ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿಗೆ ಹಣ ನೀಡುವಂತೆ ಶರತ್‌ ಚಂದ್ರ ರೆಡ್ಡಿಗೆ ಬೆದರಿಸಿದ್ದ ಕವಿತಾ: ಸಿಬಿಐ

Published 13 ಏಪ್ರಿಲ್ 2024, 13:20 IST
Last Updated 13 ಏಪ್ರಿಲ್ 2024, 13:20 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಅಡಿಯಲ್ಲಿ ಅರಬಿಂದೊ ಫಾರ್ಮಾ ಪ್ರವರ್ತಕ ಶರತ್‌ ಚಂದ್ರ ರೆಡ್ಡಿ ಅವರಿಗೆ ಮಂಜೂರಾದ ಐದು ರಿಟೇಲ್‌ ವಲಯಗಳಿಗೆ ಪ್ರತಿಯಾಗಿ ಎಎಪಿಗೆ ₹ 25 ಕೋಟಿ ಪಾವತಿಸುವಂತೆ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಬೆದರಿಕೆ ಹಾಕಿದ್ದರು ಎಂಬ ಆರೋಪವಿದೆ ಎಂಬುದಾಗಿ ಸಿಬಿಐ, ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.

ಒಂದು ವೇಳೆ ಇಷ್ಟು ಹಣವನ್ನು ದೆಹಲಿಯ ಆಡಳಿತಾರೂಢ ಎಎಪಿ ಪಕ್ಷಕ್ಕೆ ಪಾವತಿಸದಿದ್ದರೆ, ತೆಲಂಗಾಣ ಮತ್ತು ದೆಹಲಿಯಲ್ಲಿ ತಮ್ಮ ವ್ಯವಹಾರಕ್ಕೆ ಹಾನಿ ಎದುರಾಗುತ್ತದೆ ಎಂದು ಕವಿತಾ ಅವರು ರೆಡ್ಡಿ ಅವರಿಗೆ ಎಚ್ಚರಿಸಿದ್ದರು ಎಂದು ಸಿಬಿಐ ಹೇಳಿದೆ.

ದೆಹಲಿ ಅಬಕಾರಿ ನೀತಿ ಹಗರಣದ ಜತೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ರೆಡ್ಡಿ ಅವರು, ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ಮಾಫಿಸಾಕ್ಷಿಯಾಗಿ ಬದಲಾಗಿದ್ದಾರೆ. ಅವರ ವಿರುದ್ಧ ಸಿಬಿಐ ಇನ್ನೂ ಆರೋಪಪಟ್ಟಿ ಸಲ್ಲಿಸಬೇಕಿದೆ. 

ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರ ಒತ್ತಾಯ ಮತ್ತು ಭರವಸೆಯ ಮೇರೆಗೆ ರೆಡ್ಡಿ ಅವರು ದೆಹಲಿ ಅಬಕಾರಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸಿಬಿಐ, ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.  ‘ದೆಹಲಿ ಸರ್ಕಾರದ ಜತೆ ನನಗೆ ಸಂಪರ್ಕವಿದ್ದು, ಅಬಕಾರಿ ನೀತಿ ಅಡಿಯಲ್ಲಿ ದೆಹಲಿಯಲ್ಲಿ ಮದ್ಯ ವ್ಯವಹಾರ ನಡೆಸಲು ನೆರವು ನೀಡುವುದಾಗಿ ಕವಿತಾ ಅವರು ರೆಡ್ಡಿಗೆ ಭರವಸೆ ನೀಡಿದ್ದರು’ ಎಂದು ಸಿಬಿಐ ಶುಕ್ರವಾರ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹೇಳಿದೆ.

‘ಮದ್ಯ ವ್ಯವಹಾರವನ್ನು ಪಡೆಯಲು ಸಗಟು ವ್ಯಾಪಾರಕ್ಕಾಗಿ ₹ 25 ಕೋಟಿ, ಪ್ರತಿ ವಲಯದ ಚಿಲ್ಲರೆ ವ್ಯಾಪಾರಕ್ಕಾಗಿ ₹ 5 ಕೋಟಿ ಅನ್ನು ಮುಂಗಡವಾಗಿ ಎಎಪಿಗೆ ಪಾವತಿಸಬೇಕು ಮತ್ತು ಅಷ್ಟೇ ಮೊತ್ತವನ್ನು ತನ್ನ ಸಹವರ್ತಿಗಳಾದ ಅರುಣ್‌ ಆರ್‌ ಪಿಳ್ಳೈ ಮತ್ತು ಅಭಿಷೇಕ್‌ ಬೋಯಿನ್‌ಪಲ್ಲಿ ಅವರಿಗೂ ಪಾವತಿಸಬೇಕು. ಈ ಇಬ್ಬರು, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಪ್ರತಿನಿಧಿ ವಿಜಯ್‌ ನಾಯರ್‌ ಅವರೊಂದಿಗೆ ಸಮನ್ವಯ ಸಾಧಿಸುತ್ತಾರೆ ಎಂದು ಕವಿತಾ ಅವರು ಶರತ್‌ ಚಂದ್ರ ರೆಡ್ಡಿ ಅವರಿಗೆ ತಿಳಿಸಿದ್ದರು’ ಎಂದು ಸಿಬಿಐ ತಿಳಿಸಿದೆ.  ನ್ಯಾಯಾಲಯವು ಕವಿತಾ ಅವರನ್ನು ಶುಕ್ರವಾರ ಇದೇ 15ರವರೆಗೆ ಸಿಬಿಐ ವಶಕ್ಕೆ ನೀಡಿ ಆದೇಶಿಸಿದೆ.

‘2021ರ ಮಾರ್ಚ್‌ ಮತ್ತು ಮೇ ತಿಂಗಳಲ್ಲಿ ಅಬಕಾರಿ ನೀತಿ ರೂಪಿಸುವಾಗ ಪಿಳ್ಳೈ, ಬೋಯಿನ್‌ಪಲ್ಲಿ ಮತ್ತು ಬುಚ್ಚಿಬಾಬು ಗೋರಂಟ್ಲಾ ಅವರು ದೆಹಲಿಯ ಒಬೆರಾಯ್‌ ಹೋಟೆಲ್‌ನಲ್ಲಿ ತಂಗಿದ್ದರು. ನೀತಿಯನ್ನು ತಮಗೆ ಬೇಕಾದಂತೆ ರೂಪಿಸಿಕೊಳ್ಳುವ ಉದ್ದೇಶದಿಂದ ಅವರೆಲ್ಲ ಅಲ್ಲಿ ತಂಗಿದ್ದರು’ ಎಂದು ಏಜೆನ್ಸಿ ಹೇಳಿದೆ.

ಈ ಸಂಬಂಧ ಕವಿತಾ ಅವರಿಂದ ಬೆಂಬಲದ ಭರವಸೆ ದೊರೆತ ಬಳಿಕ, ಅರಬಿಂದೊ ರಿಯಾಲಿಟಿ ಮತ್ತು ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಯು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅಡಿಯಲ್ಲಿ 2021ರ ಮಾರ್ಚ್‌ನಲ್ಲಿ ಕವಿತಾ ಅವರ ಎನ್‌ಜಿಒ ‘ತೆಲಂಗಾಣ ಜಾಗೃತಿ’ಗೆ ₹ 80 ಲಕ್ಷ ಪಾವತಿಸಿದೆ. ಅಲ್ಲದೆ ಕವಿತಾ ಅವರು 2021ರ ಜೂನ್‌–ಜುಲೈನಲ್ಲಿ ತೆಲಂಗಾಣದ ಮೆಹಬೂಬ್‌ ನಗರದಲ್ಲಿರುವ ಕೃಷಿ ಭೂಮಿಗಾಗಿ ತನ್ನೊಂದಿಗೆ ಮಾರಾಟ ಒಪ್ಪಂದ ಮಾಡಿಕೊಳ್ಳುವಂತೆ ರೆಡ್ಡಿ ಅವರನ್ನು ಒತ್ತಾಯಿಸಿದ್ದರು. ಇದಕ್ಕಾಗಿ ₹ 14 ಕೋಟಿ ಪಾವತಿಸುವಂತೆ ಒತ್ತಾಯಿಸಿದ್ದರು ಎಂಬುದೂ ತನಿಖೆಯಿಂದ ಗೊತ್ತಾಗಿದೆ ಎಂದು ಸಿಬಿಐ ಆರೋಪಿಸಿದೆ.

ಎಎಪಿ ಆರೋಪವೇನು?
‘ರೆಡ್ಡಿ ಒಡೆತನದ ಕಂಪನಿಯು ಬಿಜೆಪಿಗೆ ಚುನಾವಣಾ ಬಾಂಡ್‌ಗಳ ಮೂಲಕ 59.5 ಕೋಟಿ ದೇಣಿಗೆ ನೀಡಿದೆ. ಎರಡು ವರ್ಷಗಳಿಂದ ಈ ಪ್ರಕರಣದಲ್ಲಿ ಹುಡುಕುತ್ತಿರುವ ಹಣದ ಜಾಡು ಇಲ್ಲಿದೆ’ ಎಂದು ಎಎಪಿ ಮಾರ್ಚ್‌ 24ರಂದು ಆರೋಪಿಸಿತ್ತು.

‘ಸುಪ್ರೀಂ’ನಲ್ಲಿ ವಿಚಾರಣೆ ನಾಳೆ

ನವದೆಹಲಿ (ಪಿಟಿಐ): ತಮ್ಮ ಬಂಧನವನ್ನು ಎತ್ತಿ ಹಿಡಿದ ಹೈಕೋರ್ಟ್ ಆದೇಶದ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಡೆಸಲಿದೆ.

ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಪ್ರಕರಣಗಳ ಪಟ್ಟಿಯಂತೆ, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತಾ ಅವರನ್ನೊಳಗೊಂಡ ಪೀಠವು ದೆಹಲಿ ಹೈಕೋರ್ಟ್‌ನ ಏ. 9 ರ ಆದೇಶವನ್ನು ಪ್ರಶ್ನಿಸಿ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಏ. 15ರಂದು ಆಲಿಸಲಿದೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT