ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರುತ್ಯ ಮುಂಗಾರಿನ ಅಬ್ಬರ; ಅಸ್ಸಾಂನಲ್ಲಿ ಪ್ರವಾಹ: 3.5 ಲಕ್ಷ ಜನ ಬಾಧಿತ

ಭೂಕುಸಿತ, ಧರೆಗುರುಳಿದ ಮರ–ಬಂಡೆಗಳು
Published 1 ಜೂನ್ 2024, 13:40 IST
Last Updated 1 ಜೂನ್ 2024, 13:40 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡಿದ್ದು, 11 ಜಿಲ್ಲೆಗಳ 3.5 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

‘ರೀಮಲ್’ ಚಂಡಮಾರುತದ ನಂತರ ಎಡೆಬಿಡದೆ ಸುರಿಯುತ್ತಿರುವ ವರ್ಷಧಾರೆಯಿಂದ, ರಾಜ್ಯದ ಹಲವು ಭಾಗಗಳಲ್ಲಿ ರಸ್ತೆ ಮತ್ತು ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.

ಕಛಾರ್ ಜಿಲ್ಲೆಯಲ್ಲಿ ಹೆಚ್ಚು ಹಾನಿಯಾಗಿದೆ. ಪ್ರತಿಕೂಲ ಹವಾಮಾನದಿಂದ ಶನಿವಾರ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. ಸೆಮಿಸ್ಟರ್ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಕರ್ಬೀ ಆಂಗ್‌ಲೋಂಗ್‌, ಧೇಮಾಜಿ, ಹೊಜೈ, ಕಛಾರ್, ಕರೀಂಗಂಜ್, ದಿಬ್ರುಗಡ, ನಾಗಾಂವ್, ಹೈಲಕಂಡಿ, ಗೋಲಾಘಾಟ್, ಪಶ್ಚಿಮ ಕರ್ಬೀ ಆಂಗ್‌ಲೋಂಗ್‌ ಮತ್ತು ದೀಮಾ ಹಸಾಒ ಜಿಲ್ಲೆಗಳಲ್ಲಿ 3.5 ಲಕ್ಷ ಜನರು ಬಾಧಿತರಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.

ಅಂದಾಜು 30 ಸಾವಿರ ಜನರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಕಾಛಾರ್ ಜಿಲ್ಲೆಯಲ್ಲಿ 1,19,997 ಜನರು, ನಾಗಾಂವ್‌ನಲ್ಲಿ 78,756, ಹೊಜೈನಲ್ಲಿ 77,030 ಹಾಗೂ ಕರೀಂಗಂಜ್‌ ಜಿಲ್ಲೆಯಲ್ಲಿ 52,684 ಮಂದಿ ಬಾಧಿತರಾಗಿದ್ದಾರೆ.

ಬರಾಕ್ ಕಣಿವೆ ಮತ್ತು ದೀಮಾ ಹಸಾಒ ಜಿಲ್ಲೆಯಲ್ಲಿ ರೈಲು–ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ನಿಗದಿತ ಅವಧಿಗೂ ಮುನ್ನವೇ ನೈರುತ್ಯ ಮುಂಗಾರು ಈಶಾನ್ಯ ರಾಜ್ಯಗಳನ್ನು ಪ್ರವೇಶಿಸಿದೆ. e.

ತೀವ್ರಗೊಂಡ ಮುಂಗಾರು: ಕೇರಳದಲ್ಲಿ ರೆಡ್ ಅಲರ್ಟ್

ತಿರುವನಂತಪುರ (ಪಿಟಿಐ): ಕೇರಳಕ್ಕೆ ನೈರುತ್ಯ ಮುಂಗಾರು ಪ್ರವೇಶಿಸಿದ ಎರಡು ದಿನಗಳ ಬಳಿಕ ಬಿರುಸುಗೊಂಡಿದ್ದು ರಾಜ್ಯದ ವಿವಿಧೆಡೆ ಭಾರಿ ಮಳೆಯಾಗಿದೆ. ಹಲವೆಡೆ ಮರಗಳು ಧರೆಗುರುಳಿವೆ. ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ.

ಕೋಟಯಂ ಇಡುಕ್ಕಿ ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯು ವ್ಯಾಪಕ ಹಾನಿಯನ್ನುಂಟು ಮಾಡಿದೆ. ತ್ರಿಶ್ಶೂರ್ ಜಿಲ್ಲೆಯಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ತ್ರಿಶ್ಶೂರ್ ಮಲಪ್ಪುರಂ ಕೋಯಿಕ್ಕೋಡ್‌ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ. ಇಡುಕ್ಕಿ ಪಾಲಕ್ಕಾಡ್‌ ವಯನಾಡ್‌ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದರೆ ಆರು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಣೆಯಾಗಿದೆ.

ಇಡುಕ್ಕಿ ಜಿಲ್ಲೆಯ ಪೂಚಪ್ರಾ ಕೋಲಪ್ರಾ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ಭೂಕುಸಿತವಾಗಿದೆ. ಹಲವು ಮನೆಗಳು ವಾಹನಗಳು ಜಖಂಗೊಂಡಿವೆ. ಮರಗಳು ಧರೆಗುರುಳಿವೆ. ಬಂಡೆಗಳು ಬೆಟ್ಟದಿಂದ ಉರುಳಿ ಬಿದ್ದಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಬೆಳೆಗಳು ನಾಶವಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿದ್ದ ಕುಟುಂಬವೊಂದರ ಮನೆಯ ಮೇಲೆ ಬಂಡೆಗಳು ಉರುಳಿವೆ. ಮಣ್ಣು ಕುಸಿತದ ಭೀತಿಯಿಂದಾಗಿ ತೋಡುಪುಜಾ–ಹುಲಿಯಾನ್ಮಲ ರಾಜ್ಯ ಹೆದ್ದಾರಿಯಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇಡುಕ್ಕಿಯ ಮಲಂಕರ ಅಣೆಕಟ್ಟೆಯ ಐದು ಗೇಟ್‌ಗಳನ್ನು ಎತ್ತರಿಸಲಾಗಿದೆ. ನದಿ ತಟದಲ್ಲಿ ವಾಸಿಸುವವರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ಕೋಟಯಂ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆಯಿಂದಲೂ ಮಳೆ ಸುರಿದಿದೆ. ಸಂಚಾರ ಅಸ್ತವ್ಯಸ್ತಗೊಂಡಿದೆ. ಶುಕ್ರವಾರ ರಾತ್ರಿ ವಡವತ್ತೂರು ಪ್ರದೇಶದಲ್ಲಿ 10 ಸೆಂ.ಮೀ. ಮಳೆಯಾಗಿದ್ದರೆ ಕೋಟಯಂನಲ್ಲಿ 9.99 ಸೆಂ.ಮೀ. ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಚ್ಚಿಯಲ್ಲಿ ಸಾಧಾರಣ ಹಾಗೂ ಎರ್ನಾಕುಲಂನ ಆಲುವಾ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಭಾರಿ ಮಳೆಯಾಗಿದೆ. ತ್ರಿಶ್ಶೂರ್ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆಯಿಂದ ಮಳೆ ತೀವ್ರಗೊಂಡಿದೆ. ರೈಲ್ವೆ ನಿಲ್ದಾಣ ಬಸ್ ನಿಲ್ದಾಣಗಳಲ್ಲಿ ಜನರು ಸಿಕ್ಕಿಹಾಕಿಕೊಂಡಿದ್ದಾರೆ. ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಮಿಜೋರಾಂ: ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 29ಕ್ಕೆ ಏರಿಕೆ

ಐಜ್ವಾಲ್‌: ಮಿಜೋರಾಂನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 29ಕ್ಕೆ ಏರಿದೆ. ಕೊಲಾಸಿಬ್ ಜಿಲ್ಲೆಯ ತಲಾವಂಗ ನದಿಯಲ್ಲಿ 34 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಜ್ವಾಲ್ ಜಿಲ್ಲೆಯ ಐಬಾಕ್ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದ ಭೂಕುಸಿತದಲ್ಲಿ ವನ್ಲಾಲ್ರುವಾಲಿ ಎಂಬಾಕೆ ಪತಿಯೊಂದಿಗೆ ನಾಪತ್ತೆಯಾಗಿದ್ದರು. ಕೊಲಾಸಿಬ್ ಜಿಲ್ಲೆಯ ಹೊರ್ಟೋಕಿ ಗ್ರಾಮದ ಬಳಿ ಈಕೆಯ ಶವ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ನಾಪತ್ತೆಯಾಗಿರುವ ಇತರ ಐವರಿಗಾಗಿ ಹುಡುಕಾಟ ನಡೆದಿದೆ. ಮೃತಪಟ್ಟವರ ಕುಟುಂಬ ವರ್ಗದವರಿಗೆ ತಲಾ ₹4 ಲಕ್ಷ ನೀಡುವುದಾಗಿ ಮಿಜೋರಾಂ ಮುಖ್ಯಮಂತ್ರಿ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT