ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಶಂಕರ್‌ರಿಂದ ಚೀನಾಕ್ಕೆ ಕ್ಲೀನ್‌ ಚಿಟ್‌: ಮಲ್ಲಿಕಾರ್ಜುನ ಖರ್ಗೆ

ವಿದೇಶಾಂಗ ವ್ಯವಹಾರಗಳ ಸಚಿವರ ಹೇಳಿಕೆಗೆ ಕಾಂಗ್ರೆಸ್‌ ಅಸಮಾಧಾನ
Published 13 ಏಪ್ರಿಲ್ 2024, 15:59 IST
Last Updated 13 ಏಪ್ರಿಲ್ 2024, 15:59 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಭೂಭಾಗವನ್ನು ಚೀನಾ ಅತಿಕ್ರಮಿಸುತ್ತಿರುವ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಹರಿಹಾಯ್ದಿದೆ.

‘ಈ ವಿಚಾರವಾಗಿ ಮೋದಿ ಅವರು ಚೀನಾಕ್ಕೆ ಕ್ಲೀನ್‌ ಚಿಟ್‌ ನೀಡಿದ್ದರು. ಈಗ ವಿದೇಶಾಂಗ ವ್ಯವಹಾರಗಳ ಸಚಿವರೂ ಮೋದಿ ಅವರ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

‘ನಮ್ಮ ನೆಲದ ಯಾವ ಭಾಗದ ಮೇಲೂ ಚೀನಾ ಅತಿಕ್ರಮಣ ಮಾಡಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರು ಈಚೆಗೆ ಹೇಳಿಕೆ ನೀಡಿದ್ದರು. ಇದನ್ನು ಖರ್ಗೆ ಅವರು, ‘ಚೀನಾಕ್ಕೆ ನೀಡಿರುವ ಮತ್ತೊಂದು ಕ್ಲೀನ್‌ ಚಿಟ್‌’ ಎಂದು ಕರೆದಿದ್ದಾರೆ.

2020ರಲ್ಲಿ ಗಾಲ್ವಾನ್‌ ಕಣಿವೆಯಲ್ಲಿ ಅತಿಕ್ರಮಣ ನಡೆಸಿದ್ದ ಚೀನಾ ಸೇನೆಯು 20 ಭಾರತೀಯ ಯೋಧರನ್ನು ಹತ್ಯೆಗೈದಿತ್ತು. ಆಗ ಹೇಳಿಕೆ ನೀಡಿದ್ದ ಮೋದಿ ಅವರು, ‘ಚೀನಾ ಸೇನೆ ನಮ್ಮ ಗಡಿ ಒಳಗೆ ಬಂದಿಲ್ಲ’ ಎಂದು ಹೇಳಿದ್ದರು. ಜೈಶಂಕರ್‌ ಅವರೂ ಈಗ ಅದೇ ರೀತಿ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಸರಣಿ ಪೋಸ್ಟ್‌ ಮಾಡಿರುವ ಖರ್ಗೆ, ‘ತಮ್ಮ ಕೆಂಪು ಕಣ್ಣುಗಳಿಗೆ ಚೀನಾದ 56 ಇಂಚಿನ ಕಣ್ಣುಪಟ್ಟಿಯನ್ನು ಹಾಕಿಕೊಂಡಿರುವ ಮೋದಿ ನೇತೃತ್ವದ ಸರ್ಕಾರವು ವಾರದೊಳಗೆ ಎರಡು ಬಾರಿ ಚೀನಾಕ್ಕೆ ಕ್ಲೀನ್‌ಚಿಟ್‌ ನೀಡಿದೆ’ ಎಂದು ಬರೆದಿದ್ದಾರೆ.

ಜೊತೆಗೆ, ‘ವಿದೇಶದ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ದೇಶದ ಪರವಾಗಿ ಜಾಗತಿಕ ಮಟ್ಟದಲ್ಲಿ ದ್ವನಿ ಎತ್ತಲು ಮೋದಿ ಅವರಿಗೆ ಅವಕಾಶವಿತ್ತು. ಆದರೆ, ಅವರು ಹಾಗೆ ಮಾಡುವಲ್ಲಿ ವಿಫಲರಾದರು. ಈಗ ಅವರ ಸಚಿವರು ಚೀನಾಕ್ಕೆ ಮತ್ತೊಂದು ಕ್ಲೀನ್‌ ಚಿಟ್ ನೀಡುತ್ತಿದ್ದಾರೆ’ ಎಂದು ಬರೆದಿದ್ದಾರೆ.

ಈ ವಿಚಾರವಾಗಿ ಮೋದಿ ಅವರನ್ನು ಪ್ರಶ್ನಿಸಿರುವ ಖರ್ಗೆ, ‘ಭಾರತದ ಗಡಿ ಬಳಿ ಚೀನಾ ನಡೆಸುತ್ತಿರುವ ಅತಿಕ್ರಮಣ, ಅದು ಅಕ್ರಮವಾಗಿ ನಿರ್ಮಿಸುತ್ತಿರುವ ಕಟ್ಟಡಗಳು, ಸೇನಾ ನೆಲೆಗಳ ನಿರ್ಮಾಣ ಕುರಿತು ನಾಲ್ಕು ವರ್ಷಗಳಿಂದ ದೇಶದ ಜನರು, ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸುತ್ತಲೇ ಇವೆ, ಆದರೆ ನೀವು (ಮೋದಿ) ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಲೇ ಇಲ್ಲ’ ಎಂದಿದ್ದಾರೆ.

‘ಚೀನಾ ಅಧ್ಯಕ್ಷರ ಜೊತೆ 19 ಸುತ್ತುಗಳ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾದರೂ ಯಾವ ಉದ್ದೇಶಕ್ಕೆ? ಭಾರತಕ್ಕೆ ಚೀನಾದ ಆಮದು ಹೆಚ್ಚಿಸುವ ಸಲುವಾಗಿಯೇ ಅಥವಾ ಚೀನಿ ನಿರ್ದೇಶಕರಿರುವ 3,000 ಕಂಪೆನಿಗಳಿಂದ ಪಿಎಂಕೇರ್‌ ನಿಧಿ ತೆಗೆದುಕೊಳ್ಳುವ ಸಲುವಾಗಿಯೇ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT