರ್ಹ– ಚಿದಂಬರಂ

Published 16 ಜುಲೈ 2023, 13:50 IST
Last Updated 16 ಜುಲೈ 2023, 13:50 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಮಣಿಸಲು ಪ್ರತಿಪಕ್ಷಗಳು ಸರಿಯಾದ ಸಮಯದಲ್ಲಿ ಒಗ್ಗೂಡುತ್ತಿವೆ. ಈ ಒಗ್ಗಟ್ಟಿನ ಶಕ್ತಿಯಲ್ಲಿ ಕಾಂಗ್ರೆಸ್‌ನ ಪಾತ್ರ ಗಮನಾರ್ಹವಾಗಿದೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಪ್ರತಿಪಾದಿಸಿದ್ದಾರೆ.

‘ಪ್ರತಿಪಕ್ಷಗಳ ಶ್ರೇಣಿಯಲ್ಲಿ ಕಾಂಗ್ರೆಸ್‌ನ ಪಾತ್ರ ಅನನ್ಯವಾದುದು. ಆದರೆ, ಈ ಕುರಿತು ಈಗಲೇ ಹೆಚ್ಚು ಮಾತನಾಡುವುದು ಸರಿಯಲ್ಲ’ ಎಂದು ಭಾನುವಾರ ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಕುರಿತು ಕೇಂದ್ರವು ಹೊರಡಿಸಿರುವ ಸುಗ್ರೀವಾಜ್ಞೆ ಬಗ್ಗೆ ಪಟ್ನಾ ಸಭೆಯಲ್ಲಿ ಒಮ್ಮತ ಮೂಡದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಪ್ರತಿ ವಿಷಯವು ಅದರ ಅರ್ಹತೆಯ ಮೇಲೆ ನಿರ್ಧರಿಸಲ್ಪಡುತ್ತದೆ. ಜೊತೆಗೆ, ನಿರ್ದಿಷ್ಟ ಸಮಯ ಮತ್ತು ಸ್ಥಳವನ್ನೂ ಬೇಡುತ್ತದೆ’ ಎಂದಿದ್ದಾರೆ. 

ಬಿಜೆಪಿ ಸರ್ಕಾರದ ಸಾಮಾಜಿಕ ಮತ್ತು ಆರ್ಥಿಕ ನೀತಿಗಳ ಬಗ್ಗೆ ಪ್ರತಿಪಕ್ಷಗಳಲ್ಲಿ ಅಸಮಾಧಾನವಿದೆ. ಮಂದಗತಿಯ ಆರ್ಥಿಕತೆ, ಹಣದುಬ್ಬರ, ನಿರುದ್ಯೋಗ ಸಮಸ್ಯೆಗಳು ಈ ವಿರೋಧದಲ್ಲಿ ಕಂಡುಬರುವ ಸಮಾನ ಅಂಶಗಳಾಗಿವೆ ಎಂದ ಅವರು, ‘ಸರ್ಕಾರ ನಾಗರಿಕರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತಿದೆ. ಮಾಧ್ಯಮಗಳ ಬಾಯಿಯನ್ನೂ ಮುಚ್ಚಿಸಿದೆ. ತನಿಖಾ ಏಜೆನ್ಸಿಗಳ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅವುಗಳನ್ನು ಊನಗೊಳಿಸುತ್ತಿದೆ’ ಎಂದು ಟೀಕಿಸಿದ್ದಾರೆ.

‘ದೇಶದ ಗಡಿಯಲ್ಲಿನ ಸುರಕ್ಷತೆ ಬಗ್ಗೆ ಎಲ್ಲರಲ್ಲೂ ಆತಂಕವಿದೆ. ಈ ಅಂಶವೂ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಒಗ್ಗೂಡಲು ಕಾರಣವಾಗಿದೆ. ಬೆಂಗಳೂರು ಸಭೆಯ ಬಳಿಕ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದನ್ನು ಎದುರು ನೋಡುತ್ತಿದ್ದೇವೆ’ ಎಂದು ಹೇಳಿದ್ದಾರೆ. 

ಪ್ರತಿಪಕ್ಷಗಳ ನಾಯಕತ್ವ ಸೇರಿದಂತೆ ಮೋದಿ ವಿರುದ್ಧ ಗೆಲುವಿಗೆ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸದೆ ಅಖಾಡಕ್ಕಿಳಿಯುವುದು ಉತ್ತಮವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಮುಂದಿನ ವರ್ಷಕ್ಕೆ ಮೋದಿ ಅಧಿಕಾರದ ಚುಕ್ಕಾಣಿ ಹಿಡಿದು 10 ವರ್ಷ ಪೂರೈಸುತ್ತದೆ. ಚುನಾವಣೆಯಲ್ಲಿ ಬಿಜೆಪಿಗೆ ಈ ವಿಷಯ ವರದಾನವಾಗುವುದಿಲ್ಲ. ಅದೇ ಆ ಪಕ್ಷಕ್ಕೆ ಮುಳುವಾಗಲಿದೆ. ಚುನಾವಣಾ ಪೂರ್ಣದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ’ ಎಂದಿದ್ದಾರೆ.

‘ಪ್ರತಿಪಕ್ಷಗಳು ಮತ್ತು ಅವುಗಳ ನಾಯಕರು ಭ್ರಷ್ಟರಾಗಿದ್ದಾರೆ ಎಂಬುದು ಮೋದಿ ಅವರ ಟೊಳ್ಳು ವಾದ. ಇದಕ್ಕೆ ಕರ್ನಾಟಕದ ವಿಧಾನಸಭಾ ಚುನಾವಣಾ ಫಲಿತಾಂಶವೇ ಉತ್ತರ ನೀಡಿದೆ. ಅವರ ಆರೋಪಗಳು ಅರ್ಥ ಕಳೆದುಕೊಂಡಿವೆ’ ಎಂದು ವ್ಯಂಗ್ಯವಾಡಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT