ಚಂಡೀಗಢ: ಕೃಷಿ ತ್ಯಾಜ್ಯ ಸುಡುವುದನ್ನು ಈ ಕೂಡಲೇ ಸ್ಥಗಿತಗೊಳಿಸುವಂತೆ ದೆಹಲಿಯ ಸುತ್ತಮುತ್ತಲಿನ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಮರುದಿನವೇ(ಬುಧವಾರ) ಪಂಜಾಬ್‌ನಲ್ಲಿ 2 ಸಾವಿರ ಪ್ರಕರಣಗಳು ವರದಿಯಾಗಿವೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ತವರು ಜಿಲ್ಲೆಯಾದ ಸಂಗ್ರೂರ್‌ನಲ್ಲಿಯೇ ಗರಿಷ್ಠ ಕೂಳೆ ಸುಟ್ಟ (ಕೃಷಿ ತ್ಯಾಜ್ಯ ಸುಟ್ಟ) ಪ್ರಕರಣ ವರದಿಯಾಗಿವೆ.
‘ಪಂಜಾಬ್‌ನಲ್ಲಿ ಇದುವರೆಗೆ 22,981 ಕೃಷಿ ತ್ಯಾಜ್ಯ ಸುಟ್ಟ ಪ್ರಕರಣಗಳು ದಾಖಲಾಗಿವೆ. ಬುಧವಾರ ಒಂದರಲ್ಲೇ 2,003 ಪ್ರಕರಣಗಳು ವರದಿಯಾಗಿವೆ’ ಎಂದು ಪಂಜಾಬ್ ರಿಮೋಟ್ ಸೆನ್ಸಿಂಗ್ ಸೆಂಟರ್ ಮಾಹಿತಿ ನೀಡಿದೆ.
‘ಸಂಗ್ರೂರ್‌ನಲ್ಲಿ 466, ಬಟಿಂಡಾದಲ್ಲಿ 221, ಬರ್ನಾಲಾದಲ್ಲಿ 216, ಫರೀದ್‌ಕೋಟ್‌ನಲ್ಲಿ 150, ಮಾನ್ಸಾದಲ್ಲಿ 131, ಪಟಿಯಾಲಾದಲ್ಲಿ 106, ಫಿರೋಜ್‌ಪುರದಲ್ಲಿ 103 ಮತ್ತು ಲುಧಿಯಾನಾದಲ್ಲಿ 96 ಕೃಷಿ ತ್ಯಾಜ್ಯ ಸುಟ್ಟ ಪ್ರಕರಣಗಳು ವರದಿಯಾಗಿವೆ’ ಎಂದು ತಿಳಿಸಿದೆ.
ವಿಶೇಷ ಡಿಜಿಪಿ(ಕಾನೂನು ಮತ್ತು ಸುವ್ಯವಸ್ಥೆ) ಅರ್ಪಿತ್ ಶುಕ್ಲಾ ಅವರನ್ನು ಪೊಲೀಸ್ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ ಡಿಜಿಪಿ ಗೌರವ್ ಯಾದವ್, ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಕೃಷಿ ತ್ಯಾಜ್ಯ ಸುಡುವ ಕುರಿತಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಏತನ್ಮಧ್ಯೆ ಹರಿಯಾಣದ ಹಲವು ಭಾಗಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕಗಳು ತೀವ್ರ ಮತ್ತು ಅತ್ಯಂತ ಕಳಪೆ ವರ್ಗಗಳಲ್ಲಿ ಕಂಡುಬಂದಿವೆ.