ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮತಿಯ ಸಂಬಂಧ: ಎಫ್‌ಐಆರ್‌ ರದ್ದತಿಗೆ ಸುಪ್ರೀಂ ಕೋರ್ಟ್ ನಕಾರ

Published 9 ಮಾರ್ಚ್ 2024, 14:46 IST
Last Updated 9 ಮಾರ್ಚ್ 2024, 14:46 IST
ಅಕ್ಷರ ಗಾತ್ರ

ನವದೆಹಲಿ: ಅತ್ಯಾಚಾರಕ್ಕೆ ಸಂಬಂಧಿಸಿದಂತೆ ರಾಜ್‌ಕುಮಾರ್‌ ಎನ್ನುವವರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಮಾಡಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ‘ಪುರುಷ ಹಾಗೂ ಮಹಿಳೆಯ ನಡುವೆ ಸಮ್ಮತಿಯೊಂದಿಗೆ ಆರಂಭವಾದ ಸಂಬಂಧವು, ಮುಂದೆ ಎಲ್ಲ ಸಂದರ್ಭಗಳಲ್ಲಿಯೂ ಸಮ್ಮತಿಯ ಸಂಬಂಧವಾಗಿಯೇ ಉಳಿದಿರುತ್ತದೆ ಎನ್ನಲಾಗದು’ ಎಂದು ಹೇಳಿದೆ.

2022ರ ಜುಲೈನಲ್ಲಿ ದಾಖಲಾದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ರಾಜ್‌ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಈ ಪ್ರಕರಣದಲ್ಲಿ ಅರ್ಜಿದಾರ ಹಾಗೂ ಮಹಿಳೆಯ ನಡುವೆ ಸಂಬಂಧ ಇತ್ತು. ಆದರೆ ನಂತರದಲ್ಲಿ ಆ ಸಂಬಂಧ ಹಳಸಿತು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸಂಜಯ್ ಕುಮಾರ್ ಅವರು ಇದ್ದ ವಿಭಾಗೀಯ ಪೀಠ ಹೇಳಿದೆ.

‘ಇಬ್ಬರಲ್ಲಿ ಯಾರಾದರೂ ಒಬ್ಬರು ಸಂಬಂಧದಲ್ಲಿ ಮುಂದುವರಿಯಲು ಅಸಮ್ಮತಿ ತೋರಿದಲ್ಲಿ, ಅಂತಹ ಸಂಬಂಧದ ಸ್ವರೂಪವು ಅದು ಆರಂಭವಾದ ಹಂತದಲ್ಲಿ ಇದ್ದಂತೆಯೇ ಉಳಿದುಕೊಳ್ಳುವುದಿಲ್ಲ’ ಎಂದು ಪೀಠವು ಮಾರ್ಚ್ 5ರಂದು ನೀಡಿರುವ ತೀರ್ಪಿನಲ್ಲಿ ಹೇಳಿದೆ.

ಮಹಿಳೆಯು ರಾಜ್‌ಕುಮಾರ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ತಾವು ಮಹಿಳೆಯ ವಿರುದ್ಧ ಬ್ಲ್ಯಾಕ್‌ಮೇಲ್‌, ಸುಲಿಗೆ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಕ್ಕೆ ಪ್ರತಿಯಾಗಿ ಮಹಿಳೆಯು ತಮ್ಮ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ರಾಜ್‌ಕುಮಾರ್ ಹೇಳಿದ್ದರು. ಸಮ್ಮತಿಯ ಸಂಬಂಧದಲ್ಲಿ ಅತ್ಯಾಚಾರ ನಡೆಯಲು ಸಾಧ್ಯವಿಲ್ಲ ಎಂದು ಅರ್ಜಿದಾರ ವಾದಿಸಿದ್ದರು.

‘ಇದನ್ನು ನಾವು ಒಪ್ಪಿಕೊಳ್ಳುತ್ತೇವೆ... ಆದರೆ, ದೂರುದಾರೆಯು ಸಮ್ಮತಿಯನ್ನು ಮುಂದುವರಿಸಿದ್ದರು ಎಂಬ ಅರ್ಥವನ್ನು ಅವರ ಆರೋಪಗಳು ನೀಡುತ್ತಿಲ್ಲ. ಆರಂಭದಲ್ಲಿ ಒಂದು ಸಂಬಂಧವು ಸಮ್ಮತಿಯದ್ದಾಗಿರಬಹುದು. ಆದರೆ, ಅದು ಮುಂದೆಯೂ ಸಮ್ಮತಿಯ ಸಂಬಂಧವಾಗಿಯೇ ಉಳಿಯದಿರಬಹುದು’ ಎಂದು ಪೀಠವು ಹೇಳಿದೆ. ‘ಈ ಪ್ರಕರಣದಲ್ಲಿ ಸಮ್ಮತಿಯ ಸಂಬಂಧವು ಉಳಿದಿತ್ತು ಎಂದು ನಾವು ಭಾವಿಸುತ್ತಿಲ್ಲ’ ಎಂದು ಪೀಠವು ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT