ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Jharkhand Politics: ಹೇಮಂತ್ ಸೊರೇನ್ ಪತ್ನಿಯನ್ನು ಭೇಟಿಯಾದ ರಾಹುಲ್ ಗಾಂಧಿ

Published 5 ಫೆಬ್ರುವರಿ 2024, 10:49 IST
Last Updated 5 ಫೆಬ್ರುವರಿ 2024, 10:49 IST
ಅಕ್ಷರ ಗಾತ್ರ

ರಾಂಚಿ: ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್ ಪತ್ನಿ ಕಲ್ಪನಾ ಅವರನ್ನು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸೋಮವಾರ ಭೇಟಿಯಾಗಿದ್ದಾರೆ.

ಭೂ ಹಗರಣದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊರೇನ್‌ ಅವರನ್ನು ಕಳೆದವಾರ ಬಂಧಿಸಲಾಗಿದೆ.

ಜಾರ್ಖಂಡ್‌ನಲ್ಲಿ ರಚನೆಯಾಗಿರುವ ಜೆಎಂಎಂ, ಕಾಂಗ್ರೆಸ್‌, ಆರ್‌ಜೆಡಿ ಮತ್ತು ಸಿಪಿಐ(ಎಂಎಲ್‌) ಮೈತ್ರಿ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಿದ ಕೆಲವೇ ನಿಮಿಷಗಳ ಬಳಿಕ ಹಾಗೂ ಇಲ್ಲಿನ ಐತಿಹಾಸಿಕ ಶಾಹೀದ್‌ ಮೈದಾನದಲ್ಲಿ ಸಾರ್ವಜನಿಕ ರ‍್ಯಾಲಿ ಆರಂಭವಾಗುವುದಕ್ಕೆ ಕೆಲಹೊತ್ತಿನ ಮೊದಲು, ರಾಹುಲ್‌ ಅವರು ಕಲ್ಪನಾ ಸೊರೇನ್‌ ಅವರನ್ನು ಭೇಟಿಯಾದರು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ತಿಳಿಸಿದ್ದಾರೆ.

ರಾಹುಲ್-ಕಲ್ಪನಾ ಭೇಟಿಯ ಚಿತ್ರವನ್ನೂ ಅವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

'ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ'
ತಮ್ಮ ವಿರುದ್ಧ ಬಿಜೆಪಿ ಮಾಡಿರುವ ಆರೋಪಗಳನ್ನು ಸಾಬೀತು ಮಾಡಿದರೆ, ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಮಂತ್‌ ಸೊರೇನ್‌ ಅವರು ಸವಾಲು ಹಾಕಿದ್ದಾರೆ.

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ (ಫೆ. 2ರಂದು) ಅಧಿಕಾರಕ್ಕೇರಿರುವ ಚಂಪೈ ಸೊರೇನ್‌ ಅವರು, ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡಿದರು. ಈ ವೇಳೆ ಸದನದಲ್ಲಿ ಹಾಜರಿದ್ದ ಹೇಮಂತ್‌, ತಮ್ಮ ಬಂಧನಕ್ಕೆ ಕೇಂದ್ರ ಸರ್ಕಾರ ಮಾಡಿದ ಸಂಚಿನಲ್ಲಿ ರಾಜಭವನವೂ ಪ್ರಮುಖ ಪಾತ್ರವಹಿಸಿದೆ ಎಂದು ಆರೋಪಿಸಿದ್ದಾರೆ.

ರಾಂಚಿಯಲ್ಲಿರುವ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯವು, ಸೊರೇನ್‌ ಅವರನ್ನು ಐದು ದಿನಗಳ ಕಾಲ ಇ.ಡಿ. ಕಸ್ಟಡಿಗೆ ಒಪ್ಪಿಸಿ ಶುಕ್ರವಾರ ಆದೇಶ ನೀಡಿದೆ.

ಸೊರೇನ್‌ ಅರ್ಜಿ ವಿಚಾರಣೆ ಫೆ.12ಕ್ಕೆ
ಇ.ಡಿ. ಅಧಿಕಾರಿಗಳು ತಮ್ಮ ವಿರುದ್ಧ ಕೈಗೊಂಡಿರುವ ಕ್ರಮವನ್ನು ಪ್ರಶ್ನಿಸಿ, ಹೇಮಂತ್ ಸೊರೇನ್‌ ಅವರು ಜಾರ್ಖಂಡ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ನ್ಯಾಯಾಲಯವು ಈ ಅರ್ಜಿಯ ವಿಚಾರಣೆಯನ್ನು ಫೆ.12ರಂದು ನಡೆಸಲಿದೆ ಎಂದು ಮಾಜಿ ಸಿಎಂ ಪರ ವಕೀಲ ರಾಜೀವ್‌ ರಂಜನ್‌ ತಿಳಿಸಿದ್ದಾರೆ.

ಹೇಮಂತ್‌ ಅವರ ಅರ್ಜಿ ಸಂಬಂಧ ಪ್ರತ್ರಿಕ್ರಿಯೆ ದಾಖಲಿಸುವಂತೆ ಇ.ಡಿ.ಗೆ ಕೋರ್ಟ್‌ ಸೂಚಿಸಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT