ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಚಾಂಗ್ ಅಬ್ಬರ | 12 ಜನರ ಸಾವು; ಆಂಧ್ರದಲ್ಲಿ 140 ರೈಲು, 40 ವಿಮಾನ ಸಂಚಾರ ರದ್ದು

Published 5 ಡಿಸೆಂಬರ್ 2023, 10:20 IST
Last Updated 5 ಡಿಸೆಂಬರ್ 2023, 10:20 IST
ಅಕ್ಷರ ಗಾತ್ರ

ಚೆನ್ನೈ: ಮಿಚಾಂಗ್‌ ಚಂಡಮಾರುತವು ದಕ್ಷಿಣ ಭಾರತದ ತೀರ ಪ್ರದೇಶದಲ್ಲಿ ಧಾರಾಕಾರ ಮಳೆ ಹಾಗೂ ರಕ್ಕಸ ಅಲೆಗಳನ್ನು ಎಬ್ಬಿಸಿದೆ. ಕರಾವಳಿ ಪ್ರದೇಶದ ರಸ್ತೆಗಳು ಜಲಾವೃತವಾಗಿವೆ. ಮಳೆಯ ತೀವ್ರತೆಗೆ ಮಗು ಸೇರಿ ಒಂಭತ್ತು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

‘ಆಂಧ್ರಪ್ರದೇಶದ ಬಾಪ್ಟಾಲಕ್ಕೆ ಚಂಡಮಾರುತವು ಮುಂದಿನ ಮೂರು ಗಂಟೆಗಳಲ್ಲಿ ಅಪ್ಪಳಿಸಲಿದೆ. ಇದರ ವೇಗ ಪ್ರತಿ ಗಂಟೆಗೆ 110 ಕಿ.ಮೀ. ಇದ್ದು, ಮಳೆಯ ಅಬ್ಬರ ತೀವ್ರಗೊಂಡಿದೆ’ ಎಂದು ಹವಾಮಾನ ಇಲಾಖೆ ತನ್ನ ಎಕ್ಸ್ ಖಾತೆಯಲ್ಲಿ ಹೇಳಿದೆ.

ಗೋಡೆ ಕುಸಿದು ತಿರುಪತಿಯಲ್ಲಿ ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದಾನೆ. ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಈವರೆಗೂ ಒಟ್ಟು 12 ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್ಸ್ ಹಾಗೂ ತಯಾರಿಕಾ ಕೇಂದ್ರ ಎಂದೇ ಕರೆಯಲಾಗುವ ಚೆನ್ನೈ ಮಳೆನೀರಿನಲ್ಲಿ ಮುಳುಗಿದೆ. ಜನರು ಮನೆಯಿಂದ ಹೊರಬರಲಾರದಂತೆ ದಿಗ್ಬಂಧನ ಹೇರಿದೆ. ಕಾರುಗಳು ನೀರಿನಲ್ಲಿ ಮುಳುಗಿವೆ. ವಿಮಾನ ನಿಲ್ದಾಣದ ರನ್‌ವೇ ಜಾಲವೃತಗೊಂಡಿದ್ದು ಇಡೀ ನಿಲ್ದಾಣವೇ ನದಿಯಂತೆ ಕಾಣುತ್ತಿದೆ. ಹೀಗಾಗಿ ಇಲ್ಲಿಂದ ವಿಮಾನಗಳ ಹಾರಾಟ ಸಂಪೂರ್ಣ ರದ್ದಾಗಿದೆ.

‘ಆಂಧ್ರದ ಕೆಲ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ 20 ಸೆಂ.ಮೀ. ಮಳೆಯಾಗಲಿದೆ. ಮುಂಜಾಗ್ರತ ಕ್ರಮವಾಗಿ ಸುಮಾರು 8 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ’ ಎಂದು ಸ್ಥಳೀಯ ಆಡಳಿತ ಹೇಳಿದೆ.

ಆಂಧ್ರಪ್ರದೇಶದಲ್ಲಿ ಬೀಸುವ ಬಿರುಗಾಳಿ ಹಾಗೂ ರಭಸವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮರಗಳು ಧರೆಗುರುಳಿವೆ. ವಿದ್ಯುತ್ ತಂತಿಗಳು ತುಂಡಾಗಿವೆ. ಈ ಎಲ್ಲದರ ಪರಿಣಾಮವಾಗಿ 140 ರೈಲುಗಳ ಸಂಚಾರ ಹಾಗೂ 40 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚೆನ್ನೈನಲ್ಲಿರುವ ತೈವಾನ್‌ ಮೂಲದ ಫಾಕ್ಸ್‌ಕಾನ್‌ ಹಾಗೂ ಪೆಗೆಟ್ರಾನ್‌ ಕಂಪನಿಗಳು ಐಫೋನ್ ತಯಾರಿಕೆಯನ್ನು ಸ್ಥಗಿತಗೊಳಿಸಿವೆ. 2015ರ ಡಿಸೆಂಬರ್‌ನಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಚೆನ್ನೈನಲ್ಲಿ 290 ಜನ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT