ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಮತಾ ಸರ್ಕಾರ ಉರುಳುವವರೆಗೆ ತಲೆ ಕೂದಲು ಬೆಳೆಸಲ್ಲ' ಎಂದಿದ್ದ ಕೈ ನಾಯಕ ಬಿಜೆಪಿಗೆ

Published 1 ಮಾರ್ಚ್ 2024, 5:04 IST
Last Updated 1 ಮಾರ್ಚ್ 2024, 5:04 IST
ಅಕ್ಷರ ಗಾತ್ರ

ಕೋಲ್ಕತ್ತ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿ ಇರುವವರೆಗೆ ತಲೆ ಕೂದಲು ಬೆಳೆಸುವುದಿಲ್ಲ ಎಂದು ಶಪಥಗೈದಿದ್ದ ಕಾಂಗ್ರೆಸ್ ಮಾಜಿ ನಾಯಕ ಕೌಸ್ತವ್ ಬಾಗ್ಚಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್‌ ಪಕ್ಷಕ್ಕೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ವಿರುದ್ಧ ಹೋರಾಡುವ ಮನಸ್ಸಿಲ್ಲ ಎಂದು ಆರೋಪಿಸಿರುವ ಅವರು, ಮಮತಾ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಬುಧವಾರವಷ್ಟೇ ಕಾಂಗ್ರೆಸ್‌ನಿಂದ ಹೊರಬಂದಿದ್ದ ಕೌಸ್ತವ್‌, ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‌ಗೆ ವಿದಾಯ ಹೇಳುವ ವೇಳೆ ಅವರು ಪಕ್ಷದ ಸಂಘಟನೆಯಲ್ಲಿ ತಮಗೆ 'ಸೂಕ್ತ ಗೌರವ ಸಿಗಲಿಲ್ಲ' ಎಂದು ಆರೋಪಿಸಿದ್ದರು.

ಸಿಎಂ ಮಮತಾ ವಿರುದ್ಧ ಕಳೆದ ವರ್ಷ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಕೌಸ್ತವ್‌ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು. ನಂತರ ಪಕ್ಷ ತೊರೆಯಲು ನಿರ್ಧರಿಸಿದ್ದ ಅವರು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯ ಉಸ್ತುವಾರಿ ಗುಲಾಮ್‌ ಅಹ್ಮದ್‌ ಮಿರ್‌ ಮತ್ತು ರಾಜ್ಯ ಘಟಕದ ಅಧ್ಯಕ್ಷ ಅಧೀರ್ ರಂಜನ್‌ ಚೌಧರಿ ಅವರಿಗೆ ರಾಜೀನಾಮೆ ಕಳುಹಿಸಿದ್ದರು.

2023ರ ಮಾರ್ಚ್‌ನಲ್ಲಿ ಜಾಮೀನಿನ ಮೇಲೆ ಹೊರಬಂದಾಗ ತಲೆ ಬೋಳಿಸಿಕೊಂಡಿದ್ದ ಅವರು, ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಪತನಗೊಳ್ಳುವವರೆಗೆ ಕೂದಲು ಬೆಳೆಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.

ಟಿಎಂಸಿಯ ಕಟು ಟೀಕಾಕಾರರಾಗಿ ಗುರುತಿಸಿಕೊಂಡಿದ್ದ ಕೌಸ್ತವ್‌, ಕಾಂಗ್ರೆಸ್‌ ಪಕ್ಷವು ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದಲ್ಲಿ ಟಿಎಂಸಿಯೊಂದಿಗೆ ಕಾಣಿಸಿಕೊಳ್ಳುವುದನ್ನು ವಿರೋಧಿಸಿದ್ದರು.

'ಕೌಸ್ತವ್‌ ಬಾಗ್ಚಿ ಅವರನ್ನು ಪಕ್ಷಕ್ಕೆ ಸ್ವಾಗತಿಸಲು ಸಂತಸವಾಗುತ್ತಿದೆ' ಎಂದು ಬಿಜೆಪಿ ನಾಯಕ ಹಾಗೂ ಮಮತಾ ಬ್ಯಾನರ್ಜಿ ಅವರ ಮಾಜಿ ಆಪ್ತ ಸುವೆಂದು ಅಧಿಕಾರಿ ಗುರುವಾರ ಹೇಳಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್ ಅವರೂ ಉಪಸ್ಥಿತರಿದ್ದರು.

ಕೌಸ್ತವ್ ಬಿಜೆಪಿ ಸೇರ್ಪಡೆ ಬಗ್ಗೆ ತಲೆಕೆಡಿಸಿಕೊಳ್ಳದ ಕಾಂಗ್ರೆಸ್
ಕೌಸ್ತವ್‌ ಬಾಗ್ಚಿ ಅವರು ಬಿಜೆಪಿ ಸೇರ್ಪಡೆಯಾಗಿರುವುದಕ್ಕೆ ಕಾಂಗ್ರೆಸ್‌ ಹಾಗೂ ಆಡಳಿತಾರೂಢ ಟಿಎಂಸಿ ಹೆಚ್ಚಿನ ಪ್ರಾಶಸ್ತ್ಯ ನೀಡಿಲ್ಲ.

'ಹೊರಗೆ ಹೋಗಲೇಬೇಕು ಎಂದು ನಿರ್ಧರಿಸಿದವರ ವಿಚಾರದಲ್ಲಿ ನಾವೇನು ಮಾಡಲು ಸಾಧ್ಯ. ಅದು ಅವರ ವೈಯಕ್ತಿಕ ತೀರ್ಮಾನ' ಎಂದು ಅಧೀರ್ ರಂಜನ್‌ ಚೌಧರಿ ಹೇಳಿದ್ದಾರೆ.

ರಾಜ್ಯ ಶಿಕ್ಷಣ ಸಚಿವ ಹಾಗೂ ಟಿಎಂಸಿ ನಾಯಕ ಬ್ರತ್ಯ ಬಸು, 'ಕೌಸ್ತವ್‌ ಬಾಗ್ಚಿ ಯಾರೆಂಬುದೇ ನಮಗೆ ಗೊತ್ತಿಲ್ಲ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT