ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಖರದಲ್ಲಿ ದಟ್ಟಣೆ: ಎವರೆಸ್ಟ್‌ ಸಾವಿನ ಮನೆ

Last Updated 26 ಮೇ 2019, 20:00 IST
ಅಕ್ಷರ ಗಾತ್ರ

ಜಗತ್ತಿನ ಅತ್ಯಂತ ಎತ್ತರದ ಶಿಖರ ಎವರೆಸ್ಟ್‌ ಏರುವುದು ಎಲ್ಲ ಪರ್ವತಾರೋಹಿಗಳ ಕನಸು. ಸುಮಾರು 29 ಸಾವಿರ ಅಡಿ ಎತ್ತರದ ಈ ಮಂಜಿನ ಶಿಖರ ತಲುಪಲು ಈಗ ಭಾರಿ ಪೈಪೋಟಿಯೇ ಇದೆ. ಈ ಪೈಪೋಟಿಯಿಂದಾಗಿ ಎವರೆಸ್ಟ್‌ನ ತುತ್ತ ತುದಿಯಲ್ಲಿ ವಿಪರೀತ ದಟ್ಟಣೆ ಉಂಟಾಗಿದೆ. ಈ ದಟ್ಟಣೆಯಿಂದಾಗಿ ಏರುವ ಮತ್ತು ಇಳಿಯುವ ಪ್ರಕ್ರಿಯೆಗಳೆರಡೂ ಪರ್ವತಾರೋಹಿಗಳಿಗೆ ಭಾರಿ ಅಪಾಯ ಒಡ್ಡುತ್ತಿವೆ. ಈ ದಟ್ಟಣೆ ಹಲವು ಮಂದಿಯ ಜೀವವನ್ನೂ ಬಲಿ ಪಡೆದಿದೆ

ಸಾವಿನ ಸರಪಣಿ

ಈ ವರ್ಷ ಶಿಖರದಲ್ಲಿ ಸತ್ತವರ ಸಂಖ್ಯೆ 17. ಕಳೆದೊಂದು ದಶಕದಲ್ಲಿಯೇ ಇದು ಗರಿಷ್ಠ ಸಂಖ್ಯೆಯಾಗಿದೆ. ಸತ್ತವರಲ್ಲಿ ನಾಲ್ವರು ಭಾರತೀಯರು ಸೇರಿದ್ದಾರೆ. ಅಮೆರಿಕ, ಐರ್ಲೆಂಡ್‌ ಮತ್ತು ಬ್ರಿಟನ್‌ನ ತಲಾ ಇಬ್ಬರು ಕೂಡ ಮೃತಪಟ್ಟಿದ್ದಾರೆ. ಹೆಚ್ಚಿನವರು ಕಳೆದ ಬುಧವಾರ ಮತ್ತು ಗುರುವಾರ ಮೃತಪಟ್ಟರು. ಈ ಸಂದರ್ಭದಲ್ಲಿ ಭಾರಿ ಜನ ದಟ್ಟಣೆ ಉಂಟಾಗಿತ್ತು

ಎರಡು ದಾರಿ

ಎವರೆಸ್ಟ್‌ ಏರಲು ನೇಪಾಳ ಮತ್ತು ಚೀನಾದ ಕಡೆಯಿಂದ ಅವಕಾಶ ಇದೆ. ಚೀನಾ ಈಗ ಪರವಾನಗಿ ನೀಡಿಕೆಯನ್ನು ಮಿತಗೊಳಿಸಿದೆ. ಜತೆಗೆ, ಈ ಭಾಗದಿಂದ ಎವರೆಸ್ಟ್‌ ಏರುವುದು ಸುಲಭ. ಆದರೆ, ನೇಪಾಳ ಭಾಗದಿಂದ ಶಿಖರ ಏರುವುದು ಕಠಿಣ. ಹಾಗಾಗಿ ಈ ಭಾಗದಲ್ಲಿ ದಟ್ಟಣೆ ಹೆಚ್ಚು

