ಮೂರು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟಕ್ಕೆ ಒಂದು ವರ್ಷ ತುಂಬಲು ವಾರವಷ್ಟೇ ಬಾಕಿ ಇದೆ. ಈಗ, ಈ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ವರ್ಷದ ಪ್ರತಿಭಟನೆಯ ಆಗು–ಹೋಗುಗಳತ್ತ ಒಂದು ನೋಟ ಇಲ್ಲಿದೆ. ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಧಾನಿ ಹೇಳಿದ್ದರೂ, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸಿ ಕಾಯ್ದೆ ಹಿಂದಕ್ಕೆ ಪಡೆಯುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ರೈತ ಮುಖಂಡರು ಹೇಳಿದ್ದಾರೆ

1. ಕಾರ್ಪೊರೇಟ್ ಹೂಡಿಕೆಗಾಗಿ ಸುಗ್ರೀವಾಜ್ಞೆಗಳು

ದೇಶದ ಕೃಷಿ ಕ್ಷೇತ್ರದಲ್ಲಿ ವ್ಯಾಪಕ ಸುಧಾರಣೆ ತರುವುದಾಗಿ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು, ಈ ಬದಲಾವಣೆಗಳಿಗಾಗಿ 2020ರ ಜೂನ್‌ನಲ್ಲಿ ಮೂರು ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದಿತು.

ಈ ಸುಗ್ರೀವಾಜ್ಞೆಗಳು ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆಯ ಹೊರಗೂ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟವು. ಎಪಿಎಂಸಿಯ ಹೊರಗೆ ಮಾರಾಟ ಮಾಡುವ ಕೃಷಿ ಉತ್ಪನ್ನದ ಬೆಲೆಯ ಮೇಲೆ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿರುವುದಿಲ್ಲ. ಜತೆಗೆ ಕೃಷಿ ಉತ್ಪನ್ನಗಳಿಗೆ ನೀಡಲಾಗುತ್ತಿದ್ದ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಸಂಬಂಧಿಸಿದಂತೆ ಈ ಮೂರೂ ಸುಗ್ರೀವಾಜ್ಞೆಗಳಲ್ಲಿ ಒಂದು ಉಲ್ಲೇಖವೂ ಇರಲಿಲ್ಲ ಎಂಬುದು ರೈತರ ಕಳವಳವಾಗಿತ್ತು.

ಈ ಸುಗ್ರೀವಾಜ್ಞೆಗಳು ಕೃಷಿಯಲ್ಲಿ ಕಾರ್ಪೊರೇಟ್ ಕಂಪನಿಗಳ ಹೂಡಿಕೆಗೂ ಅವಕಾಶ ಮಾಡಿಕೊಟ್ಟಿತು. ಸಣ್ಣ ರೈತರಿಂದಲೂ ಕೃಷಿ ಜಮೀನು ಬೋಗ್ಯಕ್ಕೆ ಪಡೆದು, ಕೃಷಿ ನಡೆಸುವುದಕ್ಕೆ ಇದು ಅವಕಾಶ ಮಾಡಿಕೊಟ್ಟಿತು. ಇದು ದೇಶದ ಕೃಷಿ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಸರ್ಕಾರವು ಹೇಳಿತ್ತು.2020ರ ಸೆಪ್ಟೆಂಬರ್‌ನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಈ ಮೂರೂ ಸುಗ್ರೀವಾಜ್ಞೆಗಳಿಗೆ ಸಂಸತ್ತಿನ ಉಭಯ ಸದನಗಳ ಅನುಮೋದನೆ ಪಡೆಯಲಾಯಿತು. ರಾಷ್ಟ್ರಪತಿಗಳ ಅಂಕಿತವನ್ನೂ ಪಡೆಯಲಾಯಿತು. ಸುಗ್ರೀವಾಜ್ಞೆಗಳು ಕಾಯ್ದೆಗಳಾದವು.

2. ಹೋರಾಟವಾದ ರೈತರ ಕಳವಳ

ಈ ಕೃಷಿ ಕಾಯ್ದೆಗಳಲ್ಲಿ ಎಂಎಸ್‌ಪಿಯ ಉಲ್ಲೇಖವಿಲ್ಲದಿರುವ ಬಗ್ಗೆ ರೈತರು, ರೈತ ಸಂಘಟನೆಗಳು ಕಳವಳ ವ್ಯಕ್ತಪಡಿಸಿದ್ದವು. ಸರ್ಕಾರವು ಕೃಷಿ ಉತ್ಪನ್ನಗಳನ್ನು ಎಂಎಸ್‌ಪಿಯಲ್ಲಿ ಖರೀದಿಸುತ್ತದೆಯೋ ಇಲ್ಲವೋ ಎಂದು ರೈತರು ಅನುಮಾನ ವ್ಯಕ್ತಪಡಿಸಿದ್ದರು. ಎಪಿಎಂಸಿಯ ಹೊರಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಇರುವ ತೊಡಕುಗಳ ಬಗ್ಗೆಯೂ ಪ್ರಶ್ನೆಗಳು ಎದ್ದವು.

ಆದರೆ ಸರ್ಕಾರವು ಇವೆಲ್ಲವನ್ನೂ ಸ್ಪಷ್ಟಪಡಿಸುವ ಬದಲು, ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸಿತು. ‘ಎಂಎಸ್‌ಪಿಯನ್ನು ವಾಪಸ್ ಪಡೆದಿಲ್ಲ. ಎಂಎಸ್‌ಪಿ ದರದಲ್ಲೇ ಎಪಿಎಂಸಿಗಳಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತದೆ. ಆದರೆ ಎಪಿಎಂಸಿಯ ಹೊರಗೆ ಎಂಎಸ್‌ಪಿಗಿಂತಲೂ ಹೆಚ್ಚಿನ ದರದಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತಿದೆ. ಹೀಗಿದ್ದಾಗ, ಎಂಎಸ್‌ಪಿ ದರದಲ್ಲಿ ಯಾರು ಮಾರಾಟ ಮಾಡುತ್ತಾರೆ?’ ಎಂದು ಕೃಷಿ ಸಚಿವಾಲಯವು ಹೇಳಿತು. ಆದರೆ ಸರ್ಕಾರವು ತನ್ನ ಪ್ರತಿಪಾದನೆಗೆ ಪೂರಕವಾಗಿ ಯಾವುದೇ ರೀತಿಯ ಪುರಾವೆಗಳನ್ನು ಒದಗಿಸಲಿಲ್ಲ.

ಎಂಎಸ್‌ಪಿ ಪದ್ಧತಿಯನ್ನು ಮುಂದುವರಿಸಲಾಗುತ್ತದೆ ಎಂದು ಸರ್ಕಾರವು ಹೇಳುತ್ತಿದ್ದರೂ, ಅದನ್ನು ಲಿಖಿತ ರೂಪದಲ್ಲಿ ದೃಢೀಕರಿಸಿರಲಿಲ್ಲ. ಇದು ರೈತರ ಆತಂಕವನ್ನು ಹೆಚ್ಚಿಸಿತು. ಹೀಗಾಗಿ ಈ ಮೂರೂ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿದವು. ಸರ್ಕಾರವು ಈ ಕಾಯ್ದೆಗಳನ್ನು ರದ್ದುಪಡಿಸಲು ಸುತರಾಂ ಒಪ್ಪಲಿಲ್ಲ. ಬದಲಿಗೆ ಕಾಯ್ದೆಗಳಲ್ಲಿ ಬದಲಾವಣೆ ತರುವುದಾಗಿ ಹೇಳಿತು. ರೈತರು ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ಪ್ರತಿಭಟನೆಗೆ ಇಳಿದರು.

3.ದೆಹಲಿ ಚಲೋಗೆ ಹಲವು ಅಡ್ಡಿಗಳು

ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ಪಂಜಾಬ್ ಮತ್ತು ಹರಿಯಾಣದ 450 ರೈತ ಸಂಘಟನೆಗಳು ಒಟ್ಟಾಗಿ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆ ನಡೆಸಲು ಯೋಜನೆ ಹಾಕಿಕೊಂಡವು. ಇದಕ್ಕಾಗಿ ಕಿಸಾನ್ ಸಂಯುಕ್ತ ಮೋರ್ಚಾ ಎಂಬ ಒಕ್ಕೂಟವನ್ನು ರಚಿಸಿಕೊಳ್ಳಲಾಯಿತು. 2020ರ ನವೆಂಬರ್ 25ರಂದು ಪಂಜಾಬ್‌ನಿಂದ ಹೊರಟು, 26ರಂದು ಹರಿಯಾಣ ತಲುಪುವುದು ರೈತರ ಯೋಜನೆಯಾಗಿತ್ತು. ನಂತರ 27ರಂದು ದೆಹಲಿಯ ರಾಮಲೀಲಾ ಮೈದಾನ ತಲುಪಿ, ಅಲ್ಲಿ ಹರತಾಳ ನಡೆಸಲು ಕಿಸಾನ್ ಸಂಯುಕ್ತ ಮೋರ್ಚಾ ಸಿದ್ಧತೆ ಮಾಡಿಕೊಂಡಿತು.

ಯೋಜನೆ ಪ್ರಕಾರವೇ ಪಂಜಾಬ್ ರೈತರು ನವೆಂಬರ್ 25ರಂದು ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ನವೆಂಬರ್ 25ರ ತಡರಾತ್ರಿ 12ರ ವೇಳೆಗೆ ಹರಿಯಾಣ ಗಡಿ ಪ್ರವೇಶಿಸಿದರು. ಆದರೆ ರೈತರು ಹರಿಯಾಣವನ್ನು ಪ್ರವೇಶಿಸದಂತೆ ಅಲ್ಲಿನ ಬಿಜೆಪಿ ಸರ್ಕಾರವು ಎಲ್ಲಾ ಸ್ವರೂಪದ ಪ್ರಯತ್ನಗಳನ್ನೂ ಮಾಡಿತು. ಅಂಬಾಲದ ಬಳಿ ಗಡಿ ಪ್ರವೇಶಕ್ಕೂ ಮುನ್ನ ಇದ್ದ ಸೇತುವೆಯನ್ನು ಹರಿಯಾಣ ಪೊಲೀಸರು ಬಂದ್ ಮಾಡಿದರು. ಮೆರವಣಿಗೆ ಮುಂದುವರಿಸಲು ಯತ್ನಿಸಿದ ರೈತರ ಮೇಲೆ ಲಾಠಿ ಪ್ರಯೋಗಿಸಿದರು. ಮೈಕೊರೆಯುವ ಚಳಿಯಲ್ಲಿ ರೈತರ ಮೇಲೆ ಜಲಫಿರಂಗಿ ಪ್ರಯೋಗಿಸಿದರು. ಇದ್ಯಾವುದನ್ನೂ ಲೆಕ್ಕಿಸದೆ ರೈತರು ಮುಂದುವರಿದರು. ಬ್ಯಾರಿಕೇಡ್‌ಗಳನ್ನು ಕಿತ್ತು, ನದಿಗೆ ಎಸೆದು ಸೇತುವೆಯನ್ನು ದಾಟಿದರು.

ಹರಿಯಾಣ ಸರ್ಕಾರವು ದೆಹಲಿಯ ಹೆದ್ದಾರಿಗಳ ಉದ್ದಕ್ಕೂ ತಡೆಗಳನ್ನು ನಿರ್ಮಿಸಿತು. ಹೆದ್ದಾರಿಗಳಲ್ಲಿ ಅಡ್ಡವಾಗಿ ಕಂದಕ ತೋಡಲಾಯಿತು, ದೊಡ್ಡ ಟಿಪ್ಪರ್‌ಗಳನ್ನು ನಿಲ್ಲಿಸಲಾಯಿತು. ರೈತರು ತಮ್ಮ ಟ್ರ್ಯಾಕ್ಟರ್ ಮತ್ತು ಜೆಸಿಬಿಗಳನ್ನು ಬಳಸಿಕೊಂಡು ಈ ತಡೆಗಳನ್ನು ತೆಗೆದುಹಾಕಿದರು. ನವೆಂಬರ್ 27ರ ವೇಳೆಗೆ ರೈತರು ದೆಹಲಿ ಗಡಿ ತಲುಪಿದರು.

4. ಸಿಂಘು–ಟಿಕ್ರಿ ಗಡಿಯಲ್ಲಿ ತಡೆ

ಹರಿಯಾಣದಿಂದ ದೆಹಲಿ ಪ್ರವೇಶಕ್ಕೆ ಅವಕಾಶವಿದ್ದ ಸಿಂಘು ಗಡಿ ಮತ್ತು ಟಿಕ್ರಿ ಗಡಿಯಲ್ಲಿ ದೆಹಲಿ ಪೊಲೀಸರು ಹೆದ್ದಾರಿಗಳನ್ನು ಬಂದ್ ಮಾಡಿದರು. ಈ ಹೆದ್ದಾರಿಗಳಿಗೆ ಅಡ್ಡವಾಗಿ ಟ್ರಕ್, ಟಿಪ್ಪರ್‌ಗಳನ್ನು ನಿಲ್ಲಿಸಲಾಯಿತು. ಖಾಲಿ ಕಂಟೇನರ್‌ಗಳನ್ನು ಇಡಲಾಯಿತು. ಪ್ರಿಕಾಸ್ಟ್ ಕಾಂಕ್ರೀಟ್ ಗೋಡೆಗಳನ್ನು ತಂದಿಡಲಾಯಿತು. ರೈತರು ದೆಹಲಿ ಪ್ರವೇಶಿಸುವುದನ್ನು ತಡೆಯಲಾಯಿತು.

ಕಾಯ್ದೆಗಳು ರದ್ದಾಗುವವರೆಗೂ ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಸಿದ್ಧರಾಗಿ ಬಂದಿದ್ದ ರೈತರು ಸಿಂಘು ಮತ್ತು ಟಿಕ್ರಿ ಗಡಿಗಳಲ್ಲೇ ಬಿಡಾರ ಹೂಡಿದರು. ಎತ್ತಿನಗಾಡಿ, ಟ್ರ್ಯಾಕ್ಟರ್‌ಗಳಲ್ಲೇ ಬಿಡಾರ ರೂಪಿಸಿಕೊಂಡರು. ತಾವು ತಂದಿದ್ದ ದವಸ ಧಾನ್ಯಗಳಲ್ಲೇ ಅಡುಗೆ ಮಾಡಿಕೊಂಡು ಸಾಮೂಹಿಕವಾಗಿ ಊಟ ಮಾಡಿದರು. ಪ್ರತಿಭಟನೆಗೆ ಬಂದು ಸೇರುವ ರೈತರ ಸಂಖ್ಯೆದಿನೇ ದಿನೇ ಹೆಚ್ಚಾಯಿತು.

ರೈತರನ್ನು ತಡೆಯುವುದಕ್ಕಾಗಿ ಕೇಂದ್ರ ಸರ್ಕಾರವು ಈ ಗಡಿಗಳಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಗಡಿ ಭದ್ರತಾ ಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳಂತಹ ಅರೆಸೇನಾ ಪಡೆಗಳನ್ನು ನಿಯೋಜಿಸಿತು. ಗಡಿಗಳನ್ನು ಮುಳ್ಳುಬೇಲಿಗಳಿಂದ ಮುಚ್ಚಲಾಯಿತು. ರಸ್ತೆಗಳಿಗೆ ಕಬ್ಬಿಣದ ಮೊಳೆಗಳನ್ನು ಅಳವಡಿಸಲಾಯಿತು. ಹೀಗಾಗಿ ರೈತರು ಈ ಗಡಿಗಳಲ್ಲೇ ಪ್ರತಿಭಟನೆ ಮುಂದುವರಿಸಿದರು. ಮತ್ತೊಂದೆಡೆ ಉತ್ತರ ಪ್ರದೇಶ, ಉತ್ತರಾಖಂಡದ ರೈತರು ದೆಹಲಿ ಚಲೋ ಪ್ರತಿಭಟನೆ ಆರಂಭಿಸಿದರು. ಡಿಸೆಂಬರ್ ಮೊದಲ ವಾರದ ವೇಳೆಗೆ ದೆಹಲಿ–ಉತ್ತರಪ್ರದೇಶದ ಗಡಿ ಪಟ್ಟಣವಾದ ಗಾಜಿಪುರ ತಲುಪಿದರು. ಅಲ್ಲಿ ರೈತರನ್ನು ತಡೆಯಲಾಯಿತು. ಗಾಜಿಪುರದಲ್ಲೂ ರೈತರ ಪ್ರತಿಭಟನೆ ಮುಂದುವರಿಯಿತು.

5. ಮಾತುಕತೆ ವಿಫಲ

‘ರೈತರು ಪ್ರತಿಭಟನೆಯನ್ನು ಬಿಟ್ಟು ವಾಪಸಾದರೆ ಮಾತ್ರವೇ ಮಾತುಕತೆಗೆ ಸಿದ್ಧ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2020ರ ಡಿಸೆಂಬರ್ 3ರಂದು ಘೋಷಿಸಿದರು. ಕೃಷಿ ಕಾಯ್ದೆಗಳನ್ನು ರದ್ದುಪಡಿಸದ ಹೊರತು ನಾವು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ತಮ್ಮ ಬೇಡಿಕೆಗೆ ಬದ್ಧವಾದರು.

ಡಿಸೆಂಬರ್ 3ರಂದು ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಮೊದಲ ಸುತ್ತಿನ ಮಾತುಕತೆ ನಡೆಯಿತು. ಮಾತುಕತೆ ವಿಫಲವಾಯಿತು. ನಂತರ ನಡೆದ 11 ಸುತ್ತಿನ ಮಾತುಕತೆಗಳೂ ವಿಫಲವಾದವು. ಕಾಯ್ದೆ ರದ್ದುಪಡಿಸುವುದಿಲ್ಲ ಎಂದು ಸರ್ಕಾರ ಹೇಳಿತು. ರೈತರು ಕಾಯ್ದೆ ರದ್ದುಪಡಿಸಲೇಬೇಕು ಎಂದು ಪಟ್ಟು ಹಿಡಿದರು.ತಮ್ಮ ಬೇಡಿಕೆಗೆ ಸರ್ಕಾರ ಮಣಿಯದೇ ಇದ್ದಾಗ ರೈತರು ದೇಶದಾದ್ಯಂತ ಭಾರತ್ ಬಂದ್‌ಗೆ ಕರೆ ನೀಡಿದರು.

ಡಿಸೆಂಬರ್ 8ರಂದು ನಡೆದ ಭಾರತ್ ಬಂದ್‌ಗೆ ದೇಶದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ದೊಡ್ಡ ಮಟ್ಟದ ಬಂದ್ ನಡೆಯಿತು. ಬಿಜೆಪಿ ಮತ್ತು ಮಿತ್ರಪಕ್ಷಗಳ ಸರ್ಕಾರವಿದ್ದ ಉತ್ತರ ಪ್ರದೇಶ, ಕರ್ನಾಟಕ ಮತ್ತು ಬಿಹಾರದಲ್ಲೂ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

6. ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ಈ ಕಾಯ್ದೆಗಳ ವಿರುದ್ಧ 2020ರ ಡಿಸೆಂಬರ್ 2ನೇ ವಾರದಲ್ಲಿ ಕಿಸಾನ್ ಸಂಯುಕ್ತ ಮೋರ್ಚಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಕಾಯ್ದೆಗಳನ್ನು ರದ್ದುಪಡಿಸಲು ನಿರ್ದೇಶನ ನೀಡುವಂತೆ ಕೋರಲಾಯಿತು. ರೈತರ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು. ಪ್ರತಿಭಟನೆ ವೇಳೆ ರೈತರನ್ನು ಪೊಲೀಸರು ನಡೆಸಿಕೊಂಡ ಬಗ್ಗೆ ಸುಪ್ರೀಂ ಕೋರ್ಟ್ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿತು. ಈ ಕಾಯ್ದೆಗಳ ಪರಿಶೀಲನೆಗೆ ತಜ್ಞರ ಸಮಿತಿಯನ್ನು ರಚಿಸಿತು.

7. ಜನವರಿ 26ರ ಅವಘಡ

ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ರೈತ ಸಂಘಟನೆಗಳು ಜನವರಿ 26ರ ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ಕರೆ ನೀಡಿದವು. ಪೂರ್ವ ನಿಗದಿಯಂತೆ ಎಲ್ಲೆಡೆಯಿಂದ ರೈತರು ಟ್ರ್ಯಾಕ್ಟರ್‌ಗಳಲ್ಲಿ ದೆಹಲಿಯತ್ತ ಬಂದರು. ಕೆಂಪುಕೋಟೆಯಲ್ಲಿ ಸರ್ಕಾರದ ಕಾರ್ಯಕ್ರಮ ಮುಗಿದ ನಂತರ ರೈತರು ದೆಹಲಿ ಪ್ರವೇಶಕ್ಕೆ ಅವಕಾಶ ನೀಡಲಾಯಿತು.

ರೈತರ ಗುಂಪೊಂದು ಕೆಂಪುಕೋಟೆಗೆ ಮುತ್ತಿಗೆ ಹಾಕಿ, ಅಲ್ಲಿದ್ದ ರಾಷ್ಟ್ರಧ್ವಜವನ್ನು ಕೆಳಗೆ ಇಳಿಸಿತು. ಸಿಖ್ ಧಾರ್ಮಿಕ ಸಂಘಟನೆಯೊಂದರ ಧ್ವಜವನ್ನು ಹಾರಿಸಿತು. ಈ ವೇಳೆ ಪೊಲೀಸರು ಮತ್ತು ರೈತರ ಮಧ್ಯೆ ಸಂಘರ್ಷ ನಡೆದು ಹಲವರು ಗಾಯಗೊಂಡರು. ದೆಹಲಿ ಪ್ರವೇಶದ ವೇಳೆ ಟ್ರ್ಯಾಕ್ಟರ್ ಒಂದು ಮಗುಚಿಬಿದ್ದು, ಒಬ್ಬ ರೈತ ಮೃತಪಡಬೇಕಾಯಿತು. ಈ ಘಟನೆಗಳು ರೈತರ ಹೋರಾಟದಲ್ಲಿ ದೊಡ್ಡ ಹಿನ್ನಡೆಗೆ ಕಾರಣವಾಯಿತು. ಎರಡು ತಿಂಗಳು ಅಹಿಂಸಾ ರೂಪದಲ್ಲಿ ನಡೆದಿದ್ದ ಪ್ರತಿಭಟನೆ, ಜನವರಿ 26ರಂದು ಹಿಂಸಾಚಾರಕ್ಕೆ ಕಾರಣವಾಗಿತ್ತು. ಇದು ರೈತರಲ್ಲಿನ ಆತ್ಮಸ್ಥೈರ್ಯವನ್ನು ಕುಗ್ಗಿಸಿತು. ದೇಶದಾದ್ಯಂತ ರೈತರಿಗೆ ಬೆಂಬಲ ನೀಡಿದ್ದವರು, ಆ ಬಗ್ಗೆ ಯೋಚಿಸುವಂತಾಯಿತು. ಕೆಂಪುಕೋಟೆಯ ಮೇಲೆ ಹಾರಿಸಲಾದ ಧ್ವಜವು ಖಲಿಸ್ತಾನ್ ಹೋರಾಟಗಾರರ ಧ್ವಜ ಎಂದು ಸರ್ಕಾರವು ಹೇಳಿತು. ‘ರೈತರ ಮಧ್ಯೆ ಭಯೋತ್ಪಾದಕರು ಸೇರಿಕೊಂಡಿದ್ದಾರೆ. ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ, ಉಗ್ರರು’ ಎಂದು ಕೇಂದ್ರ ಸರ್ಕಾರ ಘೋಷಿಸಿತು. ಬಿಜೆಪಿ ನಾಯಕರೂ ಇದನ್ನೇ ಪುನರುಚ್ಚರಿಸಿದರು.

8. ಹೋರಾಟದ ಮರುಹುಟ್ಟು

ಜನವರಿ 26ರ ಘಟನೆಗಳ ನಂತರ ರೈತರ ಪ್ರತಿಭಟನೆಗೆ ಇದ್ದ ಬೆಂಬಲ ಕಡಿಮೆಯಾಯಿತು. ಸಾವಿರಾರು ರೈತರು ದೆಹಲಿ ಗಡಿಗಳಿಂದ ತಮ್ಮ ಗ್ರಾಮಗಳಿಗೆ ಮರಳಾರಂಭಿಸಿದರು. ರೈತರ ಹೋರಾಟ ಕೊನೆಯಾಯಿತು ಎಂದೇ ವಿಶ್ಲೇಷಿಸಲಾಯಿತು. ಆದರೆ ಉತ್ತರ ಪ್ರದೇಶದ ಭಾರತೀಯ ಕಿಸಾನ್ ಯೂನಿಯನ್‌ನ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಅವರು ರೈತರ ಎದುರು ಕಣ್ಣೀರಿಟ್ಟು, ಪ್ರತಿಭಟನೆ ಮಂದುವರಿಸಬೇಕಾದ ಅಗತ್ಯವನ್ನು ಮನವರಿಕೆ ಮಾಡಿದರು. ಆನಂತರ ರೈತರ ಹೋರಾಟವು ಮರುಹುಟ್ಟು ಪಡೆಯಿತು. ರೈತರು ಮತ್ತೆ ಪ್ರತಿಭಟನೆಗೆ ಮರಳಿದರು.

ಈ ಹೋರಾಟದ ಅಗತ್ಯವನ್ನು ಮನಗಾಣಿಸಲು ರೈತ ಸಂಘಟನೆಗಳು ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ಹಲವೆಡೆ ರೈತ ಮಹಾಪಂಚಾಯಿತಿಗಳನ್ನು ಆಯೋಜಿಸಿದವು. ಇದಕ್ಕೆ ನಿರೀಕ್ಷೆಗಿಂತಲೂ ಹೆಚ್ಚು ಬೆಂಬಲ ವ್ಯಕ್ತವಾಯಿತು. ಈ ಕೃಷಿ ಕಾಯ್ದೆಗಳು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ರೈತ ಸಂಘಟನೆಗಳು ಪ್ರಚಾರ ಮಾಡಿದವು. ಹರಿಯಾಣದಲ್ಲಿ ರೈತ ಮಹಾಪಂಚಾಯಿತಿ ನಡೆಸಿದ ರೈತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಯಿತು. ಆದರೆ ರೈತ ಸಂಘಟನೆಗಳು ಮತ್ತೆ ಹೋರಾಟವನ್ನು ಕೈಬಿಡಲಿಲ್ಲ.

9.ಜಾಗತಿಕ ಮಟ್ಟಕ್ಕೆ ಒಯ್ದ ಟೂಲ್‌ಕಿಟ್

‘ಟೂಲ್‌ಕಿಟ್’ ವಿವಾದದಿಂದಾಗಿರೈತರ ಪ್ರತಿಭಟನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು.

ರೈತರ ಪ್ರತಿಭಟನೆ ಹತ್ತಿಕ್ಕಲು ಭಾರತ ಸರ್ಕಾರ ದೆಹಲಿಯ ಸುತ್ತಲಿನ ಪ್ರದೇಶಗಳಲ್ಲಿ ಇಂಟರ್‌ನೆಟ್ ಕಡಿತಗೊಳಿಸಿದ್ದ ಕುರಿತು ಸಿಎನ್‌ಎನ್ ಸುದ್ದಿವಾಹಿನಿಯು ವರದಿ ಮಾಡಿತ್ತು. ಪರಿಸರಪರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಈ ವರದಿಯನ್ನು2021ರ ಫೆ.3ರಂದು ಟ್ವೀಟ್ ಮಾಡಿದ್ದರು. ‘ಭಾರತದ ರೈತರ ಪ್ರತಿಭಟನೆ ಜೊತೆ ನಾವು ನಿಲ್ಲುತ್ತೇವೆ’ ಎಂದು ಹ್ಯಾಷ್‌ಟ್ಯಾಗ್ ನೀಡಿದ್ದರು. ಅದೇ ಹ್ಯಾಷ್‌ಟ್ಯಾಗ್ ಜೊತೆ ಮತ್ತೊಂದು ಟ್ವೀಟ್ ಮಾಡಿದ್ದರು. ಆದರೆ ಅದನ್ನು ಕೂಡಲೇ ಅಳಿಸಲಾಗಿತ್ತು. ಅಳಿಸಲಾದ ಟ್ವೀಟ್ ಅನ್ನು ‘ಟೂಲ್‌ಕಿಟ್’ ಎನ್ನಲಾಗಿದೆ.

ಟೂಲ್‌ಕಿಟ್‌ನಲ್ಲಿ ಏನಿದೆ?:ಭಾರತದ ರೈತರ ಜತೆ ಚರ್ಚೆ ನಡೆಸದೇ ನೂತನ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಇವು ರೈತರನ್ನು ಕಾರ್ಪೊರೇಟ್ ಕಂಪನಿಗಳ ನಿಯಂತ್ರಣಕ್ಕೆ ಸಿಲುಕಿಸುತ್ತವೆ. ಇವುಗಳ ವಿರುದ್ಧ ಹೋರಾಡುತ್ತಿರುವ ರೈತರಿಗೆ ಬೆಂಬಲ ಸೂಚಿಸಿ.ಫೆಬ್ರುವರಿ 13/14ರಂದು ಡಿಜಿಟಲ್ ಸ್ಟ್ರೈಕ್ ನಡೆಸಿ. ಸಾಮಾಜಿಕ ಜಾಲತಾಣಗಳಲ್ಲಿ #FarmersProtest #StandWithFarmers ಹ್ಯಾಷ್‌ಟ್ಯಾಗ್ ಬಳಸಿ, ಪೋಸ್ಟ್ ಮಾಡಿ. ಭಾರತದ ರಾಯಭಾರ ಕಚೇರಿಗಳ ಎದುರು ಪ್ರತಿಭಟನೆ ನಡೆಸಿ. ಫೆಬ್ರುವರಿ 13/14ಕ್ಕೂ ಮೊದಲೂ ಪ್ರತಿಭಟನೆ ನಡೆಸಿ. #AskIndiaWhy ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಿ. ಟ್ವೀಟ್‌ನಲ್ಲಿ ಭಾರತದ ಪ್ರಧಾನಿ ಮತ್ತು ಕೃಷಿ ಸಚಿವರನ್ನು ಟ್ಯಾಗ್ ಮಾಡಿ ಎಂದು ಈ ಟೂಲ್‌ಕಿಟ್‌ನಲ್ಲಿ ಕರೆ ನೀಡಲಾಗಿದೆ.

ದೇಶದ್ರೋಹದ ಮೊಕದ್ದಮೆ:2021ರ ಫೆ.4ರಂದು ದೆಹಲಿ ಪೊಲೀಸರು ‘ಟೂಲ್‌ಕಿಟ್’ ರಚಿಸಿರುವವರ (ಎಫ್‌ಐಆರ್‌ನಲ್ಲಿ ಯಾರನ್ನೂ ಹೆಸರಿಸಿಲ್ಲ) ವಿರುದ್ಧ ಕ್ರಿಮಿನಲ್ ಸಂಚು ಮತ್ತು ದೇಶದ್ರೋಹದ ಮೊಕದ್ದಮೆ ದಾಖಲಿಸಿದರು. ಭಾರತ ಸರ್ಕಾರದ ವಿರುದ್ಧ ಸಂಚು ನಡೆಸಲಾಗಿದೆ. ಜ.26ರಂದು ದೆಹಲಿಯಲ್ಲಿನಡೆದ ಹಿಂಸಾಚಾರಗಳು ಟೂಲ್‌ಕಿಟ್‌ನಲ್ಲಿ ನೀಡಿದ್ದ ಕಾರ್ಯಯೋಜನೆ ಮಾದರಿಯಲ್ಲೇ ನಡೆದಿವೆ ಎಂದು ದೆಹಲಿಯ ಅಪರಾಧ ತಡೆ ವಿಭಾಗದ ಪೊಲೀಸರು ಹೇಳಿದ್ದರು.

ಖ್ಯಾತ ಗಾಯಕಿ ರಿಯಾನಾ, ಸಾಮಾಜಿಕ ಕಾರ್ಯಕರ್ತೆ ಮೀನಾ ಹ್ಯಾರಿಸ್, ಕೆನಡ ಅಧ್ಯಕ್ಷ ಜಸ್ಟಿನ್ ಟ್ರೂಡೊ, ಅಮೆರಿಕದ ನಟ ಜಾನ್ ಕ್ಯೂಸಕ್ ಸೇರಿ ಜಗತ್ತಿನ ಹಲವಾರು ಪ್ರಭಾವಿಗಳು ಭಾರತದ ರೈತರ ಪ್ರತಿಭಟನೆಯನ್ನು ಬೆಂಬಲಿಸಿದರು.

ದಿಶಾ ರವಿ ಬಂಧನ:ಬೆಂಗಳೂರಿನ ಬಿಬಿಎ ವಿದ್ಯಾರ್ಥಿನಿ, ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು 2021ರ ಫೆ.13ರಂದು ದೆಹಲಿ ಪೊಲೀಸರು ಬಂಧಿಸಿದ್ದರು. ಪೊಲೀಸರ ಪ್ರಕಾರ, ಟೂಲ್‌ಕಿಟ್‌ಅನ್ನು ರಚಿಸಿದ್ದವರಲ್ಲಿ ದಿಶಾ ರವಿ ಕೂಡಾ ಒಬ್ಬರು. ಅದೇ ತಿಂಗಳು ಫೆ.23 ದಿಶಾ ಅವರಿಗೆ ಸೆಷನ್ಸ್ ಕೋರ್ಟ್‌ನಿಂದ ಜಾಮೀನು ದೊರಕಿತು. ದಿಶಾ ಬಂಧನದ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು.

ಭಾರತೀಯ ಸೆಲೆಬ್ರಿಟಿಗಳ ಪ್ರತಿಕ್ರಿಯೆ:ರೈತರ ಪ್ರತಿಭಟನೆ ‘ಭಾರತದ ಆಂತರಿಕ ವಿಷಯ’ ಇದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂಬರ್ಥದ ಟ್ವೀಟ್‌ಗಳನ್ನು ಭಾರತದ ಖ್ಯಾತನಾಮರಲ್ಲಿ ಕೆಲವರು ಮಾಡಿದ್ದರು. ಈ ಟ್ವೀಟ್‌ಗಳ ವಸ್ತು ಮತ್ತು ಬಳಕೆಯಾದ ಪದಗಳು ಒಂದೇ ರೀತಿ ಇದ್ದು, ಸರ್ಕಾರವೇ ಖ್ಯಾತನಾಮರಿಂದ ಟ್ವೀಟ್ ಮಾಡಿಸಿದೆ ಎಂದು ವಿಪಕ್ಷಗಳು ಟೀಕಿಸಿದ್ದವು.

10. ‘ಹೆದ್ದಾರಿ ತಡೆ ಸರಿಯಲ್ಲ’

ದೆಹಲಿಯ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಕಾರಣ ತೊಂದರೆಯಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಯಿತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರೈತರ ಪ್ರತಿಭಟನೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಅಧ್ಯಯನ ನಡೆಸಿ, ವರದಿ ನೀಡಿ ಎಂದು ಕೇಂದ್ರ, ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿತು. ಪ್ರತಿಭಟನೆಯಿಂದ ಆಗುತ್ತಿರುವ ಆರ್ಥಿಕ ತೊಂದರೆ, ಸಾಮಾಜಿಕ ಸಮಸ್ಯೆಗಳು, ಜನರ ಓಡಾಟಕ್ಕೆ ಆಗುತ್ತಿರುವ ತೊಂದರೆಗಳ ಬಗ್ಗೆ ಅಧ್ಯಯನ ನಡೆಸಿ ಎಂದು ಆಯೋಗವು ಸೂಚಿಸಿತ್ತು.

ರೈತರು ಹೆದ್ದಾರಿಗಳನ್ನು ಬಂದ್ ಮಾಡಿದ್ದಾರೆ ಎಂದು ಕೆಲವರು ಅರ್ಜಿ ಸಲ್ಲಿಸಿದರು. ಆದರೆ ಹೆದ್ದಾರಿ ಬಂದ್ ಮಾಡಿರುವುದು ರೈತರಲ್ಲ, ಪೊಲೀಸರು ಎಂಬುದನ್ನು ರೈತ ಸಂಘಟನೆಗಳು ನ್ಯಾಯಾಲಯಗಳಿಗೆ ಮನವರಿಕೆ ಮಾಡಿಕೊಟ್ಟವು.

ಲಖಿಂಪುರ ಖೇರಿ ರೈತರ ಹತ್ಯೆ

ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಇದೇ ಅಕ್ಟೋಬರ್ 3ರಂದು ನಡೆದ ಪ್ರತಿಭಟನೆ ಮತ್ತು ಆನಂತರ ರೈತರ ಮೇಲೆ ಎಸ್‌ಯುವಿ ಹರಿಸಿ ನಾಲ್ವರನ್ನು ಕೊಂದ ಘಟನೆ ಬಹುದೊಡ್ಡ ಸುದ್ದಿಯಾಯಿತು.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಸ್ವಕ್ಷೇತ್ರದ ಪಟ್ಟಣವಾದ ಲಖಿಂಪುರ ಖೇರಿಯಲ್ಲಿ ಅಕ್ಟೋಬರ್ 3ರಂದು ಬಿಜೆಪಿಯ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಅಜಯ್ ಮಿಶ್ರಾ ಅವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದರು. ಈ ಕಾರ್ಯಕ್ರಮದ ವೇಳೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ರೈತರು ಹೇಳಿದ್ದರು. ‘ನಮಗೆ ಅಡ್ಡಿಪಡಿಸಿದರೆ ತಕ್ಕಶಾಸ್ತಿ ಮಾಡುತ್ತೇನೆ’ ಎಂದು ಸಚಿವ ಅಜಯ್ ಮಿಶ್ರಾ ಬೆದರಿಕೆ ಹಾಕಿದ್ದರು.

ಪೂರ್ವನಿಗದಿಯಂತೆ ಅಕ್ಟೋಬರ್ 3ರಂದು ಬಿಜೆಪಿಯ ಕಾರ್ಯಕ್ರಮ ನಡೆಯಿತು, ರೈತರು ಕಪ್ಪುಬಾವುಟವನ್ನೂ ಪ್ರದರ್ಶಿಸಿದರು. ರೈತರನ್ನು ಹೀಯಾಳಿಸಿ ಅಜಯ್ ಮಿಶ್ರಾ ಅವರು ಹೊರಟರು. ಪ್ರತಿಭಟನೆಯಿಂದ ರೈತರೂ ವಾಪಸಾಗುತ್ತಿದ್ದರು. ಅಜಯ್ ಮಿಶ್ರಾ ಅವರ ಮಾಲೀಕತ್ವದ ಒಂದು ಎಸ್‌ಯುವಿ ಹಿಂಬದಿಯಿಂದ ರೈತರ ಮೇಲೆ ನುಗ್ಗಿತು. ಆ ಕೃತ್ಯದಲ್ಲಿ ನಾಲ್ವರು ರೈತರು ಮೃತರಾದರು. ನಂತರ ಕೆರಳಿದ ರೈತರು ಅಜಯ್ ಮಿಶ್ರಾ ಅವರ ಎರಡು ಎಸ್‌ಯುವಿಗಳನ್ನು ಉರುಳಿಸಿ ಬೆಂಕಿ ಹಚ್ಚಿದರು. ನಂತರ ನಡೆದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟರು.

ರೈತರ ಮೇಲೆ ನುಗ್ಗಿದ ಎಸ್‌ಯುವಿಯಲ್ಲಿ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಅವರಿದ್ದರು. ರೈತರ ಮೇಲೆ ಅವರೇ ಎಸ್‌ಯುವಿ ನುಗ್ಗಿಸಿದ್ದು ಮತ್ತು ಗುಂಡು ಹಾರಿಸಿ ರೈತರನ್ನು ಕೊಂದರು ಎಂದು ಆಶಿಶ್ ಮಿಶ್ರಾ ವಿರುದ್ಧ ಎಫ್‌ಐಆರ್ ದಾಖಲಾಯಿತು. ರೈತರ ವಿರುದ್ಧವೂ ಎಫ್‌ಐಆರ್ ದಾಖಲಾಯಿತು. ಆಶಿಶ್ ಮಿಶ್ರಾ ತಲೆಮರೆಸಿಕೊಂಡರು. ಬಿಜೆಪಿ ಸರ್ಕಾರವು ಸಚಿವರ ಮಗನನ್ನು ರಕ್ಷಿಸುತ್ತಿದೆ ಎಂದು ರೈತ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಆರೋಪಿಸಿದವು.

ನಂತರ ಆಶಿಶ್ ಮಿಶ್ರಾನನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಘಟನೆಯ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಎಸ್‌ಐಟಿ ರಚಿಸಿತು. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಯಿತು. ತನಿಖೆಯಲ್ಲಿ ಈವರೆಗೆ ಆಗಿರುವ ಪ್ರಗತಿಯ ಬಗ್ಗೆ ಸುಪ್ರೀಂ ಕೋರ್ಟ್, ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಆರೋಪಿಯನ್ನು ರಕ್ಷಿಸಲು ಅನುಕೂಲವಾಗುವಂತೆ ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಪಂಜಾಬ್–ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಾಕೇಶ್ ಕುಮಾರ್ ಜೈನ್ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.