ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಪ್ಟೋಕರೆನ್ಸಿ: 10 ಚೀನೀಯರ ವಿರುದ್ಧ ಇ.ಡಿ ಆರೋಪ ಪಟ್ಟಿ

Published 6 ಮಾರ್ಚ್ 2024, 13:26 IST
Last Updated 6 ಮಾರ್ಚ್ 2024, 13:26 IST
ಅಕ್ಷರ ಗಾತ್ರ

ನವದೆಹಲಿ: ಬಿಟ್‌ಕಾಯಿನ್‌ಗಳಂತಹ ಕ್ರಿಪ್ಟೋಕರೆನ್ಸಿಗಳ ಹೆಸರಿನಲ್ಲಿ ಹೂಡಿಕೆದಾರರನ್ನು ವಂಚಿಸಿದ ಆರೋಪ ಎದುರಿಸುತ್ತಿರುವ ಚೀನಾ ಮೂಲದ 10 ಜನರು ಸೇರಿದಂತೆ 299 ಘಟಕಗಳ ವಿರುದ್ಧ ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್‌ಎ) ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಆರೋಪ ಪಟ್ಟಿ ಸಲ್ಲಿಸಿದೆ.

ಪಿಎಂಎಲ್‌ಎ ಅಡಿ ಸಲ್ಲಿಸಲಾಗಿರುವ ದೂರನ್ನು ನಾಗಾಲ್ಯಾಂಡ್‌ನ ದಿಮಾಪುರ್‌ನಲ್ಲಿರುವ ವಿಶೇಷ ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿದೆ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಚೀನಾದವರ ನಿಯಂತ್ರಣದ 76 ಘಟಕಗಳು ಸೇರಿದಂತೆ ಒಟ್ಟು 299 ಘಟಕಗಳ ಮುಖ್ಯಸ್ಥರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಇದರಲ್ಲಿ ಚೀನಾ ಮೂಲದ 10 ನಿರ್ದೇಶಕರು ಮತ್ತು ಇಬ್ಬರು ಇತರ ವಿದೇಶಿ ಪ್ರಜೆಗಳ ಹೆಸರೂ ಇದೆ ಎಂದು ಅದು ಹೇಳಿದೆ.

ಕೊಹಿಮಾದ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ ಆಧರಿಸಿ ಇ.ಡಿ ಪಿಎಂಎಲ್‌ಎ ಪ್ರಕರಣದಡಿ ತನಿಖೆ ನಡೆಸಿದೆ. ಬಿಟ್‌ಕಾಯಿನ್‌ಗಳು ಮತ್ತು ಇತರ ಕ್ರಿಪ್ಟೋಕರೆನ್ಸಿಗಳ ಹೆಸರಿನಲ್ಲಿ ಹೂಡಿಕೆದಾರರನ್ನು ವಂಚಿಸಿದ ಆರೋಪದ ಮೇರೆಗೆ ಕೊಹಿಮಾ ಪೊಲೀಸರು ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದರು. 

‘ಡಮ್ಮಿ’ ನಿರ್ದೇಶಕರನ್ನು ಹೊಂದಿರುವ ವಿವಿಧ ‘ಶೆಲ್‌ ಕಂಪನಿ’ಗಳು ಬ್ಯಾಂಕ್‌ ಖಾತೆ ಮತ್ತು ವ್ಯಾಪಾರಿ ಐ.ಡಿಗಳನ್ನು ತೆರೆದು ಹಣಕಾಸಿನ ಅಪರಾಧಗಳನ್ನು ಎಸಗಿವೆ ಎಂದು ಇ.ಡಿ ತಿಳಿಸಿದೆ. ಅಕ್ರಮ ಆನ್‌ಲೈನ್‌ ಗೇಮಿಂಗ್‌, ಬೆಟ್ಟಿಂಗ್‌, ಬಿಟ್‌ಕಾಯಿನ್‌ಗಳಲ್ಲಿ ಹೂಡಿಕೆ ಮಾಡಿಸಿ ಜನರನ್ನು ವಂಚಿಸಲಾಗಿದೆ ಎಂದು ಅದು ಹೇಳಿದೆ.

ಈ ಪ್ರಕರಣದಲ್ಲಿ ದೇಶದಾದ್ಯಂತ ಶೋಧ ನಡೆಸಿ ₹455 ಕೋಟಿ ಮೌಲ್ಯದ ಸ್ಥಿರ ಆಸ್ತಿ ಮತ್ತು ಠೇವಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT