ಸೂರತ್: ರೈಲ್ವೆ ಹಳಿಗಳ ಫಿಶ್ ಪ್ಲೇಟ್‌ಗಳನ್ನು ತೆರವುಗೊಳಿಸಿ, ಹಲವೆಡೆ ಬೋಲ್ಟ್‌ಗಳನ್ನು ಸಡಿಲಿಸಿರುವ ದುಷ್ಕರ್ಮಿಗಳು, ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿರುವ ಪ್ರಕರಣ ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ ಶನಿವಾರ ವರದಿಯಾಗಿದೆ.
ಈ ಪ್ರಕರಣ ಬೆಳಿಗ್ಗೆ 5.30ಕ್ಕೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫಿಶ್ ಪ್ಲೇಟ್‌ಗಳು ಬಿಚ್ಚಿರುವುದು ಮತ್ತು ಬೋಲ್ಟ್‌ಗಳು ಸಡಿಲಗೊಂಡಿರುವುದನ್ನು ಹಳಿ ತಪಾಸಣೆಯಲ್ಲಿ ತೊಡಗಿದ್ದ ಸಿಬ್ಬಂದಿ ಗಮನಿಸಿದ್ದಾರೆ. ಕೋಸಂಬ ಮತ್ತು ಕಿಮ್ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಅದೇ ಹಳಿ ಮೇಲೆ ಸ್ಪಲ್ಪ ಹೊತ್ತಿನಲ್ಲೇ ರೈಲು ಸಂಚರಿಸಲಿದೆ ಎಂಬುದನ್ನು ಅರಿತ ಅವರು, ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿ ಭಾರಿ ಅವಘಡವನ್ನು ತಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಅಪರಿಚಿತರ ದುಷ್ಕರ್ಮಿಗಳು ಎರಡು ಫಿಶ್‌ಪ್ಲೇಟ್‌ಗಳನ್ನು ತೆಗೆದಿದ್ದರು. ಸುಮಾರು 40–50 ಬೋಲ್ಟ್‌ಗಳನ್ನು ಸಡಿಲಗೊಳಿಸಿದ್ದರು' ಎಂದು ಸೂರತ್ (ಗ್ರಾಮಾಂತರ) ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹಿತೇಶ್ ಜೊಯ್ಸಾರ್ ತಿಳಿಸಿದ್ದಾರೆ.
'ರೈಲ್ವೆ ಎಂಜಿನಿಯರ್‌ಗಳು ಮತ್ತು ಇತರ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಹಳಿ ದುರಸ್ತಿ ಮಾಡಿದ್ದಾರೆ. ನಂತರ ರೈಲು ಸಂಚಾರನ್ನು ಪುನರಾರಂಭಿಸಲಾಗಿದೆ' ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಆರ್.ಆರ್.ಸರ್ವೈಯಾ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಾಗಿದ್ದು, ರೈಲ್ವೆ ಇಲಾಖೆ ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ತನಿಖೆ ಆರಂಭಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಕಿಮ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಿ.ಎಚ್. ಜಡೇಜ, 'ರೈಲನ್ನು ಹಳಿ ತಪ್ಪಿಸಲು ಇಂತಹ ಪ್ರಯತ್ನ ಮಾಡಲಾಗಿದೆ. ಸಿಬ್ಬಂದಿಯ ಜಾಗರೂಕತೆಯಿಂದಾಗಿ ದುರಂತ ತಪ್ಪಿದೆ' ಎಂದಿದ್ದಾರೆ.