ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಸ್ಸಾಂನಲ್ಲಿ ಪ್ರವಾಹ ಸ್ಥಿತಿ ಗಂಭೀರ: 1 ಲಕ್ಷಕ್ಕೂ ಹೆಚ್ಚು ಜನ ಸಂಕಷ್ಟದಲ್ಲಿ

Published 23 ಜೂನ್ 2024, 6:24 IST
Last Updated 23 ಜೂನ್ 2024, 6:24 IST
ಅಕ್ಷರ ಗಾತ್ರ

ಗುವಾಹಟಿ: ‘ಅಸ್ಸಾಂನಲ್ಲಿ ಭಾನುವಾರವೂ ಪ್ರವಾಹ ಪರಿಸ್ಥಿತಿ ಗಂಭೀರ ಸ್ವರೂಪದಲ್ಲಿಯೇ ಮುಂದುವರಿದಿದ್ದು, ರಾಜ್ಯದ 10 ಜಿಲ್ಲೆಗಳ 1.17 ಲಕ್ಷ ಮಂದಿ ಸಂತ್ರಸ್ತರಾಗಿದ್ದಾರೆ’ ಎಂದು ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

‘ರಾಜ್ಯದ ಕಂದಾಯ ವಿಭಾಗದ 27 ವಲಯಗಳಲ್ಲಿ 968 ಗ್ರಾಮಗಳು ಈಗಲೂ ಜಲಾವೃತವಾಗಿವೆ’ ಎಂದು ‘ಎಕ್ಸ್‌’ ಮೂಲಕ ಮಾಹಿತಿ ನೀಡಿದ್ದಾರೆ.

‘ಬರಾಕ್‌ ಕಣಿವೆಯ ಕುಶಿಯಾರ ನದಿಯು ಕರೀಂಗಂಜ್‌ನಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 134 ನಿರಾಶ್ರಿತ ಶಿಬಿರಗಳನ್ನು ತೆರೆದಿದ್ದು, 94 ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ 17,661 ಮಂದಿ ಆಶ್ರಯ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು. 

‘ಶನಿವಾರದ ವೇಳೆಗೆ ಪ್ರವಾಹ ಪರಿಸ್ಥಿತಿ ಸುಧಾರಿಸಿದ್ದು, ಸಂತ್ರಸ್ತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಮತ್ತೆ ಇಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ’ ಎಂದು ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ತಿಳಿಸಿದೆ.

3,995 ಹೆಕ್ಟೇರ್‌ನ ಬೆಳೆಯೂ ಈಗಾಗಲೇ ನೀರಿನಲ್ಲಿ ಮುಳುಗಿದ್ದು, 47,795 ಕೋಳಿ ಸೇರಿದಂತೆ 2.20 ಲಕ್ಷ ಜಾನುವಾರುಗಳು  ಸಂಕಷ್ಟಕ್ಕೆ ಸಿಲುಕಿದೆ.

ಪ್ರವಾಹದಿಂದ ಮೂಲ ಸೌಕರ್ಯಕ್ಕೂ ಹಾನಿಯುಂಟಾಗಿದ್ದು, ರಾಜ್ಯದ ವಿವಿಧೆಡೆ ಮನೆ, ಕೊಟ್ಟಿಗೆ, ರಸ್ತೆ ಹಾಗೂ ಸೇತುವೆಗಳಿಗೂ ಹಾನಿ ಉಂಟಾಗಿದೆ ಎಂದು ಎಎಸ್‌ಡಿಎಂಎ ತಿಳಿಸಿದೆ.

ಪ್ರವಾಹ ನಿಯಂತ್ರಣಕ್ಕೆ ಶಾ ಹಲವು ಸೂಚನೆ

ನವದೆಹಲಿ: ‘ಪ್ರವಾಹ ನಿಯಂತ್ರಿಸಿ ಕೃಷಿ ನೀರಾವರಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬ್ರಹ್ಮಪುತ್ರ ನದಿ ನೀರನ್ನು ತಿರುಗಿಸಿ ದೇಶದ ಈಶಾನ್ಯ ರಾಜ್ಯಗಳಲ್ಲಿ 50 ದೊಡ್ಡದಾದ ಕೊಳಗಳನ್ನು ನಿರ್ಮಾಣ ಮಾಡಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೂಚನೆ ನೀಡಿದ್ದಾರೆ.

ದೇಶದ ವಿವಿಧೆಡೆ ಉಂಟಾದ ಪ್ರವಾಹ ಎದುರಿಸುವ ನಿಟ್ಟಿನಲ್ಲಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಕೆಲವು ಸಲಹೆಗಳನ್ನು ನೀಡಿದರು.

ಕಾಳ್ಗಿಚ್ಚು ಎದುರಿಸಲು ವಿವರವಾದ ಕೈಪಿಡಿ ತಯಾರಿಸಲು ವಿಪತ್ತು ನಿರ್ವಹಣಾ ಪಡೆಗೆ ತಿಳಿಸಿದ ಗೃಹ ಸಚಿವ ಶಾ ‘ಗುಡುಗು ಮಿಂಚಿನ ದಾಳಿಗೆ ಸಂಬಂಧಿಸಿದಂತೆ ಹವಮಾನ ಇಲಾಖೆ ಪ್ರಕಟಿಸುವ ಎಚ್ಚರಿಕೆ ಸಂದೇಶಗಳನ್ನು ಎಸ್‌ಎಂಎಸ್‌ ಟಿ.ವಿ ರೇಡಿಯೊ ಮೂಲಕ ಸಾರ್ವಜನಿಕರಿಗೆ ತ್ವರಿತವಾಗಿ ಮಾಹಿತಿ ತಲುಪಿಸಬೇಕು’ ಎಂದು ಸಭೆಯಲ್ಲಿ ತಿಳಿಸಿದರು.

ಜಲಶಕ್ತಿ ಸಚಿವ ಸಿ.ಆರ್‌.ಪಾಟೀಲ್‌ ರಾಜ್ಯ ಸಚಿವ ನಿತ್ಯಾನಂದ್ ರಾಯ್‌ ಗೃಹ ಜಲಸಂಪನ್ಮೂಲ ನದಿ ಅಭಿವೃದ್ಧಿ ಭೂ ವಿಜ್ಞಾನ ಪರಿಸರ ರಸ್ತೆ ಸಚಿವಾಲಯಗಳ ಕಾರ್ಯದರ್ಶಿ ರೈಲ್ವೆ ಬೋರ್ಡ್‌ ಅಧ್ಯಕ್ಷೆ ಹಾಗೂ ಎನ್‌ಡಿಎಂಎ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಅವರು ನೀಡಿದ ಸಲಹೆಗಳು ಹೀಗಿವೆ:

* ಪ್ರವಾಹ ನೀರಿನ ಗರಿಷ್ಠ ಬಳಕೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಉಪಗ್ರಹ ಚಿತ್ರ ಆಧರಿಸಿ ಕ್ರಮ ತೆಗೆದುಕೊಳ್ಳಬೇಕು.

*ಮಳೆ ಪ್ರವಾಹ ಸ್ಥಿತಿಗತಿ ನಿರ್ವಹಿಸಲು ಹವಾಮಾನ ಮುನ್ಸೂಚನಾ ವ್ಯವಸ್ಥೆ (ಐಎಂಡಿ) ಸುಧಾರಣೆಗೆ ಒತ್ತು ನೀಡಬೇಕು.

* ಬ್ರಹ್ಮಪುತ್ರ ನದಿಯ ಸಂಗ್ರಹಿಸಿದ ನೀರನ್ನು ಕೃಷಿ ನೀರಾವರಿ ಹಾಗೂ ಪ್ರವಾಸೋದ್ಯಮ ಚಟುವಟಿಕೆಗೆ ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಪ್ರವಾಹ ನಿಯಂತ್ರಿಸಬಹುದು. ಇದರಿಂದ ಸ್ಥಳೀಯ ಆರ್ಥಿಕತೆಗೂ ನೆರವಾಗುತ್ತದೆ.

*ಬ್ರಹ್ಮಪುತ್ರ ನದಿಯಲ್ಲಿ ಮಳೆಗಾಲದಲ್ಲಿ ಉಂಟಾಗುವ ಪ್ರವಾಹದಿಂದ ಪ್ರತೀ ವರ್ಷ ಸಾವಿರಾರು ಹೆಕ್ಟೇರ್‌ ಬೆಳೆಹಾನಿಯ ಜೊತೆಗೆ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

*ಪ್ರವಾಹ ಪೀಡಿತ ಜಾಗಗಳಲ್ಲಿ ರಸ್ತೆ ನಿರ್ಮಾಣದ ಸಂದರ್ಭದಲ್ಲೇ ನೈಸರ್ಗಿಕ ಒಳಚರಂಡಿ ವಿನ್ಯಾಸಗಳನ್ನು ಯೋಜನೆಯ ಅವಿಭಾಜ್ಯ ಅಂಗದಂತೆ ರೂಪಿಸಬೇಕು.

*ದೇಶದ ಪ್ರಮುಖ ಅಣೆಕಟ್ಟುಗಳ ಗೇಟ್‌ಗಳನ್ನು ಸುಸ್ಥಿತಿಯಲ್ಲಿಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT