ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಧ್ರಪ್ರದೇಶ | ಅಪಹರಣಕ್ಕೊಳಗಾಗಿದ್ದ ಟಿಡಿಪಿಯ ಮೂವರು ಮತಗಟ್ಟೆ ಏಜೆಂಟರ ರಕ್ಷಣೆ

Published 13 ಮೇ 2024, 3:33 IST
Last Updated 13 ಮೇ 2024, 3:33 IST
ಅಕ್ಷರ ಗಾತ್ರ

ಅಮರಾವತಿ (ಆಂಧ್ರಪ್ರದೇಶ): ಚಿತ್ತೂರು ಜಿಲ್ಲೆಯಲ್ಲಿ ಅಪಹರಣಕ್ಕೊಳಗಾಗಿದ್ದ ಟಿಡಿಪಿಯ ಮೂವರು ಮತಗಟ್ಟೆ ಏಜೆಂಟರನ್ನು ಪತ್ತೆ ಹಚ್ಚಿ, ರಕ್ಷಿಸಲಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಮುಖೇಶ್ ಕುಮಾರ್ ಮೀನಾ ಸೋಮವಾರ ತಿಳಿಸಿದ್ದಾರೆ.

ಪುಂಗನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಚಿತ್ತೂರು ಜಿಲ್ಲೆಯ ಸೇಡಂ ಮಂಡಲದ ಬೋಕರಮಂಡ ಗ್ರಾಮದಿಂದ ಟಿಡಿಪಿ ಏಜೆಂಟರನ್ನು ಅಪಹರಿಸಲಾಗಿತ್ತು ಎಂದು ಸಿಇಒ ಕಚೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

188, 189 ಮತ್ತು 199 ಮತಗಟ್ಟೆಗಳಿಗೆ ಸೇರಿದ ಟಿಡಿಪಿ ಏಜೆಂಟರನ್ನು ವೈಎಸ್‌ಆರ್‌ಸಿಪಿ ಮುಖಂಡರು ಮತಗಟ್ಟೆಗೆ ಹೋಗುತ್ತಿದ್ದಾಗ ಅಪಹರಿಸಿದ್ದಾರೆ ಎಂದು ಟಿಡಿಪಿ ಜಿಲ್ಲಾ ಉಸ್ತುವಾರಿ ಜಗನ್ ಮೋಹನ್ ರಾಜು ದೂರು ನೀಡಿದ್ದರು.

ಚಿತ್ತೂರು ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ತ್ವರಿತವಾಗಿ ಸ್ಪಂದಿಸಿ, ಅಪಹರಣಕ್ಕೊಳಗಾದ ಏಜೆಂಟರನ್ನು ರಕ್ಷಿಸಿ ನಂತರ ಅವರ ಕರ್ತವ್ಯಕ್ಕೆ ಹಾಜರಾಗಲು ಅನುವು ಮಾಡಿಕೊಟ್ಟಿತು ಎಂದು ಸಿಇಒ ಹೇಳಿದ್ದಾರೆ. ಅಲ್ಲದೇ ಅಪಹರಣಕಾರರ ಪತ್ತೆಗೆ ತನಿಖೆ ನಡೆಯುತ್ತಿದೆ ಎಂದೂ ಅವರು ಹೇಳಿದ್ದಾರೆ.

ಇಂದು ಆಂಧ್ರಪ್ರದೇಶದಲ್ಲಿ 25 ಲೋಕಸಭೆ ಮತ್ತು 175 ವಿಧಾನಸಭಾ ಸ್ಥಾನಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯುತ್ತಿದೆ.

ವೈಎಸ್‌ಆರ್‌ಸಿಪಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ , ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಮತ್ತು ನಟ ಪವನ್ ಕಲ್ಯಾಣ್ ವಿಧಾನಸಭೆ ಚುನಾವಣೆ ಕಣದಲ್ಲಿರುವ ಪ್ರಮುಖರು.

ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಮತ್ತು ಜಗನ್ ಅವರ ಸಹೋದರಿ ವೈ.ಎಸ್ ಶರ್ಮಿಳಾ, ಬಿಜೆಪಿ ರಾಜ್ಯ ಅಧ್ಯಕ್ಷೆ ಪುರಂದೇಶ್ವರಿ ಲೋಕಸಭೆ ಚುನಾವಣೆ ಕಣದಲ್ಲಿರುವ ಪ್ರಮುಖರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT