ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್‌: ಎಸ್‌ಒಪಿ ಬಹಿರಂಗಕ್ಕೆ ಎಸ್‌ಬಿಐ ನಕಾರ

Published 2 ಏಪ್ರಿಲ್ 2024, 15:15 IST
Last Updated 2 ಏಪ್ರಿಲ್ 2024, 15:15 IST
ಅಕ್ಷರ ಗಾತ್ರ

ನವದೆಹಲಿ: ಮಾಹಿತಿ ಹಕ್ಕು ಕಾಯ್ದೆಯಲ್ಲಿ ಇರುವ ‘ವಾಣಿಜ್ಯ ಗೋಪ್ಯತೆ’ಯನ್ನು ಉಲ್ಲೇಖಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಚುನಾವಣಾ ಬಾಂಡ್‌ಗಳ ಮಾರಾಟ ಮತ್ತು ಅವುಗಳ ನಗದೀಕರಣ ಪ್ರಕ್ರಿಯೆಯಲ್ಲಿ ಪಾಲಿಸಿದ ‘ಪ್ರಮಾಣಿತ ಕಾರ್ಯಾಚರಣೆ ವಿಧಾನ’ವನ್ನು (ಎಸ್‌ಒಪಿ) ಬಹಿರಂಗಪಡಿಸಲು ನಿರಾಕರಿಸಿದೆ. ಎಸ್‌ಬಿಐನ ಈ ನಡೆಗೆ ಪಾರದರ್ಶಕತೆಯ ಪರವಾಗಿ ಇರುವ ಸಾಮಾಜಿಕ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ.

ಚುನಾವಣಾ ಬಾಂಡ್‌ಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ‘ಕಾಮನ್ ಕಾಸ್’ ಸಂಘಟನೆಯ ಟ್ರಸ್ಟಿ ಕೂಡ ಆಗಿರುವ ಅಂಜಲಿ ಭಾರದ್ವಾಜ್ ಅವರು, ಚುನಾವಣಾ ಬಾಂಡ್‌ಗಳ ಮಾರಾಟ ಮತ್ತು ನಗದೀಕರಣಕ್ಕೆ ಮಾನ್ಯತೆ ಹೊಂದಿದ್ದ ಶಾಖೆಗಳಿಗೆ ರವಾನಿಸಿದ್ದ ಎಸ್‌ಒಪಿ ಪ್ರತಿಯನ್ನು ನೀಡುವಂತೆ ಎಸ್‌ಬಿಐಗೆ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಮಾರ್ಚ್‌ 30ರಂದು ಉತ್ತರ ನೀಡಿರುವ ಎಸ್‌ಬಿಐ, ‘ಚುನಾವಣಾ ಬಾಂಡ್‌ ಯೋಜನೆ– 2018ರ ಬಗ್ಗೆ ಮಾನ್ಯತೆ ಪಡೆದ ಶಾಖೆಗಳಿಗೆ ಕಾಲಕಾಲಕ್ಕೆ ರವಾನಿಸಿರುವ ಎಸ್‌ಒಪಿ ಆಂತರಿಕ ಮಾರ್ಗಸೂಚಿ ಮಾತ್ರ. ಅದಕ್ಕೆ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 8(1)(ಡಿ) ಅಡಿಯಲ್ಲಿ ವಿನಾಯಿತಿ ಇದೆ’ ಎಂದು ಹೇಳಿದೆ.

ನಿರ್ದಿಷ್ಟ ಬಗೆಯ ಮಾಹಿತಿ ಬಹಿರಂಗಪಡಿಸುವುದನ್ನು ನಿರಾಕರಿಸಲು ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(ಡಿ) ಅಡಿ ಅವಕಾಶ ಇದೆ.

‘ಈ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಮೂರನೆಯ ವ್ಯಕ್ತಿಯ ಸ್ಪರ್ಧಾತ್ಮಕತೆಗೆ ಹೇಗೆ ಧಕ್ಕೆಯಾಗುತ್ತದೆ ಎಂಬುದನ್ನು ವಿವರಿಸದೆಯೇ ಎಸ್‌ಬಿಐ ಸೆಕ್ಷನ್ 8(1)(ಡಿ) ಅಡಿಯಲ್ಲಿ ಮಾಹಿತಿ ಬಹಿರಂಗಪಡಿಸುವುದರಿಂದ ಇದಕ್ಕೆ ವಿನಾಯಿತಿ ಇದೆ ಎಂದು ಎಸ್‌ಬಿಐ ಹೇಳಿದೆ. ಮಾಹಿತಿ ನಿರಾಕರಿಸಿರುವುದನ್ನು ಮೇಲ್ಮನವಿ ಮೂಲಕ ಪ್ರಶ್ನಿಸಲಾಗುವುದು’ ಎಂದು ಅಂಜಲಿ ಹೇಳಿದರು.

ಚುನಾವಣಾ ಬಾಂಡ್‌ಗಳ ಮೂಲಕ ನಡೆದ ವಹಿವಾಟುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಎಸ್‌ಬಿಐ ಹೇಗೆ ದಾಖಲಿಸಿಕೊಂಡಿತ್ತು ಎಂಬ ವಿಚಾರವಾಗಿ ಸ್ಪಷ್ಟತೆಯ ಕೊರತೆ ಇರುವ ಕಾರಣ ತಾವು ಎಸ್‌ಒಪಿ ಪ್ರತಿಯನ್ನು ಕೋರಿದುದಾಗಿ ತಿಳಿಸಿದರು.

‘ಚುನಾವಣಾ ಬಾಂಡ್ ಯೋಜನೆಯು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿದ ನಂತರವೂ, ಖರೀದಿಯಾದ ಹಾಗೂ ನಗದೀಕರಿಸಿಕೊಂಡ ಚುನಾವಣಾ ಬಾಂಡ್‌ಗಳ ಕುರಿತ ಎಲ್ಲ ಮಾಹಿತಿ ಬಹಿರಂಗಪಡಿಸುವುದನ್ನು ಖಾತರಿಪಡಿಸಿದ ನಂತರವೂ ಎಸ್‌ಬಿಐ ಈ ಯೋಜನೆಯ ಕಾರ್ಯವಿಧಾನಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ನಿರಾಕರಿಸುತ್ತಿರುವುದು ಆಘಾತಕಾರಿ’ ಎಂದು ಅಂಜಲಿ ಹೇಳಿದರು.

ಚುನಾವಣಾ ಬಾಂಡ್‌ ಮಾರಾಟ ಹಾಗೂ ಅವುಗಳ ನಗದೀಕರಣಕ್ಕೆ ಸಂಬಂಧಿಸಿದ ಮಾಹಿತಿಯ ವಿವರಗಳನ್ನು ಬ್ಯಾಂಕ್‌ ಹೇಗೆ ಕಾಪಿಟ್ಟುಕೊಳ್ಳಬೇಕಿತ್ತು ಎಂಬುದನ್ನು ಎಸ್‌ಒಪಿ ಬಹಿರಂಗಪಡಿಸುತ್ತದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT