ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲಿಕುರ್ಚಿ ಸಿಗದೆ ಪ್ರಯಾಣಿಕ ಸಾವು ಪ್ರಕರಣ: ಏರ್ ಇಂಡಿಯಾಕ್ಕೆ ₹30 ಲಕ್ಷ ದಂಡ

Published 29 ಫೆಬ್ರುವರಿ 2024, 11:31 IST
Last Updated 29 ಫೆಬ್ರುವರಿ 2024, 11:31 IST
ಅಕ್ಷರ ಗಾತ್ರ

ನವದೆಹಲಿ: ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಟರ್ಮಿನಲ್‌ಗೆ ನಡೆದುಕೊಂಡು ಹೋಗುತ್ತಿದ್ದ 80 ವರ್ಷದ ಪ್ರಯಾಣಿಕರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಏರ್ ಇಂಡಿಯಾಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ₹ 30 ಲಕ್ಷ ದಂಡ ವಿಧಿಸಿದೆ.

ಫೆಬ್ರುವರಿ 12 ರಂದು ಈ ಘಟನೆ ನಡೆದಿತ್ತು. ಪ್ರಯಾಣಿಕನಿಗೆ ಗಾಲಿಕುರ್ಚಿ ನೀಡಲು ವಿಫಲವಾದ ಕಾರಣ ಏರ್ ಇಂಡಿಯಾಕ್ಕೆ ₹30 ಲಕ್ಷ ದಂಡ ವಿಧಿಸಲಾಗಿದೆ ಎಂದು ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಗೆ ಕಾರಣರಾದ ಉದ್ಯೋಗಿಗಳ ವಿರುದ್ಧ ವಿಮಾನಯಾನ ಸಂಸ್ಥೆ ತೆಗೆದುಕೊಂಡ ಯಾವುದೇ ಕ್ರಮದ ಬಗ್ಗೆ ಏರ್ ಇಂಡಿಯಾ ತಿಳಿಸಿಲ್ಲ. ಅಲ್ಲದೇ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಒದಗಿಸಲು ಸಂಸ್ಥೆ ವಿಫಲವಾಗಿದೆ ಎಂದು ಅವರು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ:

ಅಮೆರಿಕದ ಪಾಸ್‌ಪೋರ್ಟ್ ಹೊಂದಿದ್ದ ವೃದ್ಧ ದಂಪತಿ ಫೆ.12ರಂದು ಏರ್ ​ಇಂಡಿಯಾ ವಿಮಾನದ ಮೂಲಕ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಟರ್ಮಿನಲ್​ಗೆ ಹೋಗಲು ಇವರು 2 ಗಾಲಿಕುರ್ಚಿಗಳನ್ನು ಕಾಯ್ದಿರಿಸಿದ್ದರು. ಆದರೆ ಗಾಲಿಕುರ್ಚಿ ಕೊರತೆಯಿಂದ ಏರ್​ ಇಂಡಿಯಾ ಒಂದೇ ಗಾಲಿಕುರ್ಚಿ ಒದಗಿಸಿತ್ತು.

ಇದರಿಂದಾಗಿ ವೃದ್ಧ ತನ್ನ ಪತ್ನಿಯನ್ನು ಗಾಲಿಕುರ್ಚಿಯಲ್ಲಿ ಕೂರಿಸಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕುಸಿದು ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿತ್ತು.

‘ವಿಮಾನ ನಿಲ್ದಾಣದಲ್ಲಿ ಅವರಿಗೆ ಸಹಾಯ ಮಾಡಲು ಸಿಬ್ಬಂದಿ ಮುಂದಾಗಿದ್ದರು. ಗಾಲಿಕುರ್ಚಿ ನೀಡುವವರೆಗೆ ಕಾಯುವಂತೆ ವಿನಂತಿಸಲಾಗಿತ್ತು. ಆದರೆ ಅವರು ತಮ್ಮ ಪತ್ನಿಯೊಂದಿಗೆ ನಡೆದುಕೊಂಡು ಹೋಗಲು ನಿರ್ಧರಿಸಿದರು' ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದರು.

ತಮ್ಮ ಪ್ರಯಾಣದ ಸಮಯದಲ್ಲಿ ವಿಮಾನ ಹತ್ತುವಾಗ ಅಥವಾ ಇಳಿಯುವಾಗ ಸಹಾಯದ ಅಗತ್ಯವಿರುವ ಪ್ರಯಾಣಿಕರಿಗೆ ಸಾಕಷ್ಟು ಸಂಖ್ಯೆಯ ಗಾಲಿಕುರ್ಚಿಗಳು ಲಭ್ಯವಿರುವುದನ್ನು ಖಾತ್ರಿಪಡಿಸಿಕೊಳ್ಳಲು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ ಎಂದು ಡಿಜಿಸಿಎ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT