ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಬಾಂಡ್ ಮೂಲಕ ದೇಣಿಗೆ: ಗುಟ್ಟು ಬಿಟ್ಟುಕೊಡದ ಪಕ್ಷಗಳು

ಕಾನೂನಿನ ಅಂಶಗಳ ಉಲ್ಲೇಖ
Published 18 ಮಾರ್ಚ್ 2024, 16:46 IST
Last Updated 18 ಮಾರ್ಚ್ 2024, 16:46 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಬಾಂಡ್‌ ಮೂಲಕ ದೇಣಿಗೆ ಪಡೆದ ಪ್ರಮುಖ ಪಕ್ಷಗಳು, ಕಾನೂನಿನ ಹಲವು ಅಂಶಗಳನ್ನು ಉಲ್ಲೇಖಿಸುವ ಮೂಲಕ ತಮಗೆ ದೇಣಿಗೆ ನೀಡಿದವರ ಹೆಸರನ್ನು ಬಹಿರಂಗಪಡಿಸಿಲ್ಲ. ಇನ್ನು ಕೆಲವು ಪಕ್ಷಗಳು, ‘ನಾವು ಅನಾಮಧೇಯ’ ಮೂಲಗಳಿಂದ ದೇಣಿಗೆ ಪಡೆದಿದ್ದೇವೆ ಎಂದು ಹೇಳಿವೆ.

ಬಿಜೆಪಿಯು 1951ರ ಪ್ರಜಾಪ್ರಾತಿನಿಧ್ಯ ಕಾಯ್ದೆಯಲ್ಲಿನ ತಿದ್ದುಪಡಿ, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಆದಾಯ ತೆರಿಗೆ ಇಲಾಖೆ ಕಾಯ್ದೆಯ ಅಂಶಗಳನ್ನು ಉಲ್ಲೇಖಿಸಿ, ದೇಣಿಗೆ ನೀಡಿದವರ ವಿವರಗಳನ್ನು ಬಹಿರಂಗಪಡಿಸಿಲ್ಲ.

ಕಾಂಗ್ರೆಸ್ ಪಕ್ಷವು ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿದವರ ವಿವರ, ದೇಣಿಗೆಯ ಮೊತ್ತ, ಜಮಾ ಆಗಿರುವ ಬ್ಯಾಂಕ್ ಖಾತೆ ಮತ್ತು ದಿನಾಂಕದ ವಿವರಗಳನ್ನು ಕೋರಿ ಎಸ್‌ಬಿ ಪತ್ರ ಬರೆದಿದೆ.

ಅದಕ್ಕೆ ಪ್ರತಿಕ್ರಿಯಿಸಿರುವ ಬ್ಯಾಂಕ್, ಚುನಾವಣಾ ಬಾಂಡ್‌ಗಳ ವಿವರಗಳು ರಾಜಕೀಯ ಪಕ್ಷಗಳ ಬಳಿಯೇ ಇವೆ. ದೇಣಿಗೆಗೆ ಸಂಬಂಧಿಸಿದ ಬ್ಯಾಂಕ್‌ ಖಾತೆ ವಿವರಗಳನ್ನು ಚುನಾವಣಾ ಆಯೋಗದ ಜತೆ ಹಂಚಿಕೊಳ್ಳಲಾಗಿದೆ ಎಂದಿದೆ.

ಸಮಾಜವಾದಿ ಪಕ್ಷವು ತನಗೆ ದೊರೆತ ಕಡಿಮೆ ಮೊತ್ತದ ದೇಣಿಗೆಯ ವಿವರಗಳನ್ನು (₹ 1 ಲಕ್ಷದಿಂದ ₹ 10 ಲಕ್ಷದವರೆಗಿನ) ಮಾತ್ರ ಬಹಿರಂಗಪಡಿಸಿದೆ. ತಲಾ ₹ 1 ಕೋಟಿ ಮೊತ್ತದ 10 ಬಾಂಡ್‌ಗಳು ಅಂಚೆ ಮೂಲಕ ಪಡೆದಿದ್ದು, ಅದರಲ್ಲಿ ದೇಣಿಗೆ ನೀಡಿದವರ ಹೆಸರು ನಮೂದಿಸಿರಲಿಲ್ಲ ಎಂದಿದೆ.

ಬಾಂಡ್‌ ಮೂಲಕ ಎಷ್ಟು ಮೊತ್ತದ ದೇಣಿಗೆ ನೀಡಿದ್ದೀರಿ ಎಂಬ ಮಾಹಿತಿಯನ್ನು ದೇಣಿಗೆ ನೀಡಿದವರನ್ನು ಸಂಪರ್ಕಿಸಿ ಕಲೆಹಾಕಿರುವುದಾಗಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ ತಿಳಿಸಿದೆ. 

‘ಬಾಂಡ್‌ ಯೋಜನೆಯಡಿ ದೇಣಿಗೆ ಪಡೆದವರು ದೇಣಿಗೆ ನೀಡಿದವರ ವಿವರ ಒದಗಿಸುವ ಅಗತ್ಯವಿಲ್ಲ. ಆದರೂ ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ನಾವು ದಾನಿಗಳನ್ನು ಸಂಪರ್ಕಿಸಿ ಅವರಿಂದ ಮಾಹಿತಿ ಕಲೆಹಾಕಿದ್ದೇವೆ’ ಎಂದು ಪ‍ಕ್ಷದ ಹೇಳಿದೆ.

‘ಲಾಟರಿ ಕಿಂಗ್’ ಸ್ಯಾಂಟಿಯಾಗೊ ಮಾರ್ಟಿನ್ ಮಾಲೀಕತ್ವದ ಫ್ಯೂಚರ್ ಗೇಮಿಂಗ್ ಆ್ಯಂಡ್‌ ಹೋಟೆಲ್‌ ಸರ್ವೀಸಸ್‌ ಸಂಸ್ಥೆಯು, ತಾನು ಖರೀದಿಸಿದ ₹1,368 ಕೋಟಿ ಮೊತ್ತದ ಚುನಾವಣಾ ಬಾಂಡ್‌ನಲ್ಲಿ ₹509 ಕೋಟಿಯನ್ನು ಡಿಎಂಕೆಗೆ ದೇಣಿಗೆ ನೀಡಿದೆ.

‘ನಮ್ಮ ಕಚೇರಿಯ ಸಿಬ್ಬಂದಿ ಚುನಾವಣಾ ಪ್ರಚಾರ ಸೇರಿದಂತೆ ಇತರ ಕೆಲಸಗಳಲ್ಲಿ ಮಗ್ನರಾಗಿದ್ದರು. ಆದ್ದರಿಂದ ದೇಣಿಗೆ ನೀಡಿದ ಪ್ರತಿಯೊಬ್ಬರ ಮಾಹಿತಿಯನ್ನು ಸಮೂದಿಸಲು ಸಾಧ್ಯವಾಗಿಲ್ಲ’ ಎಂಬ ಕಾರಣವನ್ನು ಎನ್‌ಸಿಪಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT