ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳುಸುದ್ದಿ ತಡೆಯದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ

ಚುನಾವಣಾ ಪ್ರಚಾರ ತಜ್ಞ ಶಿವಂ ಶಂಕರ್ ಸಿಂಗ್ ಅಭಿಮತ
Last Updated 27 ಮಾರ್ಚ್ 2019, 19:46 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣೆಗೆ ಭಾರತ ಸಜ್ಜಾಗಿದೆ. ಮತದಾರರ ಮನವೊಲಿಕೆಗೆ ಪಕ್ಷಗಳು ಮುಂದಾಗಿವೆ. ಇಂತಹ ಸಮಯದಲ್ಲಿ ಸುಳ್ಳುಸುದ್ದಿಗಳ ಬಗ್ಗೆ ಗಮನಹರಿಸದೇ ಇದ್ದಲ್ಲಿ, ಅಪಾಯ ಕಾದಿದೆ ಎಂದು ಚುನಾವಣಾ ಪ್ರಚಾರ ತಜ್ಞ ಶಿವಂ ಶಂಕರ್ ಸಿಂಗ್ ಅವರು ಎಚ್ಚರಿಸಿದ್ದಾರೆ.

ಸಿಂಗ್ ಅವರು ಇತ್ತೀಚಿನವರೆಗೆ ಮಣಿಪುರ ಹಾಗೂ ತ್ರಿಪುರಾದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಹಾಗೂ ದತ್ತಾಂಶ ವಿಶ್ಲೇಷಣೆ ವಿಭಾಗದ ಮುಖ್ಯಸ್ಥರಾಗಿದ್ದರು.

ಎಲ್ಲ ರಾಜಕೀಯ ಪಕ್ಷಗಳು ವಾಟ್ಸ್‌ಆ್ಯಪ್ ಗುಂಪು, ಫೇಸ್‌ಬುಕ್ ಪೇಜ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳನ್ನು ಸೃಷ್ಟಿಸಲು ಚುನಾವಣೆ ವೇಳೆ ಯತ್ನಿಸಲಿವೆ ಎಂದು ಅವರು ಹೇಳಿದ್ದಾರೆ.

‘ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಗೋಜಿಗೆ ಹೋಗದ ಪಕ್ಷದ ಕಾರ್ಯಕರ್ತರು ಸಾಮಾಜಿಕ ತಾಣಗಳಲ್ಲಿ ಪ್ರಕಟವಾಗುವ ಸುದ್ದಿ, ಮಾಹಿತಿಗಳನ್ನು ಇನ್ನಷ್ಟು ಪಸರಿಸಲು ಮುಂದಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ಹೌ ಟು ವಿನ್ ಆ್ಯನ್ ಇಂಡಿಯನ್ ಎಲೆಕ್ಷನ್: ವಾಟ್ ಪೊಲಿಟಿಕಲ್ ಪಾರ್ಟೀಸ್ ಡೋಂಟ್ ವಾಂಟ್ ಯು ಟು ನೊ’ ಎಂಬ ಪುಸ್ತಕದಲ್ಲಿ ರಾಜಕೀಯ ಪಕ್ಷಗಳು, ಅವುಗಳ ಚುನಾವಣಾ ತಂತ್ರಗಾರಿಕೆ ಮತ್ತು ರಾಜಕೀಯದ ಅಂತರಂಗವನ್ನು ಬಹುಸೂಕ್ಷ್ಮವಾಗಿ ಸಿಂಗ್ ತೆರೆದಿಟ್ಟಿದ್ದಾರೆ.

ರಾಜಕೀಯ ಸಲಹೆಗಾರರು ಚುನಾವಣಾ ಪ್ರಚಾರದಲ್ಲಿ ಎಂತಹ ಪಾತ್ರ ನಿರ್ವಹಿಸುತ್ತಾರೆ, ರಾಜಕೀಯ ಪಕ್ಷಗಳು ದತ್ತಾಂಶ ವಿಶ್ಲೇಷಣೆಯಂತಹ ತಂತ್ರಜ್ಞಾನಗಳನ್ನು ಹೇಗೆ ಬಳಸಿಕೊಳ್ಳುತ್ತವೆ ಮೊದಲಾದ ವಿಷಯಗಳ ಮೇಲೆ ಪುಸ್ತಕ ಬೆಳಕು ಚೆಲ್ಲುತ್ತದೆ.

ಚುನಾವಣೆಗಳ ಮೇಲೆ ತಂತ್ರಜ್ಞಾನ ಎಷ್ಟು ಪ್ರಭಾವ ಬೀರುತ್ತದೆ ಎಂದು ಅರಿತುಕೊಂಡ ಮೊದಲ ಪಕ್ಷ ಬಿಜೆಪಿ ಎಂಬುದು ಅವರ ಮಾತು. ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಆಸಕ್ತಿ ತೋರಿದ್ದರು.

‘ಆನ್‌ಲೈನ್‌ನ ಜತೆಗೆ ಹೊರಗಡೆಯೂ ಕಾಂಗ್ರೆಸ್ ಮೇಲೆ ನಕಾರಾತ್ಮಕ ಅಭಿಪ್ರಾಯಗಳನ್ನು ಬಹಳ ಪರಿಣಾಮಕಾರಿಯಾಗಿ ಸೃಷ್ಟಿಸಲಾಯಿತು. ಕ್ಷೇತ್ರದ ಹೊರಗಿನ ಜನರಿಗೆ ಪರಿಣಾಮಗಳು ಮಾತ್ರ ಗೋಚರಿಸುತ್ತವೆ. 2–ಜಿ, ಕಲ್ಲಿದ್ದಲು, ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣ, ರಾಬರ್ಟ್ ವಾದ್ರಾ, ಸೋನಿಯಾ, ಚಿದಂಬರಂ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣಗಳನ್ನು ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಬಳಸಲಾಯಿತು.ಮನಮೋಹನ್ ಸಿಂಗ್ ಅವರನ್ನು ದುರ್ಬಲ ನಾಯಕ ಎಂಬಂತೆ ಚಿತ್ರಿಸಿದ್ದೂ ಇದಕ್ಕೊಂದು ನಿದರ್ಶನ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT