ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಮತ್ತು ಕಾಶ್ಮೀರ: ಯಾವಾಗ ಬೇಕಾದರೂ ಚುನಾವಣೆ ನಡೆಸಲು ಸಿದ್ಧ– ಕೇಂದ್ರ ಸರ್ಕಾರ

Published 31 ಆಗಸ್ಟ್ 2023, 11:21 IST
Last Updated 31 ಆಗಸ್ಟ್ 2023, 11:21 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ರಾಜ್ಯದ ಸ್ಥಾನ ಮರುಸ್ಥಾಪಿಸಲು ಕೆಲ ಸಮಯ ಹಿಡಿಯಲಿದೆ. ಆದರೆ, ಯಾವಾಗ ಬೇಕಾದರೂ ಚುನಾವಣೆ ನಡೆಯಲು ಸಿದ್ಧವಿದ್ದೇವೆ ಎಂದು ಕೇಂದ್ರ ಸರ್ಕಾರವು, ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಸಂವಿಧಾನದ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರ ಅಧ್ಯಕ್ಷತೆಯ ಸಾಂವಿಧಾನಿಕ ಪೀಠವು ಗುರುವಾರ ನಡೆಸಿತು.

2018ರ ಜೂನ್‌ನಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾಯಿತ ಸರ್ಕಾರ ಅಸ್ತಿತ್ವದಲ್ಲಿಲ್ಲ. ಹಾಗಾಗಿ, ಎರಡು ದಿನದ ಹಿಂದೆ ನಡೆದ ವಿಚಾರಣೆ ವೇಳೆ ‘ಚುನಾವಣಾ ಪ್ರಜಾಪ್ರಭುತ್ವ’ದ ಪ್ರಾಮುಖ್ಯತೆ ಕುರಿತು ನ್ಯಾಯಪೀಠವು ಒತ್ತಿ ಹೇಳಿತ್ತು. ‘ಮತ್ತೆ ಯಾವಾಗ ರಾಜ್ಯದ ಸ್ಥಾನ ಮರುಸ್ಥಾಪಿಸುತ್ತೀರಿ’ ಎಂದು ಪ್ರಶ್ನಿಸಿದ್ದ ಪೀಠವು, ‘ಇದಕ್ಕೆ ಕಾಲಮಿತಿ ನಿಗದಿಪಡಿಸಬೇಕು’ ಎಂದು ಸೂಚಿಸಿತ್ತು.

ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ‘ಈಗಾಗಲೇ, ನಾವು ಇದೇ ಹಾದಿಯಲ್ಲಿ ಸಾಗುತ್ತಿದ್ದೇವೆ. ಆದರೆ, ಇದಕ್ಕೆ ನಿರ್ದಿಷ್ಟ ಕಾಲಮಿತಿಯ ಚೌಕಟ್ಟು ನಿಗದಿಪಡಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠಕ್ಕೆ ಅರುಹಿದರು.

‘ಅಲ್ಲಿ ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿಗೆ ಒತ್ತು ನೀಡಿದ್ದೇವೆ. ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗಿದ್ದು, ಇಲ್ಲಿಯವರೆಗೆ 1.88 ಕೋಟಿ ಭೇಟಿ ನೀಡಿದ್ದಾರೆ. ಇದು ರಾಜ್ಯದ ಸ್ಥಾನ ಮರುಸ್ಥಾಪನೆಯ ಭಾಗವೂ ಆಗಿದೆ’ ಎಂದು ಸಮರ್ಥಿಸಿಕೊಂಡರು.

ಸಿಜೆಐ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್, ಸಂಜೀವ್‌ ಖನ್ನಾ, ಬಿ.ಆರ್‌. ಗವಾಯಿ ಮತ್ತು ಸೂರ್ಯ ಕಾಂತ್‌ ಅವರಿದ್ದ ನ್ಯಾಯಪೀಠವು, ಕೇಂದ್ರದ ಈ ಹೇಳಿಕೆಯನ್ನು ದಾಖಲಿಸಿಕೊಂಡಿತು.

‘ಆದರೆ, ವಿಶೇಷ ಸ್ಥಾನಮಾನ ರದ್ದತಿಯ ಸಾಂವಿಧಾನಿಕ ಸಿಂಧುತ್ವವನ್ನು ಸಾಂವಿಧಾನಿಕ ನೆಲೆಗಟ್ಟಿನಲ್ಲಿಯೇ ಕೋರ್ಟ್‌ ನಿರ್ಧರಿಸುತ್ತದೆ. ಚುನಾವಣೆ ಅಥವಾ ರಾಜ್ಯದ ಸ್ಥಾನ ಮರುಸ್ಥಾಪನೆ ವಿಷಯವು ಈ ನಿರ್ಣಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಸ್ಪಷ್ಟಪಡಿಸಿತು.

ಆಯೋಗದ ಹೆಗಲಿಗೆ ಚುನಾವಣೆ ಹೊಣೆ:

‘ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗವು ಚುನಾವಣೆಗೆ ದಿನಾಂಕ ನಿಗದಿಪಡಿಸಬೇಕಿದೆ’ ಎಂದು ಮೆಹ್ತಾ ತಿಳಿಸಿದರು.

ಈಗಾಗಲೇ, ಜಿಲ್ಲಾ ಅಭಿವೃದ್ಧಿ ಕೌನ್ಸಿಲ್‌ ಚುನಾವಣೆ ಮುಗಿದಿದೆ. ಶೀಘ್ರವೇ, ಪಂಚಾಯಿತಿ ಚುನಾವಣೆ ನಡೆಯಲಿದೆ ಎಂದ ಅವರು, ಲೇಹ್‌ ಹಿಲ್ ಅಭಿವೃದ್ಧಿ ಕೌನ್ಸಿಲ್‌ ಚುನಾವಣೆಯೂ ಪೂರ್ಣಗೊಂಡಿದೆ. ಈ ತಿಂಗಳಿನಲ್ಲಿ ಕಾರ್ಗಿಲ್‌ನಲ್ಲಿ ಚುನಾವಣೆ ನಡೆಯಲಿದೆ’ ಎಂದು ವಿವರಿಸಿದರು.

‘ಪಂಚಾಯಿತಿ, ಮುನ್ಸಿಪಲ್‌ ಚುನಾವಣೆ ‍ಮುಗಿದ ಬಳಿಕ ವಿಧಾನಸಭೆಗೆ ಚುನಾವಣೆ ನಡೆಯಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT