ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ‘ಜನ ಸಂವಾದ ಯಾತ್ರೆ’ ಆರಂಭ

ಮರಾಠಾ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಪ್ರಹಾರ: ಎಸ್‌ಪಿಗೆ ಕಡ್ಡಾಯ ರಜೆ
Published 3 ಸೆಪ್ಟೆಂಬರ್ 2023, 15:46 IST
Last Updated 3 ಸೆಪ್ಟೆಂಬರ್ 2023, 15:46 IST
ಅಕ್ಷರ ಗಾತ್ರ

ಮುಂಬೈ: ಕೇಂದ್ರ ಸರ್ಕಾರ ಮತ್ತು ಏಕನಾಥ್ ಶಿಂದೆ ನೇತೃತ್ವದ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಮಹಾರಾಷ್ಟ್ರ ಕಾಂಗ್ರೆಸ್ ಭಾನುವಾರ ರಾಜ್ಯದಲ್ಲಿ ‘ಜನ ಸಂವಾದ ಯಾತ್ರೆ’  ಪ್ರಾರಂಭಿಸಿದೆ.

ಆದರೆ, ಜಲ್ನಾ ಜಿಲ್ಲೆಯಲ್ಲಿ ಮರಾಠಾ ಮೀಸಲಾತಿ ಪ್ರತಿಭಟನಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಬಳಿಕ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾದ ಹಿನ್ನೆಲೆಯಲ್ಲಿ ಮರಾಠಾವಾಡಾದ ಎಲ್ಲಾ ಎಂಟು ಜಿಲ್ಲೆಗಳಲ್ಲಿ ಪಕ್ಷವು ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

‘ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅಶೋಕ್ ಚವಾಣ್ ‘ಎ‌ಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಹಾರಾಷ್ಟ್ರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ನಾನಾ ಪಟೋಲೆ ಅವರು ಪೂರ್ವ ವಿದರ್ಭದ ವಾರ್ಧಾ ಜಿಲ್ಲೆಯಿಂದ ಪಕ್ಷದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯಾತ್ರೆಗೂ ಮುನ್ನ ಅವರು ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಪ್ಪು ನೀತಿಗಳಿಂದಾಗಿ ರೈತರು, ಯುವಕರು, ಮಹಿಳೆಯರು ಮತ್ತು ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್ ನಾಗ್ಪುರದಲ್ಲಿ ಯಾತ್ರೆಯ ನೇತೃತ್ವ ವಹಿಸಿದ್ದರು.  

ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಶುಕ್ರವಾರ ನಡೆದ ಪ್ರತಿಭಟನೆ ವೇಳೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಪ್ರತಿಭಟನಕಾರರು ನಿರಾಕರಿಸಿದ್ದರಿಂದ ಜಲ್ನಾದ ಧುಲೆ-ಸೋಲಾಪುರ ರಸ್ತೆಯ ಅಂತರ್ವಾಲಿ ಸಾರಥಿಯಲ್ಲಿ ಉದ್ರಿಕ್ತ ಗುಂಪು ಚದುರಿಸಲು ಪೊಲೀಸರು ಶುಕ್ರವಾರ ಲಾಠಿ ಪ್ರಹಾರ ನಡೆಸಿದರು ಮತ್ತು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದರು. 

ಘಟನೆಯಲ್ಲಿ 40 ಪೊಲೀಸರು ಮತ್ತು ಪ್ರತಿಭಟನಕಾರರು ಗಾಯಗೊಂಡರು. 15ಕ್ಕೂ ಹೆಚ್ಚು ಬಸ್‌ಗಳಿಗೆ ಬೆಂಕಿ ಹಚ್ಚಲಾಗಿದೆ. 360 ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಮೀಸಲಾತಿ ನೀಡಲು ಬದ್ಧ: 

ಹಿಂಸಾಚಾರದ ಹಿನ್ನೆಲೆಯಲ್ಲಿ ಮರಾಠಾ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಭಾನುವಾರ ಮುಖ್ಯಮಂತ್ರಿ ಏಕನಾಥ್ ಶಿಂದೆ ಹೇಳಿದ್ದಾರೆ.  

ಬುಲ್ಧಾನಾ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮುದಾಯಕ್ಕೆ ಮೀಸಲಾತಿ ಸಿಗುವವರೆಗೆ, ಈಗಾಗಲೇ ಜಾರಿಯಲ್ಲಿರುವ ಸರ್ಕಾರಿ ಯೋಜನೆಗಳು ಮುಂದುವರಿಯುತ್ತವೆ ಎಂದರು.

ಲಾಠಿ ಪ್ರಹಾರ ನಡೆಸಿದ ಜಲ್ನಾ ಪೊಲೀಸ್ ವರಿಷ್ಠಾಧಿಕಾರಿ ತುಷಾರ್ ದೋಶಿ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ. ಲಾಠಿ ಚಾರ್ಜ್ ಘಟನೆ ಬಗ್ಗೆ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಸಂಜಯ್ ಸಕ್ಸೇನಾ ತನಿಖೆ ನಡೆಸಲಿದ್ದಾರೆ ಮತ್ತು ಅಗತ್ಯವಿದ್ದರೆ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದರು. 

ಇಬ್ಬರು ಡಿವೈಎಸ್ಪಿ ಶ್ರೇಣಿಯ ಅಧಿಕಾರಿಗಳನ್ನು ಜಲ್ನಾ ಜಿಲ್ಲೆಯಿಂದ ವರ್ಗಾಯಿಸಲಾಗುವುದು. ಉಪವಾಸ ಸತ್ಯಾಗ್ರಹ ಹಿಂತೆಗೆದುಕೊಳ್ಳುವಂತೆ ಪ್ರತಿಭಟನಕಾರರಿಗೆ ಮನವಿ ಮಾಡಲಾಗಿದೆ. ಈ ಸಂಬಂಧ ಮಹತ್ವದ ನಿರ್ಧಾರಗಳನ್ನು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT