ನವದೆಹಲಿ: ಪ್ರಸ್ತಾವಿತ ಮಧ್ಯಸ್ತಿಕೆ ಮಸೂದೆ ಕುರಿತು ಪರಿಣತರಿಂದ ಸಲಹೆ ಕ್ರೋಡೀಕರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೇಂದ್ರ ಸರ್ಕಾರವು, ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ವ್ಯಾಜ್ಯಗಳು ನ್ಯಾಯಾಲಯದ ಮೆಟ್ಟಿಲೇರುವ ಮೊದಲು ಮಧ್ಯಸ್ತಿಕೆ ಮೂಲಕ ಅವುಗಳ ಇತ್ಯರ್ಥಕ್ಕಾಗಿ ಮಧ್ಯಸ್ತಿಕೆದಾರರ ನೇಮಕವಾಗಬೇಕಿದೆ. ಆದರೆ, ನೇಮಕ ಕುರಿತು ಇನ್ನೂ ಪೂರ್ವಸಿದ್ಧತೆಯೇ ಅಂತಿಮಗೊಂಡಿಲ್ಲ. ಹಾಗಾಗಿ, ಮಧ್ಯಸ್ತಿಕೆ ಹಾಗೂ ರಾಜಿಸಂಧಾನ ಕಾಯ್ದೆ 1996ರ ತಿದ್ದುಪಡಿ ಕುರಿತ ಈ ವಿಚಾರಣೆಯನ್ನು ಮುಂದೂಡಬೇಕಿದೆ ಎಂದು ಕೋರಿತು.
ಕೇಂದ್ರದ ಪರ ಹಾಜರಿದ್ದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ‘ಕಾಯ್ದೆಗೆ ತಿದ್ದುಪಡಿ ತರುವ ಕುರಿತು ತಜ್ಞರ ಅಭಿಪ್ರಾಯ ಪಡೆಯಲು ಸರ್ಕಾರವು ಸಮಿತಿ ರಚಿಸಿದೆ. ಇದರ ಕಾರ್ಯ ನಿರ್ವಹಣೆಯ ಅವಧಿಯನ್ನೂ ವಿಸ್ತರಿಸಲಾಗಿದೆ. ನವೆಂಬರ್ ವೇಳೆಗೆ ವರದಿ ಸಲ್ಲಿಸುವ ನಿರೀಕ್ಷೆಯಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅಧ್ಯಕ್ಷತೆಯ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಪಿ.ಎಸ್. ನರಸಿಂಹ, ಪಂಕಜ್ ಮಿಥಾಲ್ ಹಾಗೂ ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠಕ್ಕೆ ತಿಳಿಸಿದರು.
‘ಮಧ್ಯಸ್ತಿಕೆದಾರನಾಗಲು ಅರ್ಹತೆ ಇಲ್ಲದ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಯನ್ನು ನವೆಂಬರ್ ಮಧ್ಯದವರೆಗೆ ಮಧ್ಯಸ್ತಿಕೆದಾರನಾಗಿ ನಾಮನಿರ್ದೇಶನ ಮಾಡಬಹುದೇ’ ಎಂದು ಪೀಠವು ಪ್ರಶ್ನಿಸಿತು.
‘ಪರಿಣತರ ಸಮಿತಿ ಸಲ್ಲಿಸಿದ ವರದಿಯನ್ನು ಸಾಂವಿಧಾನಿಕ ಪೀಠದ ಪರಾಮರ್ಶೆಗೆ ಸಲ್ಲಿಸಲಾಗುವುದು. ಆಗ ಕಾನೂನಿನ ತಿದ್ದುಪಡಿ ಬಗ್ಗೆಯೂ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಅಟಾರ್ನಿ ಜನರಲ್ ತಿಳಿಸಿದರು. ಬಳಿಕ ವಿಚಾರಣೆಯನ್ನು ಮುಂದೂಡಲಾಯಿತು.
ನ್ಯಾಯಾಲಯಗಳಲ್ಲಿ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವುದರ ಬದಲು, ಮಧ್ಯಸ್ತಿಕೆ ಮೂಲಕ ಪರಿಹರಿಸಿಕೊಳ್ಳುವುದಕ್ಕೆ ಮಸೂದೆಯು ಉತ್ತೇಜನ ನೀಡುತ್ತದೆ. ಆ ಮೂಲಕ ಕೋರ್ಟ್‌ಗಳ ಮೇಲೆ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶ ಇದರ ಹಿಂದಿದೆ.
ಕೇಂದ್ರ ಸಚಿವ ಸಂಪುಟ ಸಭೆಯಲ್ಲೂ ಉದ್ದೇಶಿತ ಮಸೂದೆಗೆ ಅನುಮೋದನೆ ಸಿಕ್ಕಿದೆ. ಅಂತರರಾಷ್ಟ್ರೀಯ ಮಧ್ಯಸ್ತಿಕೆಗಳು ಭಾರತದಲ್ಲಿ ನಡೆದರೆ ಅದನ್ನು ಊರ್ಜಿತಗೊಳಿಸುವ ಅಂಶಗಳು ಇದರಲ್ಲಿವೆ.
ಕೇಂದ್ರ ಕಾನೂನು ಸಚಿವಾಲಯವು, ಮಾಜಿ ಕಾನೂನು ಕಾರ್ಯದರ್ಶಿ ಟಿ.ಕೆ. ವಿಶ್ವನಾಥನ್ ಅವರ ಅಧ್ಯಕ್ಷತೆಯಲ್ಲಿ ಪರಿಣತರ ಸಮಿತಿ ರಚಿಸಿದೆ. ಅಟಾರ್ನಿ ಜನರಲ್ ಕೂಡ ಇದರ ಸದಸ್ಯರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.