ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಪ್ರಧಾನಿ ಮನೆ ಮೇಲೆ ಇ.ಡಿ ದಾಳಿ ನಡೆಸಬಹುದು: ಮಹುವಾ ಮೊಯಿತ್ರಾ

Published 20 ನವೆಂಬರ್ 2023, 2:27 IST
Last Updated 20 ನವೆಂಬರ್ 2023, 2:27 IST
ಅಕ್ಷರ ಗಾತ್ರ

ನವದೆಹಲಿ: ‘ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮಣಿಸಿ ಆಸ್ಟ್ರೇಲಿಯಾ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದು, ಆಸ್ಟ್ರೇಲಿಯಾ ಪ್ರಧಾನಿ ಮನೆ ಮೇಲೆ ಜಾರಿ ನಿರ್ದೇಶಾಲಯ (ಇ.ಡಿ) ದಾಳಿ ನಡೆಸಬಹುದು’ ಎಂದು ತೃಣಮೂಲ ಕಾಂಗ್ರೆಸ್‌ನ ನಾಯಕಿ ಮಹುವಾ ಮೊಯಿತ್ರಾ ಪರೋಕ್ಷವಾಗಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ವಿಶ್ವಕಪ್‌ ಫೈನಲ್‌ ಪಂದ್ಯ ನಡೆದಿದ್ದು, ಐದು ಬಾರಿ ಚಾಂಪಿಯನ್‌ ಆಸ್ಟ್ರೇಲಿಯಾವನ್ನು ಸೋಲಿಸುವಲ್ಲಿ ಭಾರತ ವಿಫಲವಾಗಿದೆ. ಆರನೇ ಬಾರಿಗೆ ಕಪ್‌ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ತಂಡ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಮಹುವಾ, ‘ಬ್ರೇಕಿಂಗ್‌ ನ್ಯೂಸ್‌.. ಆಸ್ಟ್ರೇಲಿಯಾ ಪ್ರಧಾನಿ ಮನೆ ಮೇಲೆ ಇ.ಡಿ ದಾಳಿ’ ಎಂದು ಬರೆದುಕೊಂಡಿದ್ದಾರೆ.

‘ಅಹಮದಾಬಾದ್ ಕ್ರೀಡಾಂಗಣವನ್ನು ಮರುನಾಮಕರಣ ಮಾಡಲಾಗಿದೆ. ಜವಾಹರ್ ಲಾಲ್ ನೆಹರು ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತಿದೆ’ ಎಂದೂ ಮಹುವಾ ಹೀಗಳೆದಿದ್ದಾರೆ.

ಲೋಕಸಭಾ ಅಧಿವೇಶನದಲ್ಲಿ ಪ್ರಶ್ನೆ ಕೇಳಲು ಹಣ ಪಡೆದುಕೊಂಡಿದ್ದರು ಎಂಬ ಆರೋಪ ಮಹುವಾ ವಿರುದ್ಧ ಕೇಳಿಬಂದಿದ್ದು, ಈ ವಿಚಾರವಾಗಿ ಅವರು ವಿಚಾರಣೆ ಎದುರಿಸುತ್ತಿದ್ದಾರೆ. ‘ನನ್ನ ಬಾಯಿ ಮುಚ್ಚಿಸಲು ಹೆಣೆದ ತಂತ್ರವಿದು‘ ಎಂದು ಮಹುವಾ ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದಾರೆ.

ತನ್ನ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿ ಬಿಜೆಪಿಯು ಇ.ಡಿ ಸೇರಿದಂತೆ ಹಲವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸುತ್ತಾ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT