ಭುವನೇಶ್ವರ: ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಮನೆಯಲ್ಲಿ ನಡೆದ ಗಣಪತಿ ಹಬ್ಬದಲ್ಲಿ ಭಾಗವಹಿಸಿದ್ದಕ್ಕಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷದವರು ನನ್ನ ಮೇಲೆ ಕೋಪಗೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭುವನೇಶ್ವರದಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಗಣೇಶ ಉತ್ಸವ ದೇಶವಾಸಿಗಳಿಗೆ ಕೇವಲ ನಂಬಿಕೆಯ ಹಬ್ಬ ಮಾತ್ರವಲ್ಲ, ಬದಲಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿತ್ತು’ ಎಂದು ಸ್ಮರಿಸಿದ್ದಾರೆ.
‘ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದ ಬ್ರಿಟಿಷರು ಗಣೇಶ ಉತ್ಸವವನ್ನು ದ್ವೇಷಿಸುತ್ತಿದ್ದರು. ಇಂದಿಗೂ ಸಮಾಜವನ್ನು ಒಡೆಯುವ ಕೆಲಸದಲ್ಲಿ ನಿರತರಾಗಿರುವ ಅಧಿಕಾರ ದಾಹಿಗಳಿಗೆ ಗಣೇಶ ಪೂಜೆಗೆ ತೊಂದರೆಯಾಗುತ್ತಿದೆ. ನಾನು ಈಚೆಗೆ ಗಣೇಶ ಪೂಜೆಯಲ್ಲಿ ಭಾಗವಹಿಸಿದ್ದಕ್ಕಾಗಿ ಕಾಂಗ್ರೆಸ್ ಮತ್ತು ಅವರ ಮಿತ್ರ ಪಕ್ಷದವರು ನನ್ನ ಕೋಪಗೊಂಡಿರುವುದೇ ಇದಕ್ಕೆ ಸಾಕ್ಷಿ’ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಗಣೇಶನನ್ನು ಕಂಬಿ ಹಿಂದೆ ಹಾಕಲಾಗಿದೆ ಎಂದು ಮೋದಿ ಟೀಕಿಸಿದ್ದಾರೆ.
ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಮನೆಯಲ್ಲಿ ನಡೆದ ಗಣಪತಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಇದು ರಾಜಕೀಯ ವಲಯದಲ್ಲಿ ವಿವಾದ ಭುಗಿಲೇಳುವಂತೆ ಮಾಡಿತ್ತು.
ಪ್ರಧಾನಿ ನಡೆಯನ್ನು ಟೀಕಿಸಿದ್ದ ಪ್ರತಿಪಕ್ಷಗಳು, ಇದು ‘ಕೆಟ್ಟ ಸಂದೇಶ’ ರವಾನಿಸುತ್ತದೆ ಎಂದು ದೂರಿದ್ದವು. ‘ಗಣೇಶ ಹಬ್ಬದಲ್ಲಿ ಪಾಲ್ಗೊಳ್ಳುವುದು ಅಪರಾಧವಲ್ಲ’ ಎನ್ನುವ ಮೂಲಕ ಬಿಜೆಪಿ ಮತ್ತು ಮಿತ್ರಪಕ್ಷಗಳು, ವಿರೋಧಿಗಳ ಟೀಕೆಗೆ ಪ್ರತಿಕ್ರಿಯೆ ಕೊಟ್ಟಿತ್ತು.