ನವದೆಹಲಿ: ಗಾಯಕ ಹನಿ ಸಿಂಗ್ ಹಾಗೂ ಅವರ ಪತ್ನಿ ಶಾಲಿನಿ ತಲ್ವಾರ್ ಅವರಿಗೆ ದೆಹಲಿಯ ನ್ಯಾಯಾಲಯ ಮಂಗಳವಾರ ವಿಚ್ಛೇದನ ಮಂಜೂರು ಮಾಡಿದೆ.
ಶಾಲಿನಿ ಅವರು, ಹನಿ ಸಿಂಗ್ ಹಾಗೂ ಅವರ ಕುಟುಂಬದವರು ತಮಗೆ ಮಾನಸಿಕ, ದೈಹಿಕ, ಭಾವನಾತ್ಮಕ, ಲೈಂಗಿಕ ಹಾಗೂ ಆರ್ಥಿಕವಾಗಿ ಕಿರುಕುಳ ನೀಡಿದ್ದಾರೆ. ಇದರಿಂದಾಗಿ ತಮಗೆ ಪ್ರಾಣ ಭಯ ಎದುರಾಗಿದೆ ಎಂದು ಆರೋಪಿಸಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ನಂತರ ಇಬ್ಬರೂ ಮಾತುಕತೆ ಮೂಲಕ ಸಂಧಾನ ಮಾಡಿಕೊಂಡಿದ್ದರು. ಅದರಂತೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಿಂಗ್ ಅವರು ಶಾಲಿನಿಗೆ ₹ 1 ಕೋಟಿ ಡಿಮ್ಯಾಂಡ್ ಡ್ರಾಫ್ಟ್ ನೀಡಿದ್ದರು. ಬಳಿಕ, ಆರೋಪಗಳನ್ನು ಹಿಂಪಡೆಯಲಾಗಿತ್ತು.
ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಪರಮ್‌ಜಿತ್ ಸಿಂಗ್ ಅವರು ಇಂದು ವಿಚ್ಛೇಧನ ಆದೇಶ ಪ್ರಕಟಿಸುವ ಮುನ್ನ, ಸಾಮರಸ್ಯದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಇಚ್ಛೆ ಇದೆಯೇ ಎಂದು ಸಿಂಗ್ ಹಾಗೂ ಶಾಲಿನಿ ಅವರನ್ನು ಕೇಳಿದರು. ಈ ವೇಳೆ ಸಿಂಗ್, ಒಟ್ಟಿಗೆ ಜೀವಿಸುವ ಅಂತಹ ಯಾವುದೇ ಸಾಧ್ಯತೆ ಇಲ್ಲ ಎಂದು ಪ್ರತಿಕ್ರಿಯಿಸಿದರು.
2011 ಜನವರಿ 23 ರಂದು ಹನಿ ಸಿಂಗ್ ಮತ್ತು ಶಾಲಿನಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.