ಶಿಖರದಲ್ಲಿ ಸರತಿ ಸಾಲು

ಈ ವರ್ಷ ಎವರೆಸ್ಟ್‌ ಏರಲು ನೇಪಾಳ ಸರ್ಕಾರವು 381 ಮಂದಿಗೆ ಪರವಾನಗಿ ನೀಡಿದೆ. 1953ರಲ್ಲಿ ತೇನ್‌ಸಿಂಗ್‌ ನೋರ್ಗೆ ಮತ್ತು ಎಡ್ಮಂಡ್‌ ಹಿಲರಿ ಅವರು ಮೊತ್ತ ಮೊದಲಿಗೆ ಶಿಖರ ತಲುಪಿದ ಬಳಿಕ ಎಂದೂ ಇಷ್ಟೊಂದು ಮಂದಿಗೆ ಪರವಾನಗಿ ನೀಡಿರಲಿಲ್ಲ. 44 ತಂಡಗಳು ಈ ಬಾರಿ ಎವರೆಸ್ಟ್‌ ಏರುವ ಯತ್ನ ನಡೆಸಿವೆ. ಈ ತಂಡಗಳ ಜತೆಗೆ ಸಹಾಯಕರಾಗಿ 500ಕ್ಕೂ ಹೆಚ್ಚು ಶೆರ್ಪಾಗಳೂ ಇರುತ್ತಾರೆ. ಕಳೆದ ವರ್ಷ 346 ಮಂದಿಗೆ ಪರವಾನಗಿ ನೀಡಲಾಗಿತ್ತು.

ಏಪ್ರಿಲ್‌ 16ರಂದು ಆರೋಹಣ ಅವಧಿ ಮುಕ್ತಾಯಗೊಂಡಾಗ ಈ ವರ್ಷ ಶಿಖರ ತಲುಪಿದವರ ಸಂಖ್ಯೆ 150 ಆಗಿತ್ತು. ಇದು ಒಂದು ವರ್ಷದಲ್ಲಿ ಶಿಖರ ತಲುಪಿದ ಜನರ ಗರಿಷ್ಠ ಸಂಖ್ಯೆ

ಆರೋಹಣ ಅವಧಿ

ನಾಲ್ಕನೇ ಶಿಬಿರ ತಲುಪಿದ ಬಳಿಕ ಪರ್ವತಾರೋಹಿಗಳು ಶಿಖರದತ್ತ ಏರಲು ಸ್ಥಿರ ಹವಾಮಾನವನ್ನು ಕಾಯಬೇಕು.ಪರ್ವತದ ಶಿಖರ ಪ್ರದೇಶದಲ್ಲಿ ಸದಾ ಸುಳಿಗಾಳಿ ಬೀಸುತ್ತಿರುತ್ತದೆ. ಈ ಗಾಳಿ ಇಲ್ಲದ ಅವಧಿಯನ್ನು ಆರೋಹಣ ಅವಧಿ ಅಥವಾ ‘ವಿಂಡೊ’ ಎಂದು ಪರಿಗಣಿಸಲಾಗುತ್ತದೆ. ಬಂಗಾಳ ಕೊಲ್ಲಿಯಲ್ಲಿ ಮುಂಗಾರು ಮಾರುತವು ಉತ್ತರದತ್ತ ಚಲಿಸಲು ಆರಂಭಿಸಿದಾಗ ಎವರೆಸ್ಟ್‌ನ ಮೇಲ್ತುದಿಯಲ್ಲಿ ಹವಾಮಾನ ಸ್ಥಿರವಾಗಿರುತ್ತದೆ. ಸಾಮಾನ್ಯವಾಗಿ ಮೇ ತಿಂಗಳ ಮೂರು ಅಥವಾ ನಾಲ್ಕನೇ ವಾರದಲ್ಲಿ ಸುಮಾರು ಒಂದು ವಾರ ಇಂತಹ ವಾತಾವರಣ ಸೃಷ್ಟಿಯಾಗುತ್ತದೆ. ಒಂದೊಂದು ಸಲ ವಿಂಡೊ ಅವಧಿ ಎರಡು ಮೂರು ದಿನಗಳಿಗೆ ಸೀಮಿತವಾಗುತ್ತದೆ.

ಏಪ್ರಿಲ್‌ನಿಂದ ಆರಂಭವಾಗುವ ಆರೋಹಣ ಋತು ಮೇ 30ರ ಹೊತ್ತಿಗೆ ಪೂರ್ಣಗೊಳ್ಳುತ್ತದೆ.

***

* ಆರೋಹಣಕ್ಕೆ ಪ್ರಶಸ್ತವಾದ ಸಂದರ್ಭದಲ್ಲಿ ಎಲ್ಲ ಪರ್ವತಾರೋಹಿಗಳೂ ಒಟ್ಟಿಗೇ ಶಿಖರದತ್ತ ಸಾಗುತ್ತಾರೆ. ಆರನೇ ಶಿಬಿರದ ಬಳಿಕ ಮೇಲೇರಲು ಒಬ್ಬರು ಸಾಗಬಹುದಾದ ಇಕ್ಕಟ್ಟಾದ ದಾರಿಯಷ್ಟೇ ಇದೆ. ಇಳಿಯುವುದಕ್ಕೂ ಅದೇ ದಾರಿಯನ್ನು ಬಳಸಬೇಕಾಗುತ್ತದೆ. ಹಾಗಾಗಿ, ದಟ್ಟಣೆ ಉಂಟಾಗುತ್ತದೆ.

* ದಟ್ಟಣೆಯೇ ಸಾವಿಗೆ ಕಾರಣವಾಗುವುದರಿಂದ ಈ ಪ್ರದೇಶವನ್ನು ಸಾವಿನ ವಲಯ ಎಂದೇ ಕರೆಲಾಗುತ್ತದೆ

* ದಟ್ಟಣೆಯಿಂದಾಗಿ ಗರಿಷ್ಠ 12 ತಾಸಿನಷ್ಟು ಹೆಚ್ಚು ಹೊತ್ತು ಪರ್ವತಾರೋಹಿಗಳು ಶಿಖದಲ್ಲಿ ಇರಬೇಕಾಗುತ್ತದೆ. ಇದರಿಂದಾಗಿ ಅವರಲ್ಲಿನ ಆಮ್ಲಜನಕದ ಸಿಲಿಂಡರ್‌ಗಳು ಖಾಲಿಯಾಗುತ್ತವೆ. ಆಮ್ಲಜನಕದ ಕೊರತೆಯೇ ಸಾವಿಗೆ ಕಾರಣವಾಗುತ್ತದೆ

* ಶಿಖರವನ್ನು ಏರುವುದು ಬಹಳ ಕ್ಲಿಷ್ಟಕರ. ಏರುವ ಹೊತ್ತಿಗೆ ಪರ್ವತಾರೋಹಿಗಳು ಬಹಳ ದಣಿದಿರುತ್ತಾರೆ. ಏರುವುದಕ್ಕಿಂತ ಇಳಿಯುವುದೇ ಹೆಚ್ಚು ಕಠಿಣ. ಆದರೆ, ದಣಿದಿರುವ ಸಂದರ್ಭದಲ್ಲಿ ದಟ್ಟಣೆಯಲ್ಲಿ ಸಿಕ್ಕಿಕೊಂಡರೆ ಅವರು ಇನ್ನಷ್ಟು ಸುಸ್ತಾಗುತ್ತಾರೆ

* ಭಾರಿ ತೂಕದ ಸರಂಜಾಮುಗಳನ್ನು ಪರ್ವತಾರೋಹಿಗಳು ಹೊತ್ತೊಯ್ಯಬೇಕಾಗುತ್ತದೆ. ದಟ್ಟಣೆಯಲ್ಲಿ ನಿಲ್ಲುವುದರಿಂದ ಅವರಲ್ಲಿನ ಶಕ್ತಿಯೇ ಉಡುಗಿ ಹೋಗುತ್ತದೆ

ಮಾಹಿತಿ: ಎಎಫ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT