ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪ್ರಕರಣಗಳಲ್ಲಿ ವಿಚಾರಣೆ ಮುಂದೂಡಲು ವಕೀಲರು ಕೋರಬಾರದು: ಸುಪ್ರೀಂ ಕೋರ್ಟ್

Published 3 ನವೆಂಬರ್ 2023, 16:45 IST
Last Updated 3 ನವೆಂಬರ್ 2023, 16:45 IST
ಅಕ್ಷರ ಗಾತ್ರ

ನವದೆಹಲಿ: ಹೊಸ ‍‍ಪ್ರಕರಣಗಳಲ್ಲಿ ವಕೀಲರು ವಿಚಾರಣೆಯನ್ನು ಮುಂದೂಡುವಂತೆ ಕೋರಬಾರದು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಶುಕ್ರವಾರ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ ‘ಒಂದಾದ ನಂತರ ಒಂದರಂತೆ ದಿನಾಂಕ ನಿಗದಿ ಮಾಡುತ್ತಲೇ ಹೋಗುವ’ (ತಾರೀಖ್ ಪೆ ತಾರೀಖ್) ನ್ಯಾಯಾಲಯ ಆಗುವುದನ್ನು ತಾವು ಬಯಸುವುದಿಲ್ಲ ಎಂದು ಚಂದ್ರಚೂಡ್ ಅವರು ಹೇಳಿದ್ದಾರೆ.

ಹೊಸ ಪ್ರಕರಣಗಳಲ್ಲಿ ವಕೀಲರು ದಿನಾಂಕವನ್ನು ಮುಂದೂಡುವಂತೆ ಕೋರುವುದರ ಬಗ್ಗೆ ಶುಕ್ರವಾರದ ಕಲಾಪ ಆರಂಭವಾದಾದ ಪ್ರಸ್ತಾಪಿಸಿದ ಸಿಜೆಐ, ಕಳೆದ ಎರಡು ತಿಂಗಳುಗಳಲ್ಲಿ ವಕೀಲರು 3,688 ಪ್ರಕರಣಗಳಲ್ಲಿ ವಿಚಾರಣೆ ಮುಂದೂಡುವಂತೆ ಕೋರಿದ್ದಾರೆ ಎಂದರು.

‘ತೀರಾ ಅಗತ್ಯ ಅಲ್ಲದಿದ್ದರೆ ವಿಚಾರಣೆ ಮುಂದೂಡಲು ಮನವಿ ಮಾಡಬೇಡಿ...’ ಎಂದು ಸಿಜೆಐ ಹೇಳಿದರು. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಸಿಜೆಐ ಜೊತೆ ಪೀಠದಲ್ಲಿ ಇದ್ದರು.

ನಟ ಸನ್ನಿ ಡಿಯೋಲ್ ಅಭಿನಯದ ಬಾಲಿವುಡ್ ಸಿನಿಮಾ ‘ದಾಮಿನಿ’ಯಲ್ಲಿ ಬರುವ ಜನಪ್ರಿಯ ಮಾತು ‘ತಾರೀಖ್ ಪೆ ತಾರೀಖ್’. ಇದು ಕೋರ್ಟ್‌ಗಳಲ್ಲಿ ಒಂದಾದ ನಂತರ ಒಂದರಂತೆ ದಿನಾಂಕ ನಿಗದಿ ಮಾಡುತ್ತ ಹೋಗುವ ಪ್ರವೃತ್ತಿಯನ್ನು ಹೇಳುತ್ತದೆ.

ವಕೀಲರ ಸಂಘಗಳ ಸಹಾಯದಿಂದಾಗಿ, ಹೊಸ ಅರ್ಜಿಗಳನ್ನು ಸಲ್ಲಿಸಿದ ನಂತರದಲ್ಲಿ ಅವುಗಳನ್ನು ವಿಚಾರಣೆಗೆ ಪಟ್ಟಿ ಮಾಡಿಕೊಳ್ಳುವುದರವರೆಗಿನ ಅವಧಿಯನ್ನು ಗಣನೀಯವಾಗಿ ತಗ್ಗಿಸಲಾಗಿದೆ ಎಂದು ಸಿಜೆಐ ಹೇಳಿದರು. ಆದರೆ ಪ್ರಕರಣಗಳು ನ್ಯಾಯಾಲಯಗಳ ಮುಂದೆ ವಿಚಾರಣೆಗೆ ನಿಗದಿಯಾದ ನಂತರದಲ್ಲಿ, ವಕೀಲರು ದಿನಾಂಕ ಮುಂದೂಡುವಂತೆ ಕೋರುತ್ತಿರುವುದು ಹೊರಜಗತ್ತಿಗೆ ಬಹಳ ಕೆಟ್ಟ ಸಂದೇಶವನ್ನು ರವಾನಿಸುತ್ತಿದೆ ಎಂದು ಸಿಜೆಐ ಬೇಸರ ವ್ಯಕ್ತಪಡಿಸಿದರು.

‘ವಿಚಾರಣೆ ಮುಂದೂಡುವಂತೆ ಕೋರಿ ನಮ್ಮ ಮುಂದೆ ನವೆಂಬರ್ 3ಕ್ಕೆ (ಶುಕ್ರವಾರ) 178 ಮನವಿಗಳಿವೆ. ಸೆಪ್ಟೆಂಬರ್‌ನಿಂದ ಅಕ್ಟೋಬರ್‌ವರೆಗಿನ ಅವಧಿಯಲ್ಲಿ ಇಂತಹ 3,688 ಮನವಿಗಳು ಆಗಿವೆ. ಇದು ವಿಚಾರಣೆಗಳನ್ನು ಚುರುಕುಗೊಳಿಸುವ ಉದ್ದೇಶವನ್ನೇ ಹಾಳುಮಾಡುತ್ತದೆ’ ಎಂದು ಸಿಜೆಐ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT