ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

PM ಹಫ್ತಾ ವಸೂಲಿ ಯೋಜನೆ: ಚುನಾವಣಾ ಬಾಂಡ್ ವಿಷಯವಾಗಿ ಸರ್ಕಾರದ ವಿರುದ್ಧ 'ಕೈ' ಕಿಡಿ

Published 18 ಮಾರ್ಚ್ 2024, 10:42 IST
Last Updated 18 ಮಾರ್ಚ್ 2024, 10:42 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಬಾಂಡ್‌ಗಳ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪಕ್ಷ ಟೀಕಾಪ್ರಹಾರ ಮುಂದುವರಿಸಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇ.ಡಿ) ಅಥವಾ ಆದಾಯ ತೆರಿಗೆ (ಐಟಿ) ಇಲಾಖೆಯಿಂದ ವಿಚಾರಣೆ ಎದುರಿಸುತ್ತಿರುವ 21 ಉದ್ಯಮಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿವೆ. ಇದೊಂದು 'ಹಫ್ತಾ ವಸೂಲಿ' ಯೋಜನೆ ಎಂದು ಕಿಡಿಕಾರಿದೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು, 'ಚುನಾವಣಾ ಬಾಂಡ್ ಹಗರಣ'ದ ನೈಜ ವ್ಯಾಪ್ತಿಯನ್ನು ಬಹಿರಂಗಪಡಿಸುವ ಹಲವು ದೃಷ್ಟಾಂತಗಳು ನಿತ್ಯವೂ ಬಹಿರಂಗವಾಗುತ್ತಿವೆ ಎಂದು ಸೋಮವಾರ ಟ್ವೀಟ್‌ ಮಾಡಿದ್ದಾರೆ.

'ಪ್ರಧಾನಮಂತ್ರಿ ಹಫ್ತಾ ವಸೂಲಿ ಯೋಜನೆಯಾಗಿರುವ ಚುನಾವಣಾ ಬಾಂಡ್‌ ಹಗರಣದಲ್ಲಿ ಭ್ರಷ್ಟಾಚಾರದ ನಾಲ್ಕು ಮಾರ್ಗಗಳಿವೆ. 1. ದೇಣಿಗೆ ನೀಡಿ, ವ್ಯವಹಾರ ನಡೆಸಿ. 2. ಹಫ್ತಾ ವಸೂಲಿ' ಎಂದಿದ್ದಾರೆ. ತಮ್ಮ ಆರೋಪಗಳಿಗೆ ಪೂರಕವಾಗಿ ಕೆಲ ಪ್ರಕರಣಗಳನ್ನು ಉಲ್ಲೇಖಿಸಿರುವ ಅವರು, ಕೇಂದ್ರ ಸರ್ಕಾರದ ವಿರುದ್ಧ ಸರಣಿ ಆರೋಪ ಮಾಡಿದ್ದಾರೆ.

'ದೆಹಲಿ ಅಬಕಾರಿ ನೀತಿ ಪ್ರಕರದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಸಂಬಂಧ ಅರೊಬಿಂದೊ ಫಾರ್ಮಾ (Aurobindo Pharma) ನಿರ್ದೇಶಕ ಪಿ. ಶರತ್‌ ಚಂದ್ರ ರೆಡ್ಡಿ ಅವರನ್ನು 2022ರ ನವೆಂಬರ್‌ 10ರಂದು ಇ.ಡಿ ಬಂಧಿಸಿತ್ತು. ಐದು ದಿನಗಳ ನಂತರ, ನವೆಂಬರ್‌ 15ರಂದು ಫಾರ್ಮಾ ಕಂಪನಿಯು ಚುನಾವಣಾ ಬಾಂಡ್‌ಗಳ ಮೂಲಕ ₹ 5 ಕೋಟಿ ದೇಣಿಗೆ ನೀಡಿತ್ತು' ಎಂದು ಉಲ್ಲೇಖಿಸಿದ್ದಾರೆ.

'ನವಯುಗ ಎಂಜಿನಿಯರಿಂಗ್‌ ಕಂಪನಿ ಲಿಮಿಟೆಡ್‌ ಮೇಲೆ 2018ರ ಅಕ್ಟೋಬರ್‌ನಲ್ಲಿ ಐಟಿ ದಾಳಿ ನಡೆಸಿತ್ತು. ಅದಾದ ಆರು ತಿಂಗಳ ಬಳಿಕ, 2019ರ ಏಪ್ರಿಲ್‌ನಲ್ಲಿ ಆ ಕಂಪನಿಯು ಸುಮಾರು ₹ 30 ಕೋಟಿ ಮೊತ್ತದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿತ್ತು. 2023ರ ಡಿಸೆಂಬರ್‌ 7ರ ಬೆಳಿಗ್ಗೆ ರಾಮಗಢದಲ್ಲಿರುವ ರುಂಗ್ಟಾ ಸನ್ಸ್‌ ಪ್ರೈವೇಟ್‌ ಲಿಮಿಟೆಡ್‌ (Rungta Sons Pvt. Ltd) ಮೇಲೆ ಐಟಿ ದಾಳಿ ನಡೆದಿತ್ತು. ಆ ಕಂಪನಿಯು ತಲಾ ₹ 1 ಕೋಟಿ ಮೊತ್ತದ 50 ಚುನಾವಣಾ ಬಾಂಡ್‌ಗಳನ್ನು 2024ರ ಜನವರಿ 11ರಂದು ಖರೀದಿಸಿತ್ತು. ಅದಕ್ಕೂ ಮೊದಲು ಈ ಉದ್ಯಮವು 2021ರ ಏಪ್ರಿಲ್‌ನಲ್ಲಿ ಮಾತ್ರವೇ ದೇಣಿಗೆ ನೀಡಿತ್ತು' ಎಂದು ಮಾಹಿತಿ ನೀಡಿದ್ದಾರೆ.

'ಹೈದರಾಬಾದ್‌ ಮೂಲದ ಶಿರಡಿ ಸಾಯಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌ 2023ರ ಡಿಸೆಂಬರ್‌ 20ರಂದು ಐಟಿ ದಾಳಿಗೊಳಗಾಗಿತ್ತು. ಆ ಕಂಪನಿಯು 2024ರ ಜನವರಿ 11ರಂದು ₹ 40 ಕೋಟಿ ಮೊತ್ತದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿತ್ತು' ಎಂದು ಬರೆದಿದ್ದಾರೆ.

'2023ರ ನವೆಂಬರ್‌ನಲ್ಲಿ ಐಟಿ ಅಧಿಕಾರಿಗಳು, ಹಣ ವರ್ಗಾವಣೆಗೆ ಸಂಬಂಧಿಸಿದಂತೆ ರೆಡ್ಡೀಸ್‌ ಲ್ಯಾಬೊರೇಟರೀಸ್‌ (Reddy's Labs) ನೌಕರನನ್ನು ವಿಚಾರಣೆಗೆ ಒಳಪಡಿಸಿದ್ದರು. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಕಂಪನಿಯು ₹ 31 ಕೋಟಿ ಮೊತ್ತದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿತ್ತು. ಅದೇ ತಿಂಗಳಲ್ಲಿ ಮತ್ತೊಮ್ಮೆ ₹ 21 ಕೋಟಿ ಮೊತ್ತದ ಬಾಂಡ್‌ ಹಾಗೂ 2024ರ ಜನವರಿಯಲ್ಲಿ ₹ 10 ಕೋಟಿ ಮೊತ್ತದ ಬಾಂಡ್‌ ಖರೀದಿಸಿತ್ತು' ಎಂದು ವಿವರಿಸಿದ್ದಾರೆ.

'ಇವೆಲ್ಲ ಪ್ರಮುಖ ಉದಾಹರಣೆಗಳಷ್ಟೇ. ಸಿಬಿಐ, ಇ.ಡಿ ಅಥವಾ ಐಟಿ ಇಲಾಖೆಯಿಂದ ವಿಚಾರಣೆ ಎದುರಿಸುತ್ತಿರುವ ಒಟ್ಟು 21 ಕಂಪನಿಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿವೆ' ಎಂದು ಉಲ್ಲೇಖಿಸಿದ್ದಾರೆ. ಆದರೆ, ದೇಣಿಗೆ ನೀಡಿದ ಬಳಿಕ ಆ ಕಂಪನಿಗಳ ವಿರುದ್ಧದ ಪ್ರಕರಣಗಳು ಏನಾದವು ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.

ಕೇಂದ್ರದ ವಿರುದ್ಧ ಟೀಕೆ ಮುಂದುವರಿಸಿರುವ ರಮೇಶ್‌, 'ಲಂಚ ಪಡೆದು ಗುತ್ತಿಗೆ ನೀಡುವುದು' ಹಾಗೂ 'ನಕಲಿ ಕಂಪನಿ'ಗಳ ಹೆಸರಲ್ಲಿ ಹಣ ಸಂಗ್ರಹಿಸುವುದು ಚುನಾವಣಾ ಬಾಂಡ್ ಭ್ರಷ್ಟಾಚಾರದ ಇನ್ನೆರಡು ಮಾರ್ಗಗಳು ಎಂದು ಆರೋಪಿಸಿದ್ದಾರೆ.

'ನೆನಪಿರಲಿ, ಪ್ರಧಾನ ಮಂತ್ರಿ ಹಫ್ತಾ ವಸೂಲಿ ಯೋಜನೆಯನ್ನು ಐಟಿ ಇಲಾಖೆ ಮತ್ತು ಇ.ಡಿ ಕಾರ್ಯಗತಗೊಳಿಸಿವೆ. ಚುನಾವಣಾ ಬಾಂಡ್‌ ಹಗರಣವನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ನೆರವೇರಿಸಿದೆ. ಅಂತಿಮವಾಗಿ ಈ ಎಲ್ಲಾ ಸಂಸ್ಥೆಗಳು ವರದಿ ಮಾಡಿಕೊಳ್ಳುವುದು ಒಬ್ಬರೇ ವ್ಯಕ್ತಿಗೆ. ಅದು ಹಣಕಾಸು ಸಚಿವರು' ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಚುನಾವಣಾ ಬಾಂಡ್‌ ಹಗರಣದ ಕುರಿತು  ಜನರಿಗೆ ಉತ್ತರ ನೀಡಬೇಕು ಎಂದು ರಮೇಶ್‌ ಆಗ್ರಹಿಸಿದ್ದಾರೆ.

ಚುನಾವಣಾ ಬಾಂಡ್‌ಗಳನ್ನು ಅಧಿಕೃತವಾಗಿ ಮಾರಾಟ ಮಾಡುವ ಎಸ್‌ಬಿಐ, ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಮಾರ್ಚ್‌ 12ರಂದು ಚುನಾವಣಾ ಆಯೋಗದೊಂದಿಗೆ ದಾಖಲೆಗಳನ್ನು ಹಂಚಿಕೊಂಡಿದೆ.

ಎಸ್‌ಬಿಐ ಮಾಹಿತಿ ಪ್ರಕಾರ, 2019ರ ಏಪ್ರಿಲ್‌ 1ರಿಂದ 2024ರ ಫೆಬ್ರುವರಿ 15ರ ವರೆಗೆ ಒಟ್ಟು 22,217 ವಿವಿಧ ಬಗೆಯ ಚುನಾವಣಾ ಬಾಂಡ್‌ಗಳನ್ನು ದೇಣಿಗೆದಾರರು ಖರೀದಿಸಿದ್ದಾರೆ. ಈ ಪೈಕಿ 22,030 ಬಾಂಡ್‌ಗಳನ್ನು ರಾಜಕೀಯ ಪಕ್ಷಗಳು ಜಮೆ ಮಾಡಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT