ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ಪಕ್ಷವು ಭ್ರಷ್ಟ, ತುಕ್ಡೆ ತುಕ್ಡೆ ಗ್ಯಾಂಗ್, ನಗರ ನಕ್ಸಲ್‌ ಪಡೆ: ಮೋದಿ

Published : 20 ಸೆಪ್ಟೆಂಬರ್ 2024, 9:42 IST
Last Updated : 20 ಸೆಪ್ಟೆಂಬರ್ 2024, 9:42 IST
ಫಾಲೋ ಮಾಡಿ
Comments

ವಾರ್ಧಾ: ನಗರ ನಕ್ಸಲರು ಮತ್ತು ತುಕ್ಡೆ ತುಕ್ಡೆ ಗ್ಯಾಂಗ್‌ ಮುನ್ನಡೆಸುತ್ತಿರುವ ಕಾಂಗ್ರೆಸ್, ಅತ್ಯಂತ ಭ್ರಷ್ಟ ಪಕ್ಷವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

'ಪಿಎಂ ವಿಶ್ವಕರ್ಮ ಯೋಜನೆ' ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ವಾರ್ಧಾದಲ್ಲಿ ಸಾರ್ವಜನಿಕ ಸಮಾವೇಶನ್ನುದ್ದೇಶಿಸಿ ಮಾತನಾಡಿದ ಮೋದಿ, 'ಇಂದು ನೀವು ನೋಡುತ್ತಿರುವುದು, ಮಹಾತ್ಮ ಗಾಂಧಿಯಂತಹ ಮಹಾನ್‌ ವ್ಯಕ್ತಿಯನ್ನು ಹೊಂದಿದ್ದ ಕಾಂಗ್ರೆಸ್‌ ಪಕ್ಷವನ್ನಲ್ಲ' ಎಂದಿದ್ದಾರೆ.

ಮುಂದುವರಿದು, 'ದ್ವೇಷದ ಭೂತ ಆ ಪಕ್ಷವನ್ನು ಹೊಕ್ಕಿದೆ. ಇಂದಿನ ಕಾಂಗ್ರೆಸ್‌ನಲ್ಲಿ ದೇಶಪ್ರೇಮದ ಆತ್ಮ ಕೊನೆಯುಸಿರೆಳೆದಿದೆ' ಎಂದು ದೂರಿದ್ದಾರೆ.

ಕಾಂಗ್ರೆಸ್‌ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ದೇಶದಲ್ಲಿನ ಮೀಸಲಾತಿ ವ್ಯವಸ್ಥೆ ಕುರಿತು ಅಮೆರಿಕ ಭೇಟಿ ವೇಳೆ ಮಾತನಾಡಿದ್ದರು. ಆ ಕುರಿತು ಯಾರ ಹೆಸರನ್ನೂ ಉಲ್ಲೇಖಿಸದೆ ಮೋದಿ ಕಿಡಿಕಾರಿದ್ದಾರೆ.

'ಭ್ರಷ್ಟ ಪಕ್ಷ ಎಂಬುದು ಇದ್ದರೆ ಅದು ಕಾಂಗ್ರೆಸ್‌ ಮಾತ್ರ' ಎಂದಿರುವ ಪ್ರಧಾನಿ, ಗಾಂಧಿ–ನೆಹರೂ ಕುಟುಂಬದ ಹೆಸರು ಹೇಳದೆ, 'ಅದರ (ಕಾಂಗ್ರೆಸ್‌ನ) ರಾಯಲ್‌ ಪರಿವಾರವೇ ಅತ್ಯಂತ ಭ್ರಷ್ಟ ಕುಟುಂಬವಾಗಿದೆ' ಎಂದು ಗುಡುಗಿದ್ದಾರೆ.

'ಕಾಂಗ್ರೆಸ್‌, ಗಣಪತಿ ಪೂಜೆಯನ್ನು ವಿರೋಧಿಸುತ್ತದೆ. ನಾನು ಗಣೇಶ ಪೂಜೆಗೆ ಹೋಗಿದ್ದನ್ನೂ ಟೀಕಿಸುತ್ತದೆ. ಇದು ಓಲೈಕೆ ರಾಜಕಾರಣವಾಗಿದೆ. ಗಣಪತಿಯನ್ನು ಕರ್ನಾಟಕದಲ್ಲಿ ಕಂಬಿಯ ಹಿಂದಕ್ಕೆ ನೂಕಲಾಗಿದೆ. ಗಣೇಶ ಮೂರ್ತಿಯನ್ನು ಪೊಲೀಸ್‌ ವಾಹನದಲ್ಲಿ ತೆಗೆದಕೊಂಡು ಹೋಗಲಾಯಿತು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಗಣಪತಿಗೆ ಆಗಿರುವ ಅವಮಾನದ ಬಗ್ಗೆ ಮಹಾರಾಷ್ಟ್ರದಲ್ಲಿರುವ ಕಾಂಗ್ರೆಸ್‌ ಮೈತ್ರಿಕೂಟ ಮಾತನಾಡುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದ್ದು, 'ಅವರ (ಕಾಂಗ್ರಸ್‌ ಮಿತ್ರಪಕ್ಷಗಳ) ಇಬ್ಬಗೆತನದ ಬಗ್ಗೆ ನಾವೆಲ್ಲ ಎಚ್ಚರವಾಗಿರಬೇಕಿದೆ. ಸುಳ್ಳು ಮತ್ತು ದ್ರೋಹ ಕಾಂಗ್ರೆಸ್‌ನವರ ಗುರುತಾಗಿದೆ. ಆ ಪಕ್ಷದ ಬಗ್ಗೆ ಮಹಾರಾಷ್ಟ್ರದ ಜನರು ಎಚ್ಚೆತ್ತುಕೊಳ್ಳಬೇಕು' ಎಂದು ಕರೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷವು ರಾಜಕೀಯಕ್ಕೆ ಮತ್ತು ಭ್ರಷ್ಟಾಚಾರಕ್ಕಷ್ಟೇ ರೈತರನ್ನು ಬಳಸಿಕೊಳ್ಳುತ್ತದೆ ಎಂದು ದೂರಿರುವ ಪ್ರಧಾನಿ, ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ ಎಂದೂ ಹೇಳಿದ್ದಾರೆ.

ಮುಂದುವರಿದು, 'ರೈತರಿಗೆ ದ್ರೋಹ ಬಗೆದ ಕಾಂಗ್ರೆಸ್‌ಗೆ ಮತ್ತೊಂದು ಅವಕಾಶವನ್ನು ಮಹಾರಾಷ್ಟ್ರದಲ್ಲಿ ನಾವು ನೀಡಬಾರದು' ಎಂದು ಮನವಿ ಮಾಡಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರೇ ಹೆಚ್ಚಾಗಿ 'ಪಿಎಂ ವಿಶ್ವಕರ್ಮ ಯೋಜನೆ'ಯ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಹೇಳಿಕೊಂಡಿರುವ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರವು ವಿಶ್ವಕರ್ಮ ಸುಮದಾಯಗಳನ್ನು ಕಡೆಗಣಿಸಿತ್ತು ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT