ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಬಕಾರಿ ನೀತಿ ಹಗರಣ: ಕೇಜ್ರಿವಾಲ್‌ಗೆ ಜುಲೈ 12ರ ವರೆಗೆ ನ್ಯಾಯಾಂಗ ಬಂಧನ

Published 29 ಜೂನ್ 2024, 13:01 IST
Last Updated 29 ಜೂನ್ 2024, 13:01 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಜುಲೈ 12ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಲು ಇಲ್ಲಿನ ನ್ಯಾಯಾಲಯ ಶನಿವಾರ ಆದೇಶಿಸಿದೆ.

ತನಿಖಾಧಿಕಾರಿ ಸಂಗ್ರಹಿಸಿದ ದಾಖಲೆಗಳನ್ನು ಬಹಿರಂಗಪಡಿಸುವಂತೆ ಕೇಜ್ರಿವಾಲ್‌ ಪರ ವಕೀಲರ ಕೋರಿಕೆಯನ್ನು ಕೋರ್ಟ್‌ ತಿರಸ್ಕರಿಸಿದೆ.

ಮೂರು ದಿನಗಳ ಕಸ್ಟಡಿ ವಿಚಾರಣಾ ಅವಧಿ ಮುಗಿದ ಬಳಿಕ ಕೇಜ್ರಿವಾಲ್‌ ಅವರನ್ನು ವಿಶೇಷ ನ್ಯಾಯಾಧೀಶ ಸುನೇನಾ ಶರ್ಮಾ ಅವರ ಮುಂದೆ ಹಾಜರುಪಡಿಸಲಾಯಿತು.

ತನಿಖಾ ದೃಷ್ಟಿಯಿಂದ ಕೇಜ್ರಿವಾಲ್‌ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಬೇಕು ಎಂದು ಸಿಬಿಐ ಅರ್ಜಿಯಲ್ಲಿ ಕೋರಿತ್ತು. ಸಿಬಿಐ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಧೀಶರು, ಅವರಿಗೆ ಜುಲೈ 12ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಕೇಜ್ರಿವಾಲ್‌ ಅವರನ್ನು ಸಿಬಿಐ ಜೂನ್‌ 26ರಂದು ಬಂಧಿಸಿತ್ತು. 

ಕೇಜ್ರಿವಾಲ್‌ ಪರವಾಗಿ ವಾದಿಸಿದ ಹಿರಿಯ ವಕೀಲ ವಿಕ್ರಮ್‌ ಚೌಧರಿ, ‘2022ರಿಂದ ನಡೆಯುತ್ತಿರುವ ತನಿಖೆ ಇದಾಗಿದೆ. ಮಾರ್ಚ್‌ 21ರಂದು ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತ್ತು. ಮೇ 10ರಂದು ಸುಪ್ರೀಂ ಕೋರ್ಟ್‌ ಅವರಿಗೆ ಮೂರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು’ ಎಂದು ವಿವರಿಸಿದರು.

ಕಸ್ಟಡಿ ವಿಚಾರಣೆ ಸಮಯದಲ್ಲಿನ ಕೇಸ್‌ ಡೈರಿ ಸೇರಿದಂತೆ ಸಂಗ್ರಹಿಸಲಾದ ಎಲ್ಲ ದಾಖಲೆಗಳನ್ನು ಒದಗಿಸಲು ಸಿಬಿಐಗೆ ನಿರ್ದೇಶಿಸುವಂತೆ ಅವರು ಕೋರಿದರು.

ಈ ಸಂಬಂಧ ಆದೇಶ ನೀಡಲು ನಿರಾಕರಿಸಿದ ನ್ಯಾಯಾಧೀಶರು, ‘ಈ ಅಂಶಗಳನ್ನು ನ್ಯಾಯಾಲಯದ ಪರಿಗಣನೆಗೆ ಬಿಡಿ’ ಎಂದು ಹೇಳಿದರು. ಅದಾಗ್ಯೂ, ಆರೋಪಿಯು ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.

ಆರೋಪಿಯನ್ನು ಅವರ ಪತ್ನಿ ಸುನೀತಾ ಕೇಜ್ರಿವಾಲ್‌ ಮತ್ತು ಕುಟುಂಬದವರು ಭೇಟಿಯಾಗಲು ಅವಕಾಶ ನೀಡುವಂತೆ ಚೌಧರಿ ಅವರು ನ್ಯಾಯಾಲಯವನ್ನು ಕೋರಿದರು. ನ್ಯಾಯಾಲಯದ ಕೊಠಡಿಯೊಳಗೆ ಕೇಜ್ರಿವಾಲ್‌ ಅವರನ್ನು ಭೇಟಿಯಾಗಲು ಅವರ ಕುಟುಂಬದವರಿಗೆ ನ್ಯಾಯಾಲಯ ಅನುಮತಿ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT