ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಬಾಗಿಲಿಗೆ ಪಡಿತರ ತಲುಪಿಸಿ

ಪಿಡಿಎಸ್‌ ವಿತರಣೆ ವ್ಯವಸ್ಥೆ ಸುಧಾರಣೆ ತ್ವರಿತಗೊಳಿಸಲು ಸಲಹೆ
Last Updated 29 ಜೂನ್ 2018, 19:22 IST
ಅಕ್ಷರ ಗಾತ್ರ

ನವದೆಹಲಿ: ಹಸಿವಿನಿಂದ ಜನರು ಸಾವನ್ನಪ್ಪುವ ಪ್ರಕರಣಗಳನ್ನು ತಪ್ಪಿಸುವುದಕ್ಕಾಗಿ ಗರಿಷ್ಠ ಸಹಾಯಧನದಲ್ಲಿ ನೀಡುವ ಆಹಾರಧಾನ್ಯಗಳನ್ನು ಫಲಾನುಭವಿಯ ಮನೆಗೇ ತಲುಪಿಸುವಂತೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಸಾರ್ವಜನಿಕ ವಿತರಣೆ ವ್ಯವಸ್ಥೆಯನ್ನು (ಪಿಡಿಎಸ್‌– ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರ ಧಾನ್ಯ ವಿತರಣೆ) ಬಲಪಡಿಸಲು ತುರ್ತಾಗಿ ಕೈಗೊಳ್ಳಬೇಕಾದ ಹಲವು ಕ್ರಮಗಳನ್ನು ದೆಹಲಿಯಲ್ಲಿ ನಡೆದ ರಾಜ್ಯಗಳ ಆಹಾರ ಸಚಿವರ ಸಭೆಯಲ್ಲಿ ಚರ್ಚಿಸಲಾಗಿದೆ.

‘ಯಾರೂ ಹಸಿವಿನಿಂದ ಸಾಯಬಾರದು ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಮಾರ್ಗದರ್ಶಿ ಸೂತ್ರವನ್ನು ರಾಜ್ಯಗಳಿಗೆ ನೀಡಲಾಗಿದೆ. ಅದರಲ್ಲಿ ಮನೆ ಬಾಗಿಲಿಗೆ ಆಹಾರ ಪೂರೈಕೆಯೂ ಸೇರಿದೆ’ ಎಂದು ಕೇಂದ್ರ ಆಹಾರ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಸಭೆಯ ಬಳಿಕ ತಿಳಿಸಿದ್ದಾರೆ.

ಮೂರು ತಿಂಗಳಿಂದ ಪಡಿತರ ಆಹಾರ ಧಾನ್ಯವನ್ನು ಪಡೆದುಕೊಳ್ಳದ ಫಲಾನುಭವಿಗಳ ಮೇಲೆ ನಿಗಾ ಇರಿಸಬೇಕು. ಈ ಫಲಾನುಭವಿಗಳು ಪಡಿತರ ಧಾನ್ಯ ಅಗತ್ಯ ಇಲ್ಲದಷ್ಟು ಶ್ರೀಮಂತರಾಗಿರಬಹುದು. ಅಂಥವರ ಪಡಿತರ ಚೀಟಿಯನ್ನು ರದ್ದುಪಡಿಸಬೇಕು ಎಂದು ಅವರು ಹೇಳಿದ್ದಾರೆ.

ಮೂರು ತಿಂಗಳಿಂದ ಫಲಾನುಭವಿ ನ್ಯಾಯಬೆಲೆ ಅಂಗಡಿಗೆ ಬಂದಿಲ್ಲ ಎಂದಾದರೆ ಅವರಿಗೆ ಅಂಗಡಿಗೆ ಬರಲು ಸಾಧ್ಯವಿಲ್ಲದಷ್ಟು ಅನಾರೋಗ್ಯ ಅಥವಾ ನಿಶ್ಶಕ್ತಿಯೂ ಇರಬಹುದು. ಅಂಥವರಿಗೆ ಧಾನ್ಯವನ್ನು ಮನೆಗೇ ತಲುಪಿಸುವುದು ಅಗತ್ಯ ಎಂದೂ ಪಾಸ್ವಾನ್‌ ಸೂಚಿಸಿದ್ದಾರೆ.

2013ರ ಜುಲೈನಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಯಾದ ಬಳಿಕ ಪಡಿತರ ಆಹಾರ ಧಾನ್ಯಗಳ ದರವನ್ನು ಏರಿಕೆ ಮಾಡಿಯೇ ಇಲ್ಲ. ಪಿಡಿಎಸ್‌ ವಿತರಣೆ ವ್ಯವಸ್ಥೆ ಸುಧಾರಣೆ ನಿಧಾನಗತಿಯಲ್ಲಿರುವ ರಾಜ್ಯಗಳು ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದೂ ಅವರು ಹೇಳಿದ್ದಾರೆ.

ಸಭೆಯಲ್ಲಿ 15 ರಾಜ್ಯಗಳ ಆಹಾರ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಬಾಕಿ ಅನುದಾನ ಬಿಡುಗಡೆ ಕೇಂದ್ರಕ್ಕೆ ಮನವಿ

ನವದೆಹಲಿ: ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ 2013ರಿಂದ ಮೂರು ವರ್ಷಗಳ ಕಾಲ ವಿವಿಧ ರೀತಿಯ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗಿದ್ದು, ಈ ಸಂಬಂಧ ಬಾಕಿ ಇರಿಸಿಕೊಂಡಿರುವ ₹ 1000 ಕೋಟಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಕೋರಿದೆ.

ಕೇಂದ್ರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ನೇತೃತ್ವದಲ್ಲಿ ಶುಕ್ರವಾರ ಇಲ್ಲಿ ನಡೆದ ಎಲ್ಲ ರಾಜ್ಯಗಳ ಆಹಾರ ಸಚಿವರ ಸಭೆಯಲ್ಲಿ ಈ ಬೇಡಿಕೆಯೂ ಒಳಗೊಂಡ ಮನವಿಯನ್ನು ಸಲ್ಲಿಸಲಾಗಿದೆ.

ರಾಜ್ಯದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ರೈತರಿಂದ ಗೋವಿನಜೋಳ, ರಾಗಿ ಮತ್ತು ಭತ್ತವನ್ನು ಖರೀದಿಸಿದೆ. ಕೇಂದ್ರ ಸರ್ಕಾರದಿಂದ ₹ 1000 ಕೋಟಿ ಅನುದಾನ ಬಿಡುಗಡೆ ಬಾಕಿ ಇದೆ ಎಂದು ಸಚಿವ ಜಮೀರ್‌ ಅಹಮದ್‌ ಸಭೆಗೆ ತಿಳಿಸಿದರು.

ರಾಜ್ಯದಲ್ಲಿ ನ್ಯಾಯಬೆಲೆ ಅಂಗಡಿ ನಡೆಸುವವರಿಗೆ ಪ್ರಸ್ತುತ ಪ್ರತಿ ಕ್ವಿಂಟಲ್‌ಗೆ ₹ 87 ಕಮಿಷನ್‌ ನೀಡಲಾಗುತ್ತಿದೆ. ಈ ಮೊತ್ತವನ್ನು ₹ 150ಕ್ಕೆ ಹೆಚ್ಚಿಸಬೇಕು. ಗೋದಾಮುಗಳಿಂದ ಅಂಗಡಿಗಳಿಗೆ ಸಾಗಣೆ ಮಾಡುವ ಸರಕಿಗೆ ಪ್ರತಿ ಕ್ವಿಂಟಲ್‌ಗೆ ₹ 90 ನೀಡಲಾಗುತ್ತಿದ್ದು, ಅದನ್ನು ₹ 110ಕ್ಕೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ವಯ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸಾಮಾಜಿಕ ಆಡಿಟ್‌ ಕಾರ್ಯ ಕೈಗೆತ್ತಿಕೊಳ್ಳಲು ಅನುಕೂಲವಾಗುವಂತೆ ರಾಜ್ಯಗಳಿಗೆ ವಾರ್ಷಿಕ ₹ 8ರಿಂದ 10 ಕೋಟಿ ಅನುದಾನ ಮಂಜೂರು ಮಾಡುವಂತೆಯೂ ಅವರು ಒತ್ತಾಯಿಸಿದರು.

ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಬೆಂಬಲಬೆಲೆ ಯೋಜನೆ ಅಡಿ 6.50 ಲಕ್ಷ ಟನ್‌ ತೊಗರಿ ಖರೀದಿಸಲಾಗಿದ್ದು, ಹೆಚ್ಚಿನ ಪ್ರಮಾಣದ ದಾಸ್ತಾನು ಇದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿ ತೊಗರಿ ಬೇಳೆ ವಿತರಣೆಗೆ ಕೇಂದ್ರ ಅನುಮತಿ ನೀಡಬೇಕು.

ಈಗಾಗಲೇ ರಾಜ್ಯ ಸರ್ಕಾರ ಈವ್ಯವಸ್ಥೆ ಅಡಿ ಸಾರ್ವಜನಿಕರಿಗೆ ತೊಗರಿ ಬೇಳೆ ವಿತರಿಸುತ್ತಿದ್ದು, ವಾರ್ಷಿಕ ₹ 400 ಕೋಟಿ ಖರ್ಚಾಗುತ್ತಿದೆ. ಕೇಂದ್ರವೇ ಈ ವೆಚ್ಚವನ್ನು ಭರಿಸಬೇಕು ಎಂದು ಸಚಿವರು ಕೋರಿದರು. ಇಲಾಖೆಯ ಕಾರ್ಯದರ್ಶಿ ಪಂಕಜ್‌ ಪಾಂಡೆ ಈ ಸಂದರ್ಭ ಹಾಜರಿದ್ದರು.ಈ ಬೇಡಿಕೆ ಈಡೇರಿಸುವುದಾಗಿ ಸಚಿವ ಪಾಸ್ವಾನ್‌ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT