ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಬಾಂಡ್‌ ವಿವರ: ಸಮಯ ವಿಸ್ತರಿಸಿ; ಸುಪ್ರೀಂ ಕೋರ್ಟ್‌ಗೆ ಅರ್ಜಿ

Published 4 ಮಾರ್ಚ್ 2024, 23:39 IST
Last Updated 4 ಮಾರ್ಚ್ 2024, 23:39 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಸಮಗ್ರ ವಿವರಗಳನ್ನು ಸಲ್ಲಿಸುವುದಕ್ಕೆ ಜೂನ್ 30ರವರೆಗೂ ಸಮಯ ನೀಡಬೇಕು ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ (ಎಸ್‌ಬಿಐ), ಸೋಮವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

‘ಏಪ್ರಿಲ್‌ 12, 2019ರಿಂದ ಈ ವಿವರಗಳನ್ನು ಕ್ರೋಡಿಕರಿಸಬೇಕಾಗಿದೆ. ಇದು ಸಂಕೀರ್ಣವಾದ ಪ್ರಕ್ರಿಯೆ’ ಎಂದು ಈ ಕುರಿತು ಸಲ್ಲಿಸಿದ ಅರ್ಜಿಯಲ್ಲಿ ಎಸ್‌ಬಿಐ ಕಾರಣವನ್ನು ನೀಡಿದೆ.

ಚುನಾವಣಾ ಬಾಂಡ್‌ಗಳು ಅಸಾಂವಿಧಾನಿಕ ಎಂದು ಫೆ.15ರಂದು ಘೋಷಿಸಿದ್ದ ಸುಪ್ರೀಂ ಕೋರ್ಟ್‌, ಬಾಂಡ್‌ಗಳ ಸಮಗ್ರ ವಿವರ
ಗಳನ್ನು ಮಾರ್ಚ್‌ 6ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಅಲ್ಲದೆ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಸೂಚಿಸಿತ್ತು.

ಚುನಾವಣಾ ಬಾಂಡ್‌ಗಳನ್ನು ಎಸ್‌ಬಿಐ ಮೂಲಕ ಮಾರಾಟ ಮಾಡಲಾಗಿತ್ತು. ಬ್ಯಾಂಕ್, ಈಗ ಕೆಲವೊಂದು ವ್ಯಾವಹಾರಿಕವಾದ ಸಮಸ್ಯೆಗಳನ್ನು ಉಲ್ಲೇಖಿಸಿದೆ. ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ್ದ ಮೂರು ವಾರಗಳ ಗಡುವಿನಲ್ಲಿ ಇವುಗಳನ್ನು ಸಲ್ಲಿಸುವುದು ಕಷ್ಟಕರ ಎಂದು ಹೇಳಿದೆ.

‘ಸುಪ್ರೀಂ’ಗೆ ಸಲ್ಲಿಸಿರುವ ಅರ್ಜಿಯಲ್ಲಿ ಎಸ್‌ಬಿಐ, ‘2019ರ ಏಪ್ರಿಲ್‌ 12ರಿಂದ ತೀರ್ಪು ಪ್ರಕಟವಾದ ದಿನದವರೆಗೂ ಒಟ್ಟಾರೆ 22,217 ಚುನಾವಣಾ ಬಾಂಡ್‌ಗಳನ್ನು ಬಳಸಿ ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲಾಗಿದೆ’ ಎಂದು ಉಲ್ಲೇಖಿಸಿದೆ. 

ನಗದೀಕರಣಗೊಂಡ ಬಾಂಡ್‌ಗಳನ್ನು ಮುದ್ರೆ ಹಾಕಿದ ಲಕೋಟೆಗಳಲ್ಲಿ ಮುಂಬೈನ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ಇಡಲಾಗಿದೆ. ಅಯೋಗಕ್ಕೆ ಸಲ್ಲಿಸಬೇಕಾದ ವಿವರಗಳಂತೆ 44,434 ಮಾಹಿತಿಗಳನ್ನು ಪ್ರತ್ಯೇಕಗೊಳಿಸಿ, ಹೋಲಿಕೆ ಮಾಡಿ, ಕ್ರೋಡೀಕರಿಸಬೇಕಿದೆ ಎಂದು ಹೇಳಿದೆ.

ಈ ಪ್ರಕ್ರಿಯೆಗನ್ನು ಕೋರ್ಟ್ ನಿಗದಿಪಡಿಸಿರುವ ಮೂರು ವಾರಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗದು ಎಂದು ತಿಳಿಸಿರುವ ಬ್ಯಾಂಕ್‌, ಗಡುವನ್ನು ಜೂನ್‌ 30ರವರೆಗೂ ವಿಸ್ತರಿಸುವಂತೆ ಮನವಿ ಮಾಡಿದೆ. 

ದಾನಿಗಳ ವಿವರಗಳನ್ನು ಗೋಪ್ಯವಾಗಿಡಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದೇ ಕಾರಣದಿಂದ ಬಾಂಡ್‌ಗಳ ವಿವರಗಳು ಹಾಗೂ ದಾನಿಗಳ ಹೆಸರನ್ನು ಪರಸ್ಪರ ಹೋಲಿಸಿ ವಿವರ ಸಂಗ್ರಹಿಸಬೇಕಾಗಿದೆ. ಈ ಎಲ್ಲವೂ ಸಂಕೀರ್ಣವಾದ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದೆ.

‘ದಾನಿಗಳ ವಿವರ ಸಂಗ್ರಹಿಸಲು ಪ್ರತಿ ಬಾಂಡ್‌ ವಿತರಿಸಿದ ದಿನಾಂಕದ ಮಾಹಿತಿ ಪರಿಶೀಲಿಸಬೇಕು. ಬಾಂಡ್‌ಗಳನ್ನು ರಾಜಕೀಯ ಪಕ್ಷಗಳು ತಮ್ಮ ಖಾತೆಗಳಿರುವ ಬ್ಯಾಂಕ್‌ಗಳಲ್ಲಿ ನಗದೀಕರಣಗೊಳಿಸಿಕೊಂಡಿವೆ. ಅದೇ ಪ್ರಕಾರ, ಎರಡನ್ನೂ ಗುರುತಿಸಿ ಹೋಲಿಕೆ ಮಾಡಬೇಕಾಗಿದೆ. ಬಾಂಡ್‌ಗಳ ಸಂಖ್ಯೆ ಸೇರಿದಂತೆ ಕೆಲವು ಮಾಹಿತಿಗಳು ಡಿಜಿಟಲ್‌ ಸ್ವರೂಪದಲ್ಲಿವೆ. ಖರೀದಿದಾರರ ಹೆಸರು, ಕೆವೈಸಿ ವಿವರಗಳು ಭೌತಿಕ ಸ್ವರೂಪದಲ್ಲಿಯೂ ಇವೆ. ಎಲ್ಲ ಮಾಹಿತಿಗಳನ್ನು ಡಿಜಿಟಲ್‌ ಸ್ವರೂಪದಲ್ಲಿಯೇ ಇಡದಿರುವುದರ ಉದ್ದೇಶ, ಯೋಜನೆಯ ಗುರಿಯಂತೆ ಮಾಹಿತಿಗಳು ಸುಲಭವಾಗಿ ಸಿಗದಂತಿರಬೇಕು ಎಂಬುದೇ ಆಗಿದೆ’ ಎಂದು ಬ್ಯಾಂಕ್ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT