ಮುಂಬೈ: ‘ಬಿಜೆಪಿಯ ನಾಯಕರೊಂದಿಗೆ ಸೇರಿಕೊಂಡಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಕೆಲವು ಅಧಿಕಾರಿಗಳು ಜನರಿಂದ ಹಣದ ಸುಲಿಗೆ ಮಾಡುತ್ತಿದ್ದು, ನಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದ ಬಳಿಕ ಈ ಅಕ್ರಮವು ಬಹಿರಂಗಗೊಳ್ಳಲಿದೆ’ ಎಂದು ಶಿವಸೇನಾ (ಉದ್ಧವ್ ಬಣ) ಮುಖಂಡ ಸಂಜಯ್ ರಾವುತ್ ಹೇಳಿದರು.
‘ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಇಂತಹ ಅಕ್ರಮಗಳಲ್ಲಿ ತೊಡಗಿಸಿಕೊಂಡಿರುವವರ ಬಗ್ಗೆ ಗೊತ್ತಿದೆ’ ಎಂದು ಭಾನುವಾರ ದೂರಿದರು.
‘ಹಣ ಸುಲಿಗೆಯಲ್ಲಿ ಇ.ಡಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಜಿತು ನವ್ಲಾನಿ ಭಾಗಿಯಾಗಿದ್ದಾರೆ. ಈ ಹಿಂದಿನ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರವು ಇವರ ವಿರುದ್ಧ ಕಾನೂನು ಕ್ರಮ ಕೈಗೊಂಡಿತ್ತು. ಆದರೆ, ಈಗ ಅವರಿಗೆ ಇ.ಡಿ ಮತ್ತು ಫಡಣವೀಸ್ ಬೆಂಬಲವಿದೆ’ ಎಂದು ರಾವುತ್ ಆರೋಪಿಸಿದರು.
‘ಈ ಅಕ್ರಮದ ಬಗ್ಗೆ ತನಿಖೆ ನಡೆಸಲು ಎಂವಿಎ ಆಡಳಿತದಲ್ಲಿ ರಚಿಸಲಾಗಿದ್ದ ಎಸ್‌ಐಟಿಯನ್ನು ಫಡಣವೀಸ್ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ರದ್ದುಗೊಳಿಸಿದರು’ ಎಂದು ದೂರಿದರು.
‘ಇ.ಡಿ.ಯು ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ’ ಎಂದು ಟೀಕಿಸಿದರು.
ಚುನಾವಣಾ ಬಾಂಡ್‌ಗಳ ವಿಷಯದಲ್ಲಿ ಕೇಂದ್ರ ಹಣಕಾಸು ಸಚಿವರ ವಿರುದ್ಧ ಎಫ್‌ಐಆರ್ ದಾಖಲಾಗಿರುವುದನ್ನು ಉಲ್ಲೇಖಿಸಿದ ರಾವುತ್, ‘ಕೆಲವು ಇ.ಡಿ ಅಧಿಕಾರಿಗಳು ಬೃಹತ್ ಪ್ರಮಾಣದಲ್ಲಿ ಹಣ ಸುಲಿಗೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ’ ಎಂದು ಹೇಳಿದರು.