ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದ ಇಡಿ

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ
Published : 19 ಮೇ 2022, 2:54 IST
ಫಾಲೋ ಮಾಡಿ
Comments

ಮುಂಬೈ: ಉದ್ಯಮಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್‌ ಕುಂದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ.

ಅಶ್ಲೀಲ ಚಿತ್ರಗಳನ್ನು ನಿರ್ಮಿಸಿರುವ ಮತ್ತು ಅದನ್ನು ಕೆಲವು ಆ್ಯಪ್‌ಗಳಲ್ಲಿ ಪ್ರಸಾರ ಮಾಡಿರುವ ಆರೋಪದಲ್ಲಿ ರಾಜ್‌ ಕುಂದ್ರಾ ಅವರನ್ನು ಕಳೆದ ವರ್ಷ ಫೆಬ್ರುವರಿಯಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು.

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ರಾಜ್‌ ಕುಂದ್ರಾ ಪ್ರಮುಖ ಆರೋಪಿಯಾಗಿದ್ದಾರೆ. ಸದ್ಯ ರಾಜ್‌ ಕುಂದ್ರಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿದ್ದ ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ವಿಯಾನ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಸ್ಥಾಪಕರಾದ ರಾಜ್ ಕುಂದ್ರಾ ಮತ್ತು ಅವರ ಬ್ರಿಟನ್‌ನಲ್ಲಿರುವ ಸೋದರ ಸಂಬಂಧಿ, ಲಂಡನ್‌ನ ಕೆನ್ರಿನ್ ಗ್ರೂಪ್‌ನ ಅಧ್ಯಕ್ಷರಾದ ಪ್ರದೀಪ್ ಬಕ್ಷಿ ಈ ದಂಧೆಯ ಸೂತ್ರಧಾರರು ಎನ್ನಲಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈನ ಕ್ರೈಂ ಬ್ರ್ಯಾಂಚ್-ಸಿಐಡಿ, ಈ ಪ್ರಕರಣದಲ್ಲಿ 1,500 ಪುಟಗಳ ಮೊದಲ ಪೂರಕ ಚಾರ್ಜ್ ಶೀಟ್ ಅನ್ನು ಸಲ್ಲಿಸಿದೆ.

ರಾಜ್ ಕುಂದ್ರಾ ಮತ್ತು ಆತನ ಸಹಚರ ರಯಾನ್ ಥೋರ್ಪ್ ಅವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ.

ಭಾರತದಲ್ಲಿ ನಿಷೇಧಿಸಲಾಗಿರುವ ಅಶ್ಲೀಲ ಚಿತ್ರಗಳನ್ನು ತಯಾರಿಸುತ್ತಿದ್ದ ವಿಯಾನ್ ಮತ್ತು ಕೆನ್ರಿನ್ ಕಂಪನಿಗಳು ಅವುಗಳನ್ನು ಹಾಟ್‌ಶಾಟ್ಸ್ ಆ್ಯಪ್‌ಗೆ ಅಪ್ಲೋಡ್ ಮಾಡುತ್ತಿದ್ದವು. ಚಂದಾದಾರಿಕೆ ನೀಡಿ, ಸಾಮಾಜಿಕ ಮಾಧ್ಯಮದಲ್ಲಿ ಜಾಹೀರಾತುಗಳ ಮೂಲಕ ಪ್ರಚಾರ ಮಾಡುತ್ತಿದ್ದವು ಎಂದು ಉಲ್ಲೇಖಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿ ಗೆಹ್ನಾ ವಶಿಷ್ಠ್ (32), ಯಾಸ್ಮಿನ್ ಖಾನ್ (40), ಮೋನು ಜೋಶಿ (28), ಪ್ರತಿಭಾ ನಲವಡೆ (33), ಅತಿಫ್ ಅಹಮದ್ (24), ದೀಪಂಕರ್ ಖಾಸ್ನವೀಸ್ (38), ಭಾನುಸೂರ್ಯ ಠಾಕೂರ್ (26) ತನ್ವೀರ್ ಹಶ್ಮಿ (40) ಮತ್ತು ಉಮೇಶ್ ಕಾಮತ್ (39) ಅವರನ್ನು ಬಂಧಿಸಲಾಗಿತ್ತು.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT