ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನಿಷ್ಠ ಬೆಂಬಲ ಬೆಲೆಗೆ ಹಿಂದೇಟು ಏಕೆ?: ಕಾಂಗ್ರೆಸ್

Published 14 ಫೆಬ್ರುವರಿ 2024, 23:38 IST
Last Updated 14 ಫೆಬ್ರುವರಿ 2024, 23:38 IST
ಅಕ್ಷರ ಗಾತ್ರ

ನವದೆಹಲಿ: ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಬಲ ನೀಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿರುವುದು ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ರೈತರು ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ದೂರಿದೆ.

‘2011ರಲ್ಲಿ ಗುಜರಾತ್ ಮುಖ್ಯಮಂತ್ರಿ ಹಾಗೂ ಕಾರ್ಯಕಾರಿ ಗುಂಪೊಂದರ ಅಧ್ಯಕ್ಷ ಆಗಿದ್ದ ನರೇಂದ್ರ ಮೋದಿ ಅವರು, ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ವರದಿಯೊಂದನ್ನು ಸಲ್ಲಿಸಿದ್ದರು. ರೈತರ ಹಿತವನ್ನು ಕಾಯುವ ನಿಟ್ಟಿನಲ್ಲಿ, ರೈತ ಹಾಗೂ ವರ್ತಕರ ನಡುವೆ ಯಾವ ವಹಿವಾಟು ಕೂಡ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಗೆ ನಡೆಯದಂತೆ ಖಾತರಿಪಡಿಸುವ ಕ್ರಮವನ್ನು ನಾವು ಕಾನೂನಿನ ಮೂಲಕ ತೆಗೆದುಕೊಳ್ಳಬೇಕು ಎಂದು ಅದರಲ್ಲಿ ಹೇಳಿದ್ದರು’ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ತಿಳಿಸಿದ್ದಾರೆ.

ಎಲ್ಲ ಬೆಳೆಗಳನ್ನೂ ಕನಿಷ್ಠ ಬೆಂಬಲ ಬೆಲೆಗೆ ಖರೀದಿಸಲಾಗುವುದು, ಈ ಬೆಂಬಲ ಬೆಲೆಯು ಸ್ವಾಮಿನಾಥನ್ ಸಮಿತಿಯ ಸೂತ್ರವನ್ನು ಆಧರಿಸಿರಲಿದೆ ಎಂದು ಮೋದಿ ಅವರು 2014ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದರು ಎಂದು ರಮೇಶ್ ತಿಳಿಸಿದ್ದಾರೆ.

ಆದರೆ ಇದುವರೆಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸಿಕ್ಕಿಲ್ಲ, ಸ್ವಾಮಿನಾಥನ್ ಸಮಿತಿಯ ಸೂತ್ರದ ಪ್ರಕಾರ ನಿಗದಿ ಕೂಡ ಆಗಿಲ್ಲ ಎಂದು ರಮೇಶ್ ಹೇಳಿದ್ದಾರೆ.

‘ಮೋದಿಯವರೇ, ನೀವು ನಿಮ್ಮದೇ ಸಮಿತಿಯ 2011ರ ವರದಿಯನ್ನು ಅನುಷ್ಠಾನಕ್ಕೆ ಏಕೆ ತಂದಿಲ್ಲ? ಕನಿಷ್ಠ ಬೆಂಬಲ ಬೆಲೆ ನೀಡಲಾಗುತ್ತದೆ ಎಂದು ಮತ್ತೆ ಮತ್ತೆ ಭರವಸೆ ನೀಡಿ ರೈತರಿಗೆ ಸುಳ್ಳು ಹೇಳಿದ್ದು ಏಕೆ?’ ಎಂದು ಅವರು ಪ್ರಶ್ನಿಸಿದ್ದಾರೆ. ಸ್ವಾಮಿನಾಥನ್‌ ಆಯೋಗದ ವರದಿಯ ಲೆಕ್ಕಾಚಾರದ ಅನುಗುಣವಾಗಿ ಗೋಧಿಗೆ ಕನಿಷ್ಠ ಬೆಂಬಲ ಬೆಲೆಯು ಕ್ವಿಂಟಲ್‌ಗೆ ₹2,478 ಇರಬೇಕಿತ್ತು. ಆದರೆ ಅದು ₹2,275 ಮಾತ್ರ ಇದೆ. ಹಾಗೆಯೇ, ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯು ಕ್ವಿಂಟಲ್‌ಗೆ ₹2,866 ಇರಬೇಕಿತ್ತು. ಅದು ₹2,183 ಮಾತ್ರವೇ ಇದೆ ಎಂದು ರಮೇಶ್ ಅವರು ಹೇಳಿದ್ದಾರೆ.

ಕುಟಿಲ ತಂತ್ರ ನಿಲ್ಲಲಿ: ಬಿಕೆಎಸ್

‘ದೆಹಲಿ ಚಲೋ’ ಹೋರಾಟವು ರಾಜಕೀಯ ಪ್ರೇರಿತವಾಗಿರುವಂತೆ ಕಾಣುತ್ತಿದೆ ಎಂದು ಹೇಳಿರುವ ಭಾರತೀಯ ಕಿಸಾನ್‌ ಸಂಘ (ಬಿಕೆಎಸ್‌), ಈ ಹೋರಾಟಕ್ಕೆ ತನ್ನ ಬೆಂಬಲ ಇಲ್ಲ ಎಂದು ತಿಳಿಸಿದೆ. ಭಾರತೀಯ ಕಿಸಾನ್ ಸಂಘವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT