ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ 20 ಶೃಂಗ: ಜಾಗತಿಕ ನಾಯಕರಿಗೆ ಭಾರತೀಯ ಖಾದ್ಯಗಳ ಪರಿಚಯ

Published : 3 ಸೆಪ್ಟೆಂಬರ್ 2023, 15:55 IST
Last Updated : 3 ಸೆಪ್ಟೆಂಬರ್ 2023, 15:55 IST
ಫಾಲೋ ಮಾಡಿ
Comments

ನವದೆಹಲಿ: ಮುಂದಿನ ವಾರ ಇಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಅನೇಕ ಜಾಗತಿಕ ನಾಯಕರು ಭಾಗವಹಿಸಲಿದ್ದು, ಭಾರತದ ವಿಶೇಷ ಖಾದ್ಯಗಳ ರುಚಿಯನ್ನು ಸವಿಯಲಿದ್ದಾರೆ. 

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಜಾಗತಿಕ ನಾಯಕರಿಗೆ ಸಿರಿಧಾನ್ಯಗಳಿಂದ ತಯಾರಾಗುವ ವಿಶೇಷ ತಿನಿಸುಗಳನ್ನು ನೀಡುವ ಮೂಲಕ ಪೌಷ್ಟಿಕಾಂಶಯುಕ್ತ ಧಾನ್ಯಗಳ ಮಹತ್ವವನ್ನು ತಿಳಿಸಲು ನಿರ್ಧರಿಸಲಾಗಿದೆ.

ಇದೇ ಸಂದರ್ಭದಲ್ಲಿ ಭಾರತ ಮಂಟಪ ಸಂಕೀರ್ಣದಲ್ಲಿ ಜಿ20 ಉದ್ಯಾನ ಸ್ಥಾಪಿಸುವ ಉದ್ದೇಶದಿಂದ ಜಾಗತಿಕ ನಾಯಕರು ತಮ್ಮ ದೇಶದ ರಾಷ್ಟ್ರೀಯ ಸಸಿಗಳನ್ನು ನೆಡಲಿದ್ದಾರೆ.

‘1000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಜಾಗತಿಕ ನಾಯಕರ ವಸತಿಗಾಗಿ ಕೇಂದ್ರ ದೆಹಲಿ, ಗುರುಗ್ರಾಮ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿನ ವಿವಿಐಪಿ ಹೋಟೆಲ್‌ಗಳನ್ನು ಕಾಯ್ದಿರಿಸಲಾಗಿದೆ’ ಎಂದು ಭಾರತ ಜಿ 20 ವಿಶೇಷ ಕಾರ್ಯದರ್ಶಿ ಮುಕ್ತೇಶ್‌ ಪರದೇಶಿ ತಿಳಿಸಿದ್ದಾರೆ.

ಭಾರತ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದು, ಸೆಪ್ಟೆಂಬರ್ 9–10ರಂದು ನವದೆಹಲಿಯಲ್ಲಿ ಶೃಂಗಸಭೆ ನಡೆಯಲಿದೆ. 

ಪೊಲೀಸರಿಂದ ತಾಲೀಮು

ಜಿ 20 ಶೃಂಗದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಭಾನುವಾರ  ಸಮವಸ್ತ್ರ ಧರಿಸಿ ತಾಲೀಮು ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದರು.

ಮೊದಲ ತಾಲೀಮು ಬೆಳಿಗ್ಗೆ 8–9 ಗಂಟೆ ವರೆಗೆ ಮತ್ತು ಎರಡನೇ ತಾಲೀಮು 9.30–10 ಗಂಟೆ ವರೆಗೆ ಹಾಗೂ ಕೊನೆಯ ತಾಲೀಮು  ಮಧ್ಯಾಹ್ನ 12.30ರಿಂದ ಸಂಜೆ 4 ಗಂಟೆಯ ವರೆಗೆ ನಡೆಯಿತು ಎಂದು ತಿಳಿಸಿದರು.  ಶನಿವಾರವೂ ಇಂಥದ್ದೇ ತಾಲೀಮು ನಡೆಸಲಾಗಿತ್ತು.

ವಿವಿಧ ದೇಶಗಳ ಮುಖ್ಯಸ್ಥರ ಕುಟುಂಬಕ್ಕೆ ಆತಿಥ್ಯ

ಶೃಂಗಕ್ಕೆ ಆಗಮಿಸುವ ವಿವಿಧ ದೇಶಗಳ ಮುಖ್ಯಸ್ಥರು ಮತ್ತು ಅವರ ಪತ್ನಿಗೆ ಐತಿಹಾಸಿಕ ಜೈಪುರ ಹೌಸ್‌ನಲ್ಲಿ ವಿಶೇಷ ಭೋಜನ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಖಾದ್ಯಗಳ ಪಟ್ಟಿಯಲ್ಲಿ ಸಿರಿಧಾನ್ಯಗಳಿಂದ ತಯಾರಾಗುವ ಭಕ್ಷ್ಯಗಳೂ ಇರಲಿವೆ ಎಂದು ತಿಳಿಸಿವೆ.

ಕೇಂದ್ರದಲ್ಲಿ ಗೋಪುರ ಇರುವ ಬ್ರಿಟಿಷ್‌ ಕಾಲದ ಚಿಟ್ಟೆಯಾಕಾರದ ಕಟ್ಟದ ಜೈಪುರ ಹೌಸ್‌ ಅನ್ನು ಚಾರ್ಲ್ಸ್‌ ಜಿ ಬ್ಲೋಮ್‌ಫೀಲ್ಡ್‌ ಮತ್ತು ಅವರ ಸಹೋದರ ಫ್ರಾನ್ಸಿಸ್‌ ಬಿ ಬ್ಲೋಮ್‌ಫೀಲ್ಡ್‌ ವಿನ್ಯಾಸ ಮಾಡಿದ್ದಾರೆ.

ಎನ್‌ಜಿಎಂಎಗೆ ಸಿಐಎಸ್‌ಎಫ್‌ ಭದ್ರತೆ

ಶೃಂಗಕ್ಕೆ ಆಗಮಿಸುವ ಗೌರವಾನ್ವಿತರಿಗಾಗಿ ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್ ಆರ್ಟ್‌ನಲ್ಲಿ (ಎನ್‌ಜಿಎಂಎ) ವಿಶೇಷ ಕಾರ್ಯಕ್ರಮ ಆಯೋಜನೆಗೊಂಡಿದೆ. ಹೀಗಾಗಿ ಈ ಕೂಡಲೇ ಎನ್‌ಜಿಎಂಎನಲ್ಲಿ ಕೇಂದ್ರೀಯ ಔದ್ಯೋಗಿಕ ಸುರಕ್ಷಾ ಪಡೆಯನ್ನು (ಸಿಐಎಸ್‌ಎಫ್‌) ನಿಯೋಜಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸದ್ಯ ಖಾಸಗಿ ಭದ್ರತಾ ಸಿಬ್ಬಂದಿ ಇಲ್ಲಿ ಪಹರೆ ಕಾಯುತ್ತಾರೆ.

ಮೆಟ್ರೊ ಸ್ಮಾರ್ಟ್‌ ಕಾರ್ಡ್ ವಿತರಣೆ

ಪ್ರಯಾಣಿಕರ ಸಂಖ್ಯೆ ಹೆಚ್ಚುವ ನಿರೀಕ್ಷೆಯಲ್ಲಿ ದೆಹಲಿ ಮೆಟ್ರೊ ಸೆಪ್ಟೆಂಬರ್‌ 4ರಿಂದ 13ರ ವರೆಗೆ ‘ಪ್ರವಾಸಿ ಸ್ಮಾರ್ಟ್‌ ಕಾರ್ಡ್’ ವಿತರಿಸಲು ಮುಂದಾಗಿದೆ. 36 ಮೆಟ್ರೊ ಸ್ಟೇಷನ್‌ಗಳ ನಿಗದಿತ ಕೌಂಟರ್‌ಗಳಲ್ಲಿ ಈ ಕಾರ್ಡ್ ಲಭ್ಯವಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ದಿನ ಅಥವಾ ಮೂರು ದಿನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಎರಡು ಬಗೆಯ ಕಾರ್ಡ್‌ಗಳು ಲಭ್ಯವಿವೆ. ಒಂದು ದಿನದ ಕಾರ್ಡಿಗೆ ₹200 ಮತ್ತು ಮೂರು ದಿನಗಳ ಕಾರ್ಡಿಗೆ ₹500 ಶುಲ್ಕ ನಿಗದಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT