ಮುಂಬೈ: ಚಿನ್ನದ ಕಳ್ಳ ಸಾಗಣೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿರುವ ಮುಂಬೈನ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಘಟಕವು, ಬಂಧಿತರಿಂದ ₹16.71 ಕೋಟಿ ಮೌಲ್ಯದ 22.89 ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿನ್ನದ ಜೊತೆಗೆ ₹40 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ಧಾರೆ.
ಗುಂಪೊಂದು ಒಂದು ಸ್ಥಳದಿಂದ ಮತ್ತೊಂದೆಡೆಗೆ ಚಿನ್ನದ ಕಳ್ಳ ಸಾಗಣೆ ಮಾಡುತ್ತಿದೆ ಎಂಬ ಕುರಿತಂತೆ ಖಚಿತ ಮಾಹಿತಿ ಮೇರೆಗೆ ಡಿಆರ್‌ಐನ ಮುಂಬೈ ಘಟಕವು ಮೂವರನ್ನು ತಡೆದು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅವರ ಬ್ಯಾಗ್‌ಗಳಲ್ಲಿ ಚಿನ್ನದ ಗಟ್ಟಿಗಳು, ಮೊಟ್ಟೆಯ ಆಕಾರದ ಕ್ಯಾಪ್ಸುಲ್‌ಗಳು, ಚೈನ್‌ಗಳು ಪತ್ತೆಯಾಗಿವೆ ಎಂದು ಅದು ತಿಳಿಸಿದೆ.
ತನಿಖೆ ಮುಂದುವರಿದಂತೆ ಚಿನ್ನದ ಕಳ್ಳ ಸಾಗಣೆ ಮಾಡಿ ಬಂದ ₹40 ಲಕ್ಷದಷ್ಟು ಹಣವನ್ನು ಮನೆಯೊಂದರಲ್ಲಿ ಇರಿಸಲಾಗಿದೆ ಎಂಬ ಹೆಚ್ಚಿನ ಮಾಹಿತಿ ಆಧರಿಸಿ ಶೋಧ ನಡೆಸಿದಾಗ ನಗದು ಪತ್ತೆಯಾಗಿದೆ. ಕಸ್ಟಮ್ಸ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸಂಪೂರ್ಣ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಆರ್‌ಐ ತಿಳಿಸಿದೆ. ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.