ನವದೆಹಲಿ: ಇಂಡಿಯಾ ಹೆಸರನ್ನು ಭಾರತ ಎಂದು ಬದಲಿಸಲು ಸಂಸತ್ತಿನ ವಿಶೇಷ ಅಧಿವೇಶನದಲ್ಲಿಯೇ ನಿರ್ಣಯ ಮಂಡಿಸಬಹುದು ಎಂಬ ವದಂತಿ ಕೇಳಿಬರುತ್ತಿದ್ದು, ಹೀಗೆ ಹೆಸರು ಬದಲಿಸಲು ಸಂವಿಧಾನದ ತಿದ್ದುಪಡಿ ಅಗತ್ಯವಿದೆಯೇ? ಇದು, ಸಂವಿಧಾನದ ಮೂಲ ಆಶಯಕ್ಕೆ ಪೂರಕವಾಗಿರಲಿದೆಯೇ ಎಂಬ ಪ್ರಶ್ನೆಗಳು ಮೂಡಿವೆ.
ಈ ವಿಷಯದಲ್ಲಿ ಪರಿಣತರು ಮತ್ತು ರಾಜಕೀಯ ವಿಶ್ಲೇಷಕರ ಅಭಿಪ್ರಾಯಗಳು ಭಿನ್ನವಾಗಿವೆ. ಸಂವಿಧಾನದ 1ನೇ ವಿಧಿಯಲ್ಲಿ, ‘ಇಂಡಿಯಾ, ಅಂದರೆ ಭಾರತ, ರಾಜ್ಯಗಳ ಒಕ್ಕೂಟ’ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಸುಪ್ರೀಂ ಕೋರ್ಟ್ ವಕೀಲ, ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ ವಿವೇಕ್ ತಂಖಾ, ಸಂವಿಧಾನದಲ್ಲಿ ಎರಡೂ ಹೆಸರಿನ ಉಲ್ಲೇಖವಿದೆ. ರಾಷ್ಟ್ರಮಟ್ಟದಲ್ಲಿ ‘ಇಂಡಿಯಾ’ ಹೆಸರಾಗಿದೆ. ರಾಷ್ಟ್ರವನ್ನು ನಾವು ಹೇಗೆ ಗುರುತಿಸುತ್ತೇವೆ ಎಂಬುದನ್ನು ಬಿಂಬಿಸಲಿದೆ. ರಾಜತಾಂತ್ರಿಕ ಕ್ರಮದಲ್ಲೂ ಭಾರತ ಎಂದೇ ಉಲ್ಲೇಖಿಸಲಾಗುತ್ತದೆ. ಈ ಎಲ್ಲ ಹೋಗಲಿವೆ’ ಎನ್ನುತ್ತಾರೆ.
‘ಈಗಿನ ಬಿಜೆಪಿ ನೇತೃತ್ವದ ಸರ್ಕಾರ ವಸಾಹತುಶಾಹಿ ಕಾಲಘಟ್ಟದ ಎಲ್ಲವನ್ನು ಬದಲಿಸಲು ಒತ್ತುನೀಡಿದೆ. ಇಂಡಿಯಾ ಉಲ್ಲೇಖವುಳ್ಳ ಎಲ್ಲವೂ ಈ ಸರ್ಕಾರಕ್ಕೆ ಅಹಿತವಾಗಿವೆ. ಇದು ನಂಬಿಕೆ. ಹೆಸರಿನ ಬದಲಾವಣೆ ದೇಶವನ್ನು ರೂಪಿಸುವುದಿಲ್ಲ. ಆದರೆ, ಉದ್ಯೋಗ, ಶಿಕ್ಷಣ, ಗುಣಮಟ್ಟದ ಆರೋಗ್ಯ ಸೇವೆ ರೂಪಿಸುತ್ತದೆ’ ಎಂದು ಹೇಳುತ್ತಾರೆ.
ಇಂಡಿಯಾ ಬದಲಾಗಿ ಭಾರತ ಎಂದೇ ಹೆಸರಿಸಬೇಕು ಎಂಬ ಬೇಡಿಕೆಯು ಪ್ರಮುಖವಾದುದೇನಲ್ಲ. ದೆಹಲಿಯ ಉದ್ಯಮಿಯೊಬ್ಬರು 2020ರಲ್ಲಿ ಇಂಡಿಯಾ ಅನ್ನು ಭಾರತ ಎಂದೇ ಕರೆಯಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಅದನ್ನು ವಜಾ ಮಾಡಿತ್ತು. ಇಂತದೇ ಬೇಡಿಕೆಯಿದ್ದ ಅರ್ಜಿಯನ್ನು 2016ರಲ್ಲಿಯೂ ತಿರಸ್ಕರಿಸಿತ್ತು.
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ‘ಎಕ್ಸ್’ ವೇದಿಕೆಯಲ್ಲಿ ಸಂದೇಶ ಪೋಸ್ಟ್ ಮಾಡಿದ್ದು, ‘ಇಂಡಿಯಾವನ್ನು ‘ಭಾರತ್’ ಎಂದು ಕರೆಯಲು ಸಾಂವಿಧಾನಿಕ ಆಕ್ಷೇಪವೇನೂ ಇಲ್ಲ’ ಎಂದು ಹೇಳಿದ್ದಾರೆ. ‘ಇಂಡಿಯಾ ಮತ್ತು ಭಾರತ್ ಎರಡೂ ಅಧಿಕೃತ ಹೆಸರುಗಳೇ. ಇಂಡಿಯಾ ಅನ್ನು ಸಂಪೂರ್ಣ ಕೈಬಿಡುವಷ್ಟು ಕೇಂದ್ರ ಸರ್ಕಾರ ಮೂರ್ಖತನದ್ದಲ್ಲ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.
‘ಇಂಡಿಯಾ ಎಂಬುದಕ್ಕೆ ಲೆಕ್ಕ ಹಾಕಲಾಗದಷ್ಟು ಬ್ರ್ಯಾಂಡ್ ಮೌಲ್ಯವಿದೆ. ಇದು, ಶತಮಾನಗಳಿಂದ ನಿರ್ಮಾಣವಾಗಿದ್ದಾಗಿದೆ. ನಾವು ಎರಡೂ ಹೆಸರು ಬಳಸುವುದನ್ನು ಮುಂದುವರಿಸಬೇಕು’ ಎಂದು ಶಶಿ ತರೂರ್ ಅವರು ಪ್ರತಿಪಾದಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.