ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಗಣರಾಜ್ಯೋತ್ಸವ ಸಂಭ್ರಮ ಕಸಿದ ಕೋವಿಡ್‌ ಸ್ಥಿತಿ

Last Updated 26 ಜನವರಿ 2021, 7:09 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಈ ವರ್ಷ ಗಣರಾಜ್ಯೋತ್ಸವ ಆಚರಣೆಯ ಸಂಭ್ರಮವು ಕೋವಿಡ್‌ ಪರಿಸ್ಥಿತಿಯಿಂದಾಗಿ ಮುಸುಕಾಗಿತ್ತು. ಪಥಸಂಚಲನ ನಡೆದ ರಾಜಪಥದ ಕಡೆಗೆ ಹೆಚ್ಚಿನ ವೀಕ್ಷಕರಿಗೆ ಪ್ರವೇಶ ಇರಲಿಲ್ಲ. ಶಾಲೆಗಳಲ್ಲಿಯೂ ಆಚರಣೆ ಇರಲಿಲ್ಲ. ಮಕ್ಕಳ ಸಂಭ್ರಮ ಬಹುತೇಕ ಟಿ.ವಿ ವೀಕ್ಷಣೆಗಷ್ಟೇ ಸೀಮಿತವಾಗಿತ್ತು.

ಪ್ರತಿ ವರ್ಷವೂ ಗಣರಾಜ್ಯೋತ್ಸವ ಸಮಾರಂಭಕ್ಕೆ ಶಾಲಾ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಹಾಜರಾಗುತ್ತಿದ್ದರು. ಈ ಬಾರಿ ಶಾಲೆಗಳು ಬಂದ್ ಆಗಿದ್ದವು. ಹೀಗಾಗಿ, ಬಣ್ಣ, ಬಣ್ಣದ ಉಡುಗೆ ತೊಟ್ಟು, ಶಾಲೆಗಳಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವೂ ಇರಲಿಲ್ಲ.

ಕೋವಿಡ್ ಮಾರ್ಗಸೂಚಿ ಮತ್ತು ಕೋವಿಡ್‌ನಿಂದ ಮೂಡಿರುವ ಪರಿಸ್ಥಿತಿ ಕಾರಣದಿಂದಾಗಿ ಈ ವರ್ಷ ಪಥಸಂಚಲನ ವೀಕ್ಷಣೆಗೆ ಪ್ರೇಕ್ಷಕರ ಸಂಖ್ಯೆಯನ್ನು 25 ಸಾವಿರಕ್ಕೆ ಸೀಮಿತಗೊಳಿಸಲಾಗಿತ್ತು. 15 ವರ್ಷಕ್ಕಿಂತ ಕೆಳಗಿನವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಸಾಮಾನ್ಯವಾಗಿ ಪ್ರೇಕ್ಷಕರ ಹಾಜರಾತಿ 1.15 ಲಕ್ಷ ಇರುತ್ತಿತ್ತು.

ಆದರೂ ಕೋವಿಡ್‌ ಮಾರ್ಗಸೂಚಿ, ನಿರ್ಬಂಧದ ಅರಿವು ಇಲ್ಲದ ಪೋಷಕರು ಮಕ್ಕಳನ್ನೂ ಕರೆತಂದಿದ್ದರು. ಆದರೆ, ಅವರಿಗೆ ಭದ್ರತಾ ಸಿಬ್ಬಂದಿ ಪ್ರವೇಶದ್ವಾರದಲ್ಲಿಯೇ ತಡೆದು ವಾಪಸು ಕಳುಹಿಸಿದರು. ಪರೇಡ್‌ನಲ್ಲಿ ಭಾಗಿಯಾಗಿದ್ದ ತಮ್ಮ ಸಂಬಂಧಿಗಳ ಸಂಭ್ರಮವನ್ನು ವೀಕ್ಷಿಸುವ ಅವಕಾಶವೂ ಇರಲಿಲ್ಲ.

‘ನನ್ನ ಸಹೋದರ ಪರೇಡ್‌ನಲ್ಲಿ ಭಾಗಿಯಾಗಿದ್ದ. ಅದನ್ನು ನೋಡಲು ಉತ್ಸಾಹದಿಂದ ಬಂದಿದ್ದೆ. ನಾನು ಮಾಸ್ಕ್ ಧರಿಸಿದ್ದರೂ, ನನಗೆ ಪ್ರವೇಶ ಸಿಗಲಿಲ್ಲ’ ಎಂದು 12 ವರ್ಷದ ಶ್ರುತಿ‌ ಹೇಳಿದರು.

ಪ್ರವೇಶ ನೀಡದಿದ್ದ ಮೇಲೆ ಪಾಸ್‌ ಏಕೆ ನೀಡಬೇಕಿತ್ತು ಎಂದು ಅವರ ತಂದೆ ರಾಮ್ ಭಾರ್ಗವ್ ಅಸಮಾಧಾನ ಹೊರಹಾಕಿದರು. 7 ವರ್ಷದ ಅಭಿವನ್‌ ಶುಕ್ಲಾನದು ಇಂಥದೇ ಬೇಸರದ ಭಾವ. ನಾವು ಈ ಬಾರಿ ಟಿ.ವಿ ಯಲ್ಲಿಯೇ ಪಥಸಂಚಲನ ಮತ್ತು ಸ್ತಬ್ಧಚಿತ್ರಗಳನ್ನು ನೋಡಬೇಕಾಯಿತು ಎಂದು ಹೇಳಿದನು.

72ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಈ ವರ್ಷ ಹಲವು ಬದಲಾವಣೆಗಳನ್ನು ಕೋವಿಡ್ ಕಾರಣದಿಂದಾಗಿ ತರಲಾಗಿತ್ತು. 55 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿದೇಶಿ ಅತಿಥಿಗಳ ಭಾಗವಹಿಸುವಿಕೆ ಇರಲಿಲ್ಲ. ಪಥಸಂಚಲನದ ಅಂತರವನ್ನು ಹಿಂದಿನ 8.5 ಕಿ.ಮೀ ನಿಂದ ಈ ವರ್ಷ 3.5 ಕಿ.ಮೀ.ಗೆ ಇಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT