ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಡತೆ ದಾಳಿ: ಆಹಾರ ಭದ್ರತೆ ಕುಸಿಯುವ ಅಪಾಯ

27 ವರ್ಷಗಳಲ್ಲೇ ಅತ್ಯಂತ ದೊಡ್ಡ ಪಿಡುಗು
Last Updated 24 ಮೇ 2020, 20:15 IST
ಅಕ್ಷರ ಗಾತ್ರ

ಕೋಟ್ಯಂತರ ಸಂಖ್ಯೆಯಲ್ಲಿ ಬಂದು, ಹಸಿರು ಹೊಲಗಳಲ್ಲಿನ ಬೆಳೆಯನ್ನು ತಿಂದುಹೋಗುವ ಮರುಭೂಮಿ ಮಿಡತೆಗಳ ಗುಂಪು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಹಲವು ಜಿಲ್ಲೆಗಳಿಗೆ ಲಗ್ಗೆ ಇಟ್ಟಿವೆ. ಈಗಾಗಲೇ ಸಾವಿರಾರು ಹೆಕ್ಟೇರ್‌ನಷ್ಟು ಬೆಳೆ ನಾಶ ಮಾಡಿರುವ ಮಿಡತೆಗಳು, ಮತ್ತಷ್ಟು ಹೊಲಗಳಿಗೆ ಲಗ್ಗೆ ಇಡುತ್ತಲೇ ಇವೆ. ಇವನ್ನು ನಿಯಂತ್ರಿಸದೇ ಹೋದರೆ ಆಹಾರ ಧಾನ್ಯದ ಉತ್ಪಾದನೆಗೆ ಹೊಡೆತ ಬೀಳಲಿದೆ. ದೇಶದ ಆಹಾರ ಭದ್ರತೆಗೆ ಧಕ್ಕೆಯಾಗಲಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ರಕ್ಕಸ ಸ್ವರೂಪದ ಮಿಡತೆಗಳು

ಮಧ್ಯ ಮತ್ತು ಪೂರ್ವ ಆಫ್ರಿಕಾ ಮತ್ತು ಏಷ್ಯಾದ ಮರಳುಗಾಡಿನಲ್ಲಿ ಈ ಮಿಡತೆಗಳು ಕಂಡುಬರುತ್ತವೆ. ಸಾಮಾನ್ಯ ಸ್ಥಿತಿಯಲ್ಲಿ ಇವು ಇಷ್ಟು ಅಪಾಯಕಾರಿ ಅಲ್ಲ. ಸಣ್ಣ ಸಣ್ಣ ಗುಂಪುಗಳಲ್ಲಿ ಇವು ಇರುತ್ತವೆ. ಆದರೆ ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾದರೆ, ಇವು ಉಗ್ರ ಸ್ವರೂಪ ಪಡೆಯುತ್ತವೆ. ಸಾಮಾನ್ಯ ಸ್ಥಿತಿಯಲ್ಲಿ ತಿನ್ನುವುದಕ್ಕಿಂತ ಅಧಿಕ ಪ್ರಮಾಣದ ಆಹಾರ ಸೇವಿಸುತ್ತವೆ.

ಉಷ್ಣಾಂಶ ಏರಿಕೆಯಾದಂತೆ ಮಿಡತೆಗಳ ಸಂತಾನೋತ್ಪತಿ ಕ್ರಿಯೆ ವೇಗ ಪಡೆಯುತ್ತದೆ. ಹೀಗಾಗಿ ಅವುಗಳ ಸಂಖ್ಯೆ ಸ್ಫೋಟಗೊಳ್ಳುತ್ತವೆ. ಕೋಟ್ಯಂತರ ಮಿಡತಗೆಳಿರುವ ದೊಡ್ಡ ಗುಂಪುಗಳು ರೂಪುಗೊಳ್ಳುತ್ತವೆ. ಇವುಗಳ ಹಾವಳಿ ಹಾನಿಕಾರಕ ಮಟ್ಟವನ್ನು ಪಡೆಯುತ್ತದೆ.

ಹಸಿರು ಗೋಚರಿಸುವ ಹೊಲಗಳ ಮೇಲೆ ಇವು ದಾಳಿ ಇಡುತ್ತವೆ. ಕೆಲವೇ ನಿಮಿಷಗಳಲ್ಲಿ ಇಡೀ ಹೊಲದಲ್ಲಿ ಇರುವ ಬೆಳೆಯನ್ನು ತಿಂದು, ಹಸಿರು ಹುಡುಕುತ್ತಾ ಮುಂದುವರಿಯುತ್ತವೆ. ಇವು ಸಾಗುವ ಹಾದಿಯಲ್ಲಿರುವ ಹೊಲಗಳಲ್ಲಿನ ಬೆಳೆಯೆಲ್ಲಾ ನಾಶವಾಗುತ್ತದೆ. ಮರಗಿಡಗಳೂ ಬೋಳಾಗುತ್ತವೆ.

ಒಂದು ಚದರ ಕಿ.ಮೀ.ನಷ್ಟು ದೊಡ್ಡದಿರುವ ಗುಂಪಿನಲ್ಲಿ ಇರುವ ಮಿಡತೆಗಳ ಸಂಖ್ಯೆ4 ಕೋಟಿ. 1ರಿಂದ 100 ಚದರ ಕಿ.ಮೀ.ನಷ್ಟು ವಿಸ್ತೀರ್ಣದ ಗುಂಪುಗಳೂ ಇರುತ್ತವೆ.

ಮಧ್ಯಪ್ರದೇಶ

ಮಧ್ಯಪ್ರದೇಶದಲ್ಲಿ ಪ್ರತಿವರ್ಷ ಈ ಮಿಡತೆಗಳು ದಾಳಿ ನಡೆಸುತ್ತವೆ. ಆದರೆ ಈ ಬಾರಿ ಬಂದಿರುವ ಮಿಡತೆಗಳ ಗುಂಪು 30 ವರ್ಷಗಳಲ್ಲೇ ಅತ್ಯಂತ ದೊಡ್ಡದು. ಮಿಡತೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಭಾರಿ ಪ್ರಮಾಣದಲ್ಲಿ ಕೀಟನಾಶಕ ಸಿಂಪಡಿಸಲು ಸಿದ್ಧತೆ ನಡೆಸಿದೆ.

* ಮಿಡತೆಗಳು ರಾಜಸ್ಥಾನದ ಮೂಲಕ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯನ್ನು ಪ್ರವೇಶಿಸಿವೆ

* ಈಗ ಮಾಳ್ವಾ ಜಿಲ್ಲೆಯನ್ನು ದಾಟಿ, ಭೋಪಾಲ್‌ನತ್ತ ಮುನ್ನುಗ್ಗುತ್ತಿವೆ

* ರಾಜ್ಯದಲ್ಲಿ, ₹ 8,000 ಕೋಟಿ ಮೌಲ್ಯದಷ್ಟು ಹೆಸರುಕಾಳು ಬೆಳೆ ನಾಶವಾಗಲಿದೆ ಎಂದು ಅಂದಾಜಿಸಲಾಗಿದೆ

* ಹತ್ತಿ ಬೆಳೆ ಮತ್ತು ತರಕಾರಿ ಬೆಳೆಗಳೂ ನಾಶವಾಗಿವೆ

* ಈ ಬಾರಿ ಮಿಡತೆಗಳು ಉಗ್ರ ಸ್ವರೂಪ ಪಡೆದಿವೆ. ಮರಗಳ ಹಸಿರೆಲೆಗಳನ್ನೂ ತಿಂದು, ಬೋಳು ಮಾಡುತ್ತಿವೆ

* ಮಿಡತೆಗಳು ರಾತ್ರಿಹೊತ್ತು ಹೊಲಗಳಲ್ಲಿ ವಿಶ್ರಮಿಸುತ್ತವೆ. ಹೀಗಾಗಿ ರಾತ್ರಿ ವೇಳೆ ಕೀಟನಾಶಕ ‘ಮಾಲಾಥಿಯಾನ್’ ಸಿಂಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ

ಉತ್ತರ ಪ್ರದೇಶ

* ರಾಜ್ಯದಲ್ಲಿ 27 ವರ್ಷಗಳಲ್ಲಿ, ಇದೇ ಅತ್ಯಂತ ದೊಡ್ಡ ಮಿಡತೆ ದಾಳಿ ಎಂದು ಅಧಿಕಾರಿಗಳು ಹೇಳಿದ್ದಾರೆ

* ರಾಜ್ಯದ ಝಾನ್ಸಿ ಜಿಲ್ಲೆಯನ್ನು ಮಾತ್ರ ಮಿಡತೆಗಳು ಪ್ರವೇಶಿಸಿವೆ. ಹತ್ತಿ ಬೆಳೆ ನಾಶವಾಗಿದೆ. ಗೋದಿ ಬೆಳೆ ನಾಶವಾಗುವ ಅಪಾಯ ಎದುರಾಗಿದೆ

* ರಾಜಸ್ಥಾನದ ಕೋಟಾ ಕಡೆಯಿಂದ ಮಿಡತೆಗಳ ಇನ್ನಷ್ಟು ಗುಂಪುಗಳು ಝಾನ್ಸಿಯತ್ತ ಬರುತ್ತಿವೆ

* 3.5 ಕಿ.ಮೀ.ನಷ್ಟು ಉದ್ದವಿರುವ ದೊಡ್ಡ ಗುಂಪೊಂದು ರಾಜ್ಯ ಪ್ರವೇಶಿಸಿದೆ ಎಂದು ಝಾನ್ಸಿ ಜಿಲ್ಲಾಡಳಿತ ಮಾಹಿತಿ ನೀಡಿದೆ

* ಇವನ್ನು ನಿಯಂತ್ರಿಸಲು ರಾಜಸ್ಥಾನದಿಂದ ತಜ್ಞರ ಆರು ತಂಡಗಳನ್ನು ಕರೆಸಿಕೊಳ್ಳಲಾಗಿದೆ

* ಅಗ್ನಿಶಾಮಕ ವಾಹನಗಳ ಟ್ಯಾಂಕ್‌ನಲ್ಲಿನ ನೀರಿಗೆ ಕೀಟನಾಶಕ ಮಿಶ್ರಣ ಮಾಡಿ, ಸಿಂಪಡಿಸಲು ಸಿದ್ಧತೆ ನಡೆಸಲಾಗಿದೆ

ರಾಜಸ್ಥಾನ

* ನವೆಂಬರ್‌–ಡಿಸೆಂಬರ್ ಅವಧಿಯಲ್ಲೇ ಮಿಡತೆಗಳು ದಾಳಿ ನಡೆಸಿ, ಕೋಟ್ಯಂತರ ಮೌಲ್ಯದ ಬೆಳೆ ನಾಶವಾಗಿತ್ತು

* ಪಾಕಿಸ್ತಾನ ಮತ್ತು ಇರಾನ್‌ ಕಡೆಯಿಂದ ಬರುತ್ತಿರುವ ಹೊಸ ಗುಂಪುಗಳು, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದತ್ತ ನುಗ್ಗುತ್ತಿವೆ

* ಕೃಷಿ ಸಚಿವಾಲಯದ ಅಧೀನದಲ್ಲಿ ಇರುವ, ‘ಮಿಡತೆ ನಿಯಂತ್ರಣ ಸಂಸ್ಥೆ’ಯನ್ನು ಬಲಪಡಿಸಿ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ

ನಿಯಂತ್ರಣಕ್ಕೆ ಕೈಜೋಡಿಸದ ಪಾಕಿಸ್ತಾನ

‘ಪೂರ್ವ ಆಫ್ರಿಕಾ, ಇರಾನ್ ಮತ್ತು ಪಾಕಿಸ್ತಾನದಲ್ಲಿಮರುಭೂಮಿ ಮಿಡತೆಗಳ ದೊಡ್ಡ ಗುಂಪುಗಳು ರೂಪುಗೊಳ್ಳುತ್ತಿದೆ. ಮೇ ಅಂತ್ಯದ ವೇಳೆಗೆ ಇವು ಭಾರತವನ್ನು ಪ್ರವೇಶಿಸಬಹುದು. ಇವುಗಳನ್ನು ನಿಯಂತ್ರಿಸಲು ಸಂಬಂಧಿತ ಎಲ್ಲಾ ದೇಶಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು’ ಎಂದು ವಿಶ್ವಸಂಸ್ಥೆಯ ‘ಆಹಾರ ಮತ್ತು ಕೃಷಿ ಸಂಘಟನೆ’ಯು ಮೇ 22ರಂದು ಎಚ್ಚರಿಕೆ ನೀಡಿತ್ತು.

‘ಮಿಡತೆಗಳನ್ನು ನಿಯಂತ್ರಿಸಲು ಒಗ್ಗಟ್ಟಾಗಿ ಕೆಲಸ ಮಾಡೋಣ. ನಿಮ್ಮಲ್ಲಿರುವ ಮಿಡತೆಗಳನ್ನು ನಾಶ ಮಾಡಲು ಅಗತ್ಯವಿರುವ ಮಾಲಾಥಿಯಾನ್ ಕೀಟನಾಶಕವನ್ನು ಒದಗಿಸುತ್ತೇವೆ’ ಎಂದು ಭಾರತ ಸರ್ಕಾರವು ಇರಾನ್ ಮತ್ತು ಪಾಕಿಸ್ತಾನಗಳಿಗೆ ಪತ್ರ ಬರೆದಿತ್ತು.

ಆದರೆ, ಪಾಕಿಸ್ತಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬದಲಿಗೆ ಪಾಕಿಸ್ತಾನವು ಚೀನಾ ಸಹಯೋಗದಲ್ಲಿ ಮಿಡತೆ ನಿಯಂತ್ರಣ ಕಾರ್ಯಕ್ರಮ ಆರಂಭಿಸಿದೆ. ಕೋವಿಡ್–19 ವಿರುದ್ಧದ ಒಗ್ಗಟ್ಟಾಗಿ ಹೋರಾಡೋಣ ಎಂದು ಭಾರತ ನೀಡಿದ್ದ ಕರೆಯನ್ನೂ ಪಾಕಿಸ್ತಾನ ಕಡೆಗಣಿಸಿತ್ತು.

ಇರಾನ್ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಇರಾನ್‌ಗೆ 25 ಟನ್‌ಗಳಷ್ಟು ಕೀಟನಾಶಕವನ್ನು ಭಾರತವು ಶೀಘ್ರವೇ ಒದಗಿಸಲಿದೆ.

(ಆಧಾರ: ಪಿಟಿಐ, ವಿಶ್ವಸಂಸ್ಥೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT