ನವದೆಹಲಿ: ಭಯೋತ್ಪಾದಕ ಗುಂಪುಗಳಿಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ಜೈಲಿನಲ್ಲಿರುವ ಲೋಕಸಭೆ ಸಂಸದ ಎಂಜಿನಿಯರ್ ರಶೀದ್‌ಗೆ ದೆಹಲಿ ನ್ಯಾಯಾಲಯ ಅಕ್ಟೋಬರ್ 2ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಮುಂಬರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಮಧ್ಯಂತರ ಜಾಮೀನು ಕೋರಿ ರಶೀದ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಅವರು ಜಾಮೀನು ಮಂಜೂರು ಮಾಡಿ ಆದೇಶಸಿದ್ದಾರೆ.
ಎಂಜಿನಿಯರ್ ರಶೀದ್ ಎಂದೇ ಖ್ಯಾತರಾಗಿರುವ ಶೇಖ್ ಅಬ್ದುಲ್ ರಶೀದ್, 2024ರ ಲೋಕಸಭಾ ಚುನಾವಣೆಯಲ್ಲಿ ಬಾರಾಮುಲ್ಲಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರ ವಿರುದ್ಧ ಜಯ ಸಾಧಿಸಿದ್ದರು.
ಜುಲೈ 5 ರಂದು, ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ನ್ಯಾಯಾಲಯ ರಶೀದ್‌ಗೆ ಕಸ್ಟಡಿ ಪೆರೋಲ್ ನೀಡಿತ್ತು .
2017ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಗುಂಪುಗಳಿಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ಎನ್‌ಐಎ ರಶೀದ್ ವಿರುದ್ಧ ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿತ್ತು. 2019ರಿಂದ ಅವರು ಜೈಲಿನಲ್ಲಿದ್ದಾರೆ.
ಈ ಪ್ರಕರಣದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್, ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಸೇರಿದಂತೆ ಹಲವರ ವಿರುದ್ಧ ಎನ್‌ಐಎ ಚಾರ್ಜ್ ಶೀಟ್ ಸಲ್ಲಿಸಿತ್ತು.