ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಕಾಂಗ್ರೆಸ್‌ಗೆ ಪೆಟ್ಟು; ಜಿತಿನ್ ಪ್ರಸಾದ ಬಿಜೆಪಿಗೆ ಸೇರ್ಪಡೆ

Last Updated 9 ಜೂನ್ 2021, 19:28 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್ ಪಕ್ಷದ ಮುಖಂಡ ಮತ್ತು ರಾಹುಲ್‌ ಗಾಂಧಿ ಅವರ ಆಪ್ತ ಜಿತಿನ್ ಪ್ರಸಾದ ಬುಧವಾರ ಬಿಜೆಪಿ ಸೇರಿದ್ದಾರೆ.

47 ವರ್ಷದ ಜಿತಿನ್‌ ಪ್ರಸಾದ, ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.

2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನವೇ ಉತ್ತರ ಪ್ರದೇಶದ ಪ್ರಮುಖ ಯುವ ನಾಯಕ ಪಕ್ಷ ತೊರೆದಿರುವುದು ಕಾಂಗ್ರೆಸ್‌ಗೆ ದೊಡ್ಡ ಪೆಟ್ಟು ನೀಡಲಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.

ಉತ್ತರ ಪ್ರದೇಶದಲ್ಲಿನ ಪ್ರಭಾವಿ ಬ್ರಾಹ್ಮಣ ಸಮುದಾಯದ ಮತದಾರರನ್ನು ಸೆಳೆಯುವ ಬಿಜೆಪಿ ಪ್ರಯತ್ನಗಳಿಗೆ ಜಿತಿನ್‌ ಪ್ರಸಾದ ಕೈಜೋಡಿಸಲಿದ್ದಾರೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆಡಳಿತದಲ್ಲಿ ಠಾಕೂರ್‌ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಬ್ರಾಹ್ಮಣ ಸಮುದಾಯವನ್ನು ಕಡೆಗಣಿಸಲಾಗಿದೆ ಎನ್ನುವ ಅಭಿಪ್ರಾಯ ಮೂಡಿದೆ. ಹೀಗಾಗಿ, ಜಿತಿನ್‌ ಪ್ರಸಾದ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ.

ಉತ್ತರ ಪ್ರದೇಶದಲ್ಲಿ ಶೇಕಡ 13ರಷ್ಟು ಬ್ರಾಹ್ಮಣ ಸಮುದಾಯದವರಿದ್ದಾರೆ. ಜಿತಿನ್‌ ಪ್ರಸಾದ ಅವರು ಕಳೆದ ವರ್ಷ ಬ್ರಾಹ್ಮಣ ಸಮುದಾಯದ ಸಂಘಟನೆಗಾಗಿ ಬ್ರಾಹ್ಮಣ ಚೇತನಾ ಪರಿಷತ್‌ ಆರಂಭಿಸಿದ್ದರು. ಯೋಗಿ ಆದಿತ್ಯನಾಥ ಅವರ ಸರ್ಕಾರದಲ್ಲಿ ಬ್ರಾಹ್ಮಣರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಈ ಸಮುದಾಯದ ಜತೆ ತಾರತಮ್ಯ ಮಾಡಲಾಗುತ್ತಿದೆ ಎಂದು ಕಳೆದ ವರ್ಷ ದೂರಿದ್ದರು.

‘ಕಾಂಗ್ರೆಸ್ ಜತೆ ನನ್ನ ಕುಟುಂಬ ಮೂರು ತಲೆಮಾರಿನ ಸಂಬಂಧ ಹೊಂದಿದೆ. ಆದ್ದರಿಂದ ಈ ಮಹತ್ವದ ನಿರ್ಧಾರವನ್ನು ಸಾಕಷ್ಟು ಚಿಂತನೆಯ ಬಳಿಕೆ ತೆಗೆದುಕೊಂಡಿದ್ದೇನೆ. ಈಗ ಜೀವನದ ಹೊಸ ಅಧ್ಯಾಯ ಆರಂಭಿಸಿದ್ದೇನೆ’ ಎಂದು ಬಿಜೆಪಿ ಸೇರ್ಪಡೆ ಬಳಿಕ ಹೇಳಿದರು.

‘ಕಾಂಗ್ರೆಸ್‌ ಪಕ್ಷದಲ್ಲಿದ್ದುಕೊಂಡು ಸಮಾಜ ಸೇವೆಯ ಜವಾಬ್ದಾರಿಯನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಿಜೆಪಿ ಸೇರಿದ್ದೇನೆ. ಬೆಂಬಲಿಗರ ಹಿತಾಸಕ್ತಿ ಕಾಪಾಡಲು ವಿಫಲವಾದರೆ ಆ ಪಕ್ಷದಲ್ಲಿದ್ದು ಉಪಯೋಗವೇನು?’ ಎಂದು ಜಿತಿನ್‌ ಪ್ರಸಾದ ಹೇಳಿದ್ದಾರೆ.

ಎಲ್ಲ ಹಂತಗಳಲ್ಲಿ ಚುನಾವಣೆ ನಡೆಸಬೇಕು ಮತ್ತು ಪಕ್ಷ ಸಂಘಟನೆಯಲ್ಲಿ ಅಮೂಲಾಗ್ರವಾಗಿ ಬದಲಾವಣೆ ತರಬೇಕು ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ನಾಯಕರಲ್ಲಿ ಜಿತಿನ್‌ ಅವರು ಒಬ್ಬರಾಗಿದ್ದರು.

ಉತ್ತರ ಪ್ರದೇಶದ ಪಕ್ಷದ ವ್ಯವಹಾರಗಳನ್ನು ಪ್ರಿಯಾಂಕಾ ಗಾಂಧಿ ಅವರು ವಹಿಸಿಕೊಂಡ ಬಳಿಕ ತಮ್ಮನ್ನು ಕಡೆಗಣಿಸಲಾಗಿದೆ ಎನ್ನುವ ಅಭಿಪ್ರಾಯ ಜಿತಿನ್‌ ಪ್ರಸಾದ ಅವರಿಗೆ ಮೂಡಿತ್ತು.

ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಉಸ್ತುವಾರಿಯನ್ನು ಜಿತಿನ್‌ ಪ್ರಸಾದ ಅವರಿಗೆ ವಹಿಸಲಾಗಿತ್ತು. ಆದರೆ, ಕಾಂಗ್ರೆಸ್‌ ಸಾಧನೆ ಶೂನ್ಯವಾಗಿತ್ತು. ಈ ರಾಜ್ಯದಲ್ಲಿ ಖಾತೆಯನ್ನೇ ತೆರೆಯಲಿಲ್ಲ.

2014 ಮತ್ತು 2019ರಲ್ಲಿಯೂ ಲೋಕಸಭೆ ಚುನಾವಣೆಯಲ್ಲಿ ಜಿತಿನ್‌ ಪರಾಭವಗೊಂಡಿದ್ದರು. ಜತೆಗೆ, 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಕೇಂದ್ರದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಜಿತಿನ್‌ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT