ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಶಸ್ತ್ರಾಸ್ತ್ರ ವಿತರಕ ಸಂಜಯ್ ಭಂಡಾರಿ ಅವರ ಬ್ರಿಟನ್‌ನಲ್ಲಿರುವ ಎರಡು ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಅನುಮತಿ ಕೋರಿ ಜಾರಿ ನಿರ್ದೇಶನಾಲಯವು (ಇ.ಡಿ) ಇಲ್ಲಿನ ನ್ಯಾಯಾಲಯದ ಮೊರೆ ಹೋಗಿದೆ.
ಈ ಸ್ವತ್ತುಗಳ ಪೈಕಿ ಒಂದನ್ನು ಉದ್ಯಮಿ ರಾಬರ್ಟ್ ವಾದ್ರಾ ಅವರು ನವೀಕರಿಸಿದ್ದರು ಮತ್ತು ಅದರಲ್ಲಿ ಉಳಿದುಕೊಂಡಿದ್ದರು ಎಂದು ಆರೋಪಿಸಲಾಗಿದೆ.
ಭಂಡಾರಿ ಅವರಿಗೆ ಸೇರಿದ ಸ್ಥಿರಾಸ್ತಿಯು ಲಂಡನ್‌ನ ಬ್ರಿಯಾನ್‌ಸ್ಟನ್ ಸ್ಕ್ವೇರ್ ಮತ್ತು ಬೌರ್ಡನ್ ಸ್ಟ್ರೀಟ್‌ನಲ್ಲಿದೆ ಎಂದು ಇ.ಡಿ ಹೇಳಿದೆ.
ಲಂಡನ್‌ನಲ್ಲಿ ಯಾವುದೇ ಆಸ್ತಿಯ ಒಡೆತನ ಹೊಂದಿಲ್ಲ ಎಂದು ವಾದ್ರಾ ಅವರು ಈ ಹಿಂದೆ ಹೇಳಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಭಂಡಾರಿ ಅವರ ವಿರುದ್ಧ ನವೆಂಬರ್‌ನಲ್ಲಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದ ಇ.ಡಿ., ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಭಂಡಾರಿ ಅವರ ಬ್ರಿಟನ್‌ನಲ್ಲಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಅನುಮತಿ ಕೋರಿತ್ತು.
ಈ ಕುರಿತು ವಿಚಾರಣೆ ನಡೆಸಲು ನ್ಯಾಯಾಲಯವು ಜನವರಿ 29ಕ್ಕೆ ದಿನಾಂಕ ನಿಗದಿ ಪಡಿಸಿದೆ.
ಸಂಜಯ್ ಭಂಡಾರಿ 2016ರಲ್ಲಿ ಬ್ರಿಟನ್‌ಗೆ ಪಲಾಯನ ಮಾಡಿದ್ದು, ಇ.ಡಿ ಹಾಗೂ ಸಿಬಿಐ ಮಾಡಿರುವ ವಿನಂತಿಯ ಮೇರೆಗೆ ಅವರನ್ನು ಜನವರಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ ಸರ್ಕಾರ ಅನುಮೋದನೆ ನೀಡಿದೆ.