ಕೋಲ್ಕತ್ತ: ಬ್ಯಾರಿಕೇಡ್ ಅಳವಡಿಸಿದ್ದ ಪ್ರದೇಶಕ್ಕೆ ದ್ವಿಚಕ್ರ ವಾಹನ ನುಗ್ಗಿಸಿ, ರವೀಂದ್ರ ಭಾರತಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರನ್ನು ಗಾಯಗೊಳಿಸಿದ ಆರೋಪದ ಅಡಿಯಲ್ಲಿ ಕೋಲ್ಕತ್ತ ಪೊಲೀಸರ ಜೊತೆ ಕೆಲಸ ಮಾಡುವ ‘ನಾಗರಿಕ ಸ್ವಯಂಸೇವಕ’ನೊಬ್ಬನನ್ನು ಶನಿವಾರ ಬಂಧಿಸಲಾಗದೆ.
ಕೋಲ್ಕತ್ತದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಆಕೆಯ ಹತ್ಯೆಯನ್ನು ಖಂಡಿಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಬೈಕ್ ಸವಾರ ಅಲ್ಲಿಗೆ ನುಗ್ಗಿದ್ದರಿಂದ ಸುಮಾರು 5 ತಾಸು ಸಂಚಾರ ದಟ್ಟಣೆ ಉಂಟಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಸುಕಿನ 2 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ನಾಗರಿಕ ಸ್ವಯಂಸೇವಕನಿಗೆ ತಪ್ಪಿಸಿಕೊಳ್ಳಲು ಸಂಚಾರ ಪೊಲೀಸ್ ಸಿಬ್ಬಂದಿಯೊಬ್ಬರು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
‘ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ, ನಾಗರಿಕ ಸ್ವಯಂಸೇವಕನನ್ನು ಬಂಧಿಸಲಾಗಿದೆ. ಸ್ವಯಂಸೇವಕನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